ನವದೆಹಲಿ: ದೆಹಲಿಯಲ್ಲಿ ಭಾರೀ ಮಳೆಯಾಗಿದ್ದು, ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Delhi International Airport) ಜಲಾವೃತಗೊಂಡಿದೆ.
ಏರ್‌ಪೋರ್ಟ್ ಗೇಟ್‌ಗಳಲ್ಲಿ ಅಪಾರ ಪ್ರಮಾಣದಲ್ಲಿ ಮಳೆ ನೀರು ನಿಂತಿದೆ. ಪ್ರಯಾಣಿಕರು ಮಳೆ ನೀರಿನ ನಡುವೆ ತಮ್ಮ ಲಗೇಜ್‌ಗಳನ್ನು ಸಾಗಿಸಲು ಪರದಾಡುವಂತಾಯಿತು. ಇದನ್ನೂ ಓದಿ: BMTC ಬಸ್ ಮೇಲೆ ಬಿದ್ದ ಬೃಹತ್ ಮರ – ಪ್ರಯಾಣಿಕರು ಪಾರು
ಭಾರತ ಹವಾಮಾನ ಇಲಾಖೆಯ (ಐಎಂಡಿ) ಮೂರು ಗಂಟೆಗಳ ಮಳೆಯ ಮಾಹಿತಿಯ ಪ್ರಕಾರ, ಪಾಲಂನಲ್ಲಿ ಬೆಳಗ್ಗೆ 11:30 ರಿಂದ ಮಧ್ಯಾಹ್ನ 2:30 ರ ನಡುವೆ 3.4 ಮಿ.ಮೀ ಮಳೆಯಾಗಿದ್ದರೆ, ನಜಾಫ್‌ಗಢದಲ್ಲಿ ಬೆಳಗ್ಗೆ 8:30 ರಿಂದ 11:30 ರ ನಡುವೆ 0.5 ಮಿ.ಮೀ ಮಳೆಯಾಗಿದೆ. ಇತರ ಹೆಚ್ಚಿನ ಮೇಲ್ವಿಚಾರಣಾ ಕೇಂದ್ರಗಳು ಈ ಅವಧಿಯಲ್ಲಿ ಯಾವುದೇ ಮಳೆಯನ್ನು ದಾಖಲಿಸಿಲ್ಲ.
ದೆಹಲಿಗೆ ಐಎಂಡಿ ಯೆಲ್ಲೋ ಅಲರ್ಟ್ ನೀಡಿದ್ದು, ಮಳೆಯಿಂದಾಗಿ ತಗ್ಗು ಪ್ರದೇಶಗಳು ಮತ್ತು ಅಂಡರ್‌ಪಾಸ್‌ಗಳಲ್ಲಿ ನೀರು ನಿಲ್ಲುವ ಸಾಧ್ಯತೆ ಇರುವುದರಿಂದ ಜನರು ಜಾಗರೂಕರಾಗಿರಲು ಸಲಹೆ ನೀಡಿದೆ. ನಗರದ ಕೆಲವು ಭಾಗಗಳಲ್ಲಿ ಸಂಚಾರ ವ್ಯತ್ಯಯ ಮತ್ತು ಸಾರ್ವಜನಿಕ ಸಾರಿಗೆಯಲ್ಲಿ ವಿಳಂಬವಾಗುವ ಸಾಧ್ಯತೆಯಿದೆ.
ಮಧ್ಯಾಹ್ನ 2:15 ಕ್ಕೆ ಬಿಡುಗಡೆ ಮಾಡಿದ ಅಲ್ಪಾವಧಿ ಹವಾಮಾನ ಮುನ್ಸೂಚನೆಯಲ್ಲಿ, ಮಧ್ಯಾಹ್ನ 2:15 ರಿಂದ ಸಂಜೆ 4:15 ರ ನಡುವೆ ಹಲವೆಡೆ ಹಗುರದಿಂದ ಮಧ್ಯಮ ಮಳೆ, ಗುಡುಗು ಸಹಿತ ಮಳೆ ಬೀಳುವ ನಿರೀಕ್ಷೆಯಿದೆ. ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಐಎಂಡಿ ತಿಳಿಸಿದೆ. ಇದನ್ನೂ ಓದಿ: ಯೆಮನ್ ಹೌತಿಗಳು-ಸೌದಿ ಬೆಂಬಲಿತ ಸರ್ಕಾರಿ ಪಡೆಗಳ ನಡುವೆ ಘರ್ಷಣೆ; 81 ಮಂದಿ ಸಾವು
ಸಂಜೆ 5 ರಿಂದ ರಾತ್ರಿ 8 ರವರೆಗೆ ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಮಧ್ಯಮ ಮಳೆ, ಗುಡುಗು ಸಹಿತ ಮಳೆ ಮತ್ತು ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ ಮೂರು ಗಂಟೆಗಳಲ್ಲಿ ಹೆಚ್ಚಿನ ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಕೆಲವು ಸ್ಥಳಗಳಲ್ಲಿ 50-100 ಮಿಮೀ ಮಳೆಯಾಗುವ ಸಾಧ್ಯತೆ ಇದೆ.
