– ಅಂದಾಜು 208 ಕೋಟಿ ರೂ ಆದಾಯ ಸಂಗ್ರಹದ ಗುರಿ
– 30 ಸಾವಿರ ಡ್ರೋನ್ ಖರೀದಿಗೆ ಚಿಂತನೆ
ಕೀವ್: ರಷ್ಯಾ(Russia) ವಿರುದ್ಧದ ಸುದೀರ್ಘ ಯುದ್ಧದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಉಕ್ರೇನ್(Ukraine) ಈಗ ಆದಾಯ ಸಂಗ್ರಹಕ್ಕೆ ಯಾರೂ ಊಹಿಸಿದ ಕ್ಷೇತ್ರದ ಮೇಲೆ ಕಣ್ಣಿಟ್ಟಿದೆ. ಈಗ ದೇಶದ ವಯಸ್ಕರ ಮನರಂಜನಾ ಉದ್ಯಮವನ್ನು (Pornography Industry) ಕಾನೂನುಬದ್ಧಗೊಳಿಸಿ ತೆರಿಗೆ(Tax) ಸಂಗ್ರಹಿಸಲು ಚಿಂತನೆ ನಡೆಸಿದೆ.
ಈ ಉದ್ಯಮವನ್ನು ಸಕ್ರಮಗೊಳಿಸುವುದರಿಂದ ವಾರ್ಷಿಕ ಸುಮಾರು 2.5 ಕೋಟಿ ಡಾಲರ್ (ಅಂದಾಜು 208 ಕೋಟಿ ರೂ.) ತೆರಿಗೆ ಆದಾಯ ಸಂಗ್ರಹವಾಗಲಿದ್ದು, ಈ ಹಣದಿಂದ ಯುದ್ಧಕ್ಕಾಗಿ ಬರೋಬ್ಬರಿ 30 ಸಾವಿರ ಡ್ರೋನ್‌ಗಳನ್ನು ಖರೀದಿಸಬಹುದು ಎಂದು ಉಕ್ರೇನ್ ಸಂಸತ್ತಿನ ಹಣಕಾಸು ಸಮಿತಿ ಮುಖ್ಯಸ್ಥ ಯಾರೋಸ್ಲಾವ್ ಝೆಲೆಜ್ನಿಯಾಕ್ ಹೇಳಿದ್ದಾರೆ.
ಉಕ್ರೇನ್‌ನಲ್ಲಿ ಪ್ರಸ್ತುತ ಅಶ್ಲೀಲ ವಿಷಯಗಳ ನಿರ್ಮಾಣ, ಹೊಂದಿರುವುದು ಅಥವಾ ವಿತರಣೆ ಮಾಡುವುದು ಕಾನೂನುಬಾಹಿರವಾಗಿದ್ದು, ಗರಿಷ್ಠ 7 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಹೀಗಿದ್ದರೂ ಕಂಟೆಂಟ್ ಕ್ರಿಯೇಟರ್‌ಗಳಿಂದ ಆದಾಯ ತೆರಿಗೆ ವಸೂಲಿ ಮಾಡಲು ಅಧಿಕಾರಿಗಳು ಮುಂದಾಗಿರುವುದು ತೀವ್ರ ಗೊಂದಲಕ್ಕೆ ಕಾರಣವಾಗಿದೆ.

ಈ ಮಹಿಳೆಯರು ತೆರಿಗೆ ಕಟ್ಟದಿದ್ದರೆ ತೆರಿಗೆ ವಂಚನೆ ಪ್ರಕರಣ ಎದುರಿಸಬೇಕು. ತೆರಿಗೆ ಕಟ್ಟಿದರೆ ಅಶ್ಲೀಲ ಕಾಯ್ದೆಯಡಿ ಕ್ರಿಮಿನಲ್ ಕೇಸ್ ಎದುರಿಸಬೇಕು. ಇದೊಂದು ದುರಂತ ಮತ್ತು ಹಾಸ್ಯಾಸ್ಪದ ಪರಿಸ್ಥಿತಿ ಎಂದು ಝೆಲೆಜ್ನಿಯಾಕ್ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ – 8 ವಿಮಾನ ನಿಲ್ದಾಣಗಳು ಬಂದ್, 1.70 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರ ಪರದಾಟ
ಕಂಟೆಂಟ್ ಕ್ರಿಯೇಟರ್ ಸ್ವಿಟ್ಲಾನಾ ಡ್ವೋರ್ನಿಕೋವಾ ಎಂಬುವವರ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು 20,000 ಡಾಲರ್ ನಗದು, ಲ್ಯಾಪ್‌ಟಾಪ್ ಮತ್ತು ಹಾರ್ಡ್ ಡ್ರೈವ್‌ಗಳನ್ನು ಜಪ್ತಿ ಮಾಡಿದ್ದು, ಪ್ರಕರಣ ಮುಚ್ಚಿಹಾಕಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಅನಿಶ್ಚಿತತೆ ಹಾಗೂ ಕಿರುಕುಳಕ್ಕೆ ಹೆದರಿ ಹಲವು ಕ್ರಿಯೇಟರ್‌ಗಳು ದೇಶ ತೊರೆದು ಯುರೋಪಿನ ಇತರೆಡೆ ಆಶ್ರಯ ಪಡೆಯುತ್ತಿದ್ದಾರೆ.
ಪೊಲೀಸ್ ಕಿರುಕುಳದ ವಿರುದ್ಧ ಸ್ವಿಟ್ಲಾನಾ ಅವರು ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರ ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ನಾನು ಸುಮಾರು 9 ಲಕ್ಷ ಡಾಲರ್ (7.5 ಕೋಟಿ ರೂ.ಗೂ ಅಧಿಕ) ತೆರಿಗೆ ಪಾವತಿಸಿದ ಪ್ರಾಮಾಣಿಕ ತೆರಿಗೆದಾರಳು. ಸರ್ಕಾರ ನನ್ನನ್ನು ಅಪರಾಧಿಯಂತೆ ನಡೆಸಿಕೊಳ್ಳಬಾರದು ಎಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಈ ಅರ್ಜಿಗೆ ಕೇವಲ ಒಂದು ವಾರದಲ್ಲಿ 25,000ಕ್ಕೂ ಹೆಚ್ಚು ನಾಗರಿಕರು ಸಹಿ ಹಾಕಿ ಬೆಂಬಲ ವ್ಯಕ್ತಪಡಿಸಿದರು.
ಜನರ ವ್ಯಾಪಕ ಬೆಂಬಲದ ಬೆನ್ನಲ್ಲೇ ಅಶ್ಲೀಲ ಉದ್ಯಮವನ್ನು ಕಾನೂನುಬದ್ಧಗೊಳಿಸುವ ಸಂಸದ ಝೆಲೆಜ್ನಿಯಾಕ್ ಅವರ ಮಸೂದೆಯನ್ನು ಪರಿಗಣಿಸುವುದಾಗಿ ಅಧ್ಯಕ್ಷ ಝೆಲೆನ್‌ಸ್ಕಿ ಭರವಸೆ ನೀಡಿದ್ದಾರೆ. ಈ ಮಸೂದೆಯನ್ನು ಶೀಘ್ರವೇ ಮಂಡಿಸಿ ಸಂಸತ್ತಿನ ಚರ್ಚೆ ನಡೆಸಿ ಒಪ್ಪಿಗೆ ಪಡೆಯಲು ಉಕ್ರೇನ್ ಸರ್ಕಾರ ಈಗ ಮುಂದಾಗಿದೆ.
