ಬರ್ಲಿನ್: ಎರಡನೇ ಮಹಾಯುದ್ಧದ ನಂತರ ಇದೇ ಮೊದಲ ಬಾರಿಗೆ ಜರ್ಮನಿಯಲ್ಲಿ (Germany) ತೀವ್ರ ಬಲಪಂಥೀಯ ಪಕ್ಷವೊಂದು ಪ್ರಾದೇಶಿಕ ಚುನಾವಣೆಯಲ್ಲಿ ದೊಡ್ಡ ಜಯ ಗಳಿಸಿದೆ.
ಸೆಪ್ಟೆಂಬರ್ 2026 ರಲ್ಲಿ ನಡೆದ ಜರ್ಮನಿಯ ಪೂರ್ವ ರಾಜ್ಯವಾದ ಸ್ಯಾಕ್ಸೋನಿ-ಅನ್ಹಾಲ್ಟ್ (Saxony-Anhalt) ಚುನಾವಣೆಯಲ್ಲಿ ಆಲ್ಟರ್ನೇಟಿವ್ ಫಾರ್ ಜರ್ಮನಿ (AfD) ಎಂಬ ತೀವ್ರ ಬಲಪಂಥೀಯ ಪಕ್ಷವು ಶೇ.44 ರಷ್ಟು ಮತಗಳನ್ನು ಪಡೆಯುವ ಮೂಲಕ ಐತಿಹಾಸಿಕ ಜಯ ದಾಖಲಿಸಿದೆ. 81 ವರ್ಷಗಳ ಬಳಿಕ ಬಲಪಂಥೀಯ ಪಕ್ಷಕ್ಕೆ ಜಯ ಸಿಕ್ಕಿರುವುದು ವಿಶ್ವಾದ್ಯಂತ ಸಂಚಲನ ಮೂಡಿಸಿದೆ.
ರಾಜ್ಯ ವಿಧಾನಸಭೆಯ ಒಟ್ಟು 83 ಸ್ಥಾನಗಳಲ್ಲಿ ಎಫ್‌ಡಿ ಪಕ್ಷವು 39 ಸ್ಥಾನಗಳನ್ನು ಗೆದ್ದುಕೊಂಡಿದೆ. ಇದು ಪ್ರಸ್ತುತ ಚಾನ್ಸಲರ್ ಫ್ರೆಡ್ರಿಕ್ ಮೆರ್ಜ್ ಅವರ ಕನ್ಸರ್ವೇಟಿವ್ ಕ್ರಿಶ್ಚಿಯನ್ ಡೆಮೋಕ್ರಾಟ್ಸ್ (CDU) ಪಕ್ಷಕ್ಕಿಂತ (ಶೇ. 17.2) ಶೇ.27 ರಷ್ಟು ಹೆಚ್ಚು ಮತಗಳನ್ನು ಪಡೆದಿದೆ.
ಸರ್ಕಾರ ರಚಿಸಲು ಕನಿಷ್ಠ 42 ಸ್ಥಾನಗಳ ಅಗತ್ಯವಿದೆ. AfD ಪಕ್ಷಕ್ಕೆ ಕೇವಲ 3 ಸ್ಥಾನಗಳ ಕೊರತೆ ಇರುವುದರಿಂದ ಅದಕ್ಕೆ ಸ್ವತಂತ್ರವಾಗಿ ಸರ್ಕಾರ ರಚಿಸಲು ಸಾಧ್ಯವಿಲ್ಲ.
ಜರ್ಮನಿಯ ಇತರ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳು AfD ಜೊತೆ ಕೈಜೋಡಿಸುವುದಿಲ್ಲ ಎಂಬ ಕಟ್ಟುನಿಟ್ಟಾದ ನಿಲುವನ್ನು ಹೊಂದಿವೆ. ಆದರೆ ಅಧಿಕಾರ ಹಿಡಿಯಲು ಇತರ ಪಕ್ಷದ ನಾಯಕರ ಬೆಂಬಲ ಪಡೆಯಲು AfD ಪ್ರಯತ್ನಿಸುತ್ತಿದೆ. ಇದನ್ನೂ ಓದಿ: ರಷ್ಯಾದಲ್ಲಿ ದೆಹಲಿ ಟೆಕ್ಕಿ ಬಂಧನ; ಪತಿ ಬಿಡುಗಡೆಗಾಗಿ ಮೋದಿಗೆ ವಿಡಿಯೋ ಮೂಲಕ ಪತ್ನಿ ಮನವಿ
German AfD Leader Alice Weidel:
Germany is de facto bankrupt. Germany is broke, and they are not telling you that.
