– ವಿದ್ಯಾರ್ಥಿಗಳು ಫುಲ್ ಪ್ಯಾಂಟ್, ಫುಲ್ ಶರ್ಟ್ ಧರಿಸಿಕೊಂಡು ಬರಲಿ
ಕೋಲ್ಕತ್ತಾ: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಪಶ್ಚಿಮ ಬಂಗಾಳ ಆರೋಗ್ಯ ಸಚಿವ ಡಾ. ಶಾರದ್ವತ್ ಮುಖರ್ಜಿ (Sharadwat Mukherjee) ಅವರು ಶಾಲಾ ವಿದ್ಯಾರ್ಥಿಗಳ ಸಮವಸ್ತ್ರದಲ್ಲಿ ತಾತ್ಕಾಲಿಕ ಬದಲಾವಣೆ ಮಾಡುವಂತೆ ಶಾಲೆಗಳಿಗೆ (Bengal Schools) ಸಲಹೆ ನೀಡಿದ್ದಾರೆ.
ಡೆಂಗ್ಯೂ ಹರಡುವಿಕೆ ಹೆಚ್ಚಾಗುವ ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ 3 ತಿಂಗಳ ಅವಧಿಯಲ್ಲಿ, ವಿದ್ಯಾರ್ಥಿಗಳು ದೇಹದ ಕೈ-ಕಾಲುಗಳನ್ನು ಸಾಧ್ಯವಾದಷ್ಟು ಮುಚ್ಚುವಂತಹ ಉಡುಪು ಧರಿಸುವಂತೆ ಶಾಲೆಗಳು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದ್ದಾರೆ. ಸಚಿವರ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.

ಸ್ಕರ್ಟ್ ಬದಲು ಸಲ್ವಾರ್ ಹಾಕೊಂಡು ಬನ್ನಿ
ಸ್ವಾಸ್ಥ್ಯ ಭವನದಲ್ಲಿ ನಡೆದ ಆರೋಗ್ಯ ಇಲಾಖೆಯ ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು, ಹೆಣ್ಣುಮಕ್ಕಳು ಸ್ಕರ್ಟ್ (Skirts) ಧರಿಸಿ ಶಾಲೆಗೆ ಬರುವುದನ್ನು ತಾತ್ಕಾಲಿಕವಾಗಿ ತಪ್ಪಿಸಿ, ಕಾಲುಗಳನ್ನ ಸಂಪೂರ್ಣವಾಗಿ ಮುಚ್ಚಿಕೊಳ್ಳುವ ಸಲ್ವಾರ್ ಸೂಟ್ (Salwar Suit) ಹಾಕೊಂಡು ಬರುವಂತೆ ಸೂಚನೆ ಕೊಡಿ. ಮುಂದಿನ 3 ತಿಂಗಳು ಶಾಲೆಯ ಸಮವಸ್ತ್ರ ಏನೇ ಇರಲಿ, ವಿದ್ಯಾರ್ಥಿಗಳಿಗೆ ಪೂರ್ಣ ತೋಳಿನ ಬಟ್ಟೆ ಧರಿಸಲು ಅವಕಾಶ ಕೊಡಿ. ಶಿಕ್ಷಕರು, ಮುಖ್ಯ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯಿನಿಯರು ಇದಕ್ಕೆ ಸಹಕರಿಸಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.
‘ಮೊಣಕಾಲಿನವರೆಗಿನ ಸಾಕ್ಸ್ ಸಾಕಾಗಲ್ಲ’
ಇನ್ನೂ ಡೆಂಗ್ಯೂ ಸೊಳ್ಳೆಗಳಿಂದ ಹರಡುವುದರಿಂದ ದೇಹದ ತೆರೆದ ಭಾಗಗಳನ್ನ ಕಡಿಮೆ ಮಾಡುವುದು ಮುಖ್ಯ. ಹಾಗಾಗಿ ಹೆಣ್ಣುಮಕ್ಕಳಿಗೆ ಮೊಣಕಾಲಿನವರೆಗಿನ ಸಾಕ್ಸ್‌ಗಳನ್ನು ನೀಡಿ, ಸಾಕ್ಸ್‌ಗಳು ತೆಳುವಾಗಿದ್ದು ಚರ್ಮಕ್ಕೆ ಅಂಟಿಕೊಂಡಿರುವುದರಿಂದ ಸೊಳ್ಳೆಗಳು ಅವುಗಳ ಮೂಲಕವೂ ಕಚ್ಚುವ ಸಾಧ್ಯತೆ ಇದೆ. ಹೀಗಾಗಿ ಹೆಣ್ಣುಮಕ್ಕಳಿಗೆ ಸಲ್ವಾರ್ ಸೂಟ್ ಹಾಗೂ ಗಂಡುಮಕ್ಕಳಿಗೆ ಫುಲ್ ಪ್ಯಾಂಟ್, ಫುಲ್ ಶರ್ಟ್ ಹಾಕೊಂಡು ಶಾಲೆಗಳಿಗೆ ಬರಲು ಅವಕಾಶ ನೀಡುವಂತೆ ಹೇಳಿದ್ದಾರೆ.

ಸರ್ಕಾರಿ ಶಾಲೆಗಳಿಗೆ ಶೀಘ್ರದಲ್ಲೇ ಹೊಸ ಮಾರ್ಗಸೂಚಿ?
ಇನ್ನೂ ಈ ತಾತ್ಕಾಲಿಕ ಸಮವಸ್ತ್ರ ಬದಲಾವಣೆ ಕುರಿತು ಸರ್ಕಾರಿ ಶಾಲೆಗಳಿಗೆ ಆಡಳಿತಾತ್ಮಕ ಸುತ್ತೋಲೆ ಹೊರಡಿಸುವ ಸಾಧ್ಯತೆ ಇದೆ. ಖಾಸಗಿ ಶಾಲೆಗಳೂ ಇದೇ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳುವಂತೆ ಮನವಿ ಮಾಡಲಾಗುತ್ತದೆ. ಆದರೆ, ಸಮವಸ್ತ್ರದಲ್ಲಿ ಬದಲಾವಣೆ ಮಾಡುವ ಅಂತಿಮ ನಿರ್ಧಾರವನ್ನ ಆಯಾ ಶಾಲಾ ಆಡಳಿತ ಮಂಡಳಿಗಳಿಗೆ ಬಿಡಲಾಗುತ್ತದೆ ಎಂದು ತಿಳಿಸಲಾಗಿದೆ.