At some point, you simply have to lay the cards on the table and put the numbers out there. The whole thing is no longer financially sustainable.
France is broke… pic.twitter.com/nJaYk9btDz
— Clash Report (@clashreport) September 7, 2026
ಜನರ ಮುಂದಿಟ್ಟ ಕೆಲವು ಭರವಸೆಗಳಿಂದ ಈ ಪಕ್ಷವು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಿದೆ. ಜರ್ಮನಿಗೆ ಬರುವ ವಿದೇಶಿಯರನ್ನು ತಡೆಯುವುದು ಮತ್ತು ಈಗಾಗಲೇ ಕಾನೂನುಬಾಹಿರವಾಗಿ ಇರುವವರನ್ನು ತಕ್ಷಣವೇ ಅವರ ದೇಶಗಳಿಗೆ ಮರಳಿ ಕಳುಹಿಸುತ್ತೇವೆ. ಜರ್ಮನಿಯು ಉಕ್ರೇನ್‌ಗೆ ನೀಡುತ್ತಿರುವ ಮಿಲಿಟರಿ ಸಹಾಯವನ್ನು ತಕ್ಷಣ ನಿಲ್ಲಿಸಬೇಕು ಮತ್ತು ರಷ್ಯಾ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಬೇಕು ಎಂಬುದು ಇವರ ನಿಲುವು. ಶಾಲೆಗಳಲ್ಲಿ ಆಧುನಿಕ ಲಿಂಗ ಸದ್ಧಾಂತ (LGBTQ+ ಮೌಲ್ಯಗಳು) ಅಥವಾ ಪ್ರಗತಿಪರ ವಿಚಾರಗಳನ್ನು ಬೋಧಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದೆ.
ಇತರ ಪಕ್ಷಗಳಿಗೆ ಆತಂಕ
ಜರ್ಮನಿಯ ರಾಜಕೀಯದಲ್ಲಿ ಫೈರ್‌ವಾಲ್ (Firewall) ಎಂಬ ಲಿಖಿತವಲ್ಲದ ನಿಯಮವಿದೆ. ಇದರ ಪ್ರಕಾರ ಯಾವುದೇ ಪ್ರಜಾಪ್ರಭುತ್ವ ಪಕ್ಷವು ತೀವ್ರ ಬಲಪಂಥೀಯ AfD ಜೊತೆ ಮೈತ್ರಿ ಮಾಡಿಕೊಳ್ಳಬಾರದು. ಆದರೆ ಈಗ ಸ್ಯಾಕ್ಸೋನಿ-ಅನ್ಹಾಲ್ಟ್ ರಾಜ್ಯದಲ್ಲಿ AfD ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದರಿಂದ, ಅದನ್ನು ಹೊರಗಿಟ್ಟು ಸರ್ಕಾರ ರಚಿಸುವುದು ಇತರ ಪಕ್ಷಗಳಿಗೆ ತುಂಬಾ ಕಷ್ಟವಾಗಿದೆ. ಒಂದು ವೇಳೆ ಇತರ ಸಣ್ಣ ಪಕ್ಷಗಳು ಒಟ್ಟಾಗಿ ಸರ್ಕಾರ ರಚಿಸಿದರೂ, ಅದು ಬಹಳ ದುರ್ಬಲವಾಗಿರುತ್ತದೆ ಮತ್ತು ಜನರ ಬೆಂಬಲ ಇರುವುದಿಲ್ಲ ಬಹಳ ಬೇಗ ಪತನಗೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಈ ರಾಜ್ಯದಲ್ಲಿ ಯಾರು ಸರ್ಕಾರ ರಚಿಸುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ. ಇದನ್ನೂ ಓದಿ: ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್‌ನಲ್ಲಿ ಸೆಕ್ಸ್ ಚಿತ್ರೋದ್ಯಮಕ್ಕೆ ಕಾನೂನು ಮಾನ್ಯತೆ!
ಜರ್ಮನಿಯು ಯುರೋಪಿನ ಅತ್ಯಂತ ಶ್ರೀಮಂತ ಮತ್ತು ಶಕ್ತಿಶಾಲಿ ದೇಶ. ಅಲ್ಲಿಯೇ ಬಲಪಂಥೀಯ ಪಕ್ಷ ಅಧಿಕಾರಕ್ಕೆ ಬಂದರೆ, ಅದು ಇಡೀ ಯುರೋಪಿಯನ್ ಒಕ್ಕೂಟದ ಮೇಲೆಯೇ ಪರಿಣಾಮ ಬೀರುವ ಸಾಧ್ಯತೆಯಿದೆ.
