ವಾಷಿಂಗ್ಟನ್: ಹಾರ್ಮುಜ್ ಜಲಸಂಧಿಯ(Strait of Hormuz) ಮೂಲಕ ಸುಮಾರು 1.8 ಕೋಟಿ (18 ಮಿಲಿಯನ್) ಬ್ಯಾರೆಲ್ ಕಚ್ಚಾ ತೈಲವನ್ನು ಹೊತ್ತೊಯ್ಯುತ್ತಿದ್ದ 40 ವಾಣಿಜ್ಯ ಹಡಗುಗಳಿಗೆ ಅಮೆರಿಕ ಸೇನೆ (US Military) ಮಂಗಳವಾರ ಯಶಸ್ವಿಯಾಗಿ ಮಿಲಿಟರಿ ಭದ್ರತೆ ನೀಡಿ ಕರೆದೊಯ್ದಿದೆ.
ಇರಾನ್(Iran) ಮತ್ತು ಅಮೆರಿಕ(USA) ನಡುವೆ ದಾಳಿ-ಪ್ರತಿದಾಳಿ ತೀವ್ರಗೊಂಡಿರುವ ನಡುವೆಯೇ ನಡೆದ ಅತಿ ದೊಡ್ಡ ಬೆಂಗಾವಲು ಕಾರ್ಯಾಚರಣೆಯಾಗಿದೆ ಎಂದು ಯುಎಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹಡಗುಗಳಿಗೆ ರಕ್ಷಣೆ ನೀಡುವ ಸಂದರ್ಭದಲ್ಲೇ ಅಮೆರಿಕ ಪಡೆಗಳು ಹಾರ್ಮುಜ್ ಜಲಸಂಧಿ ಸುತ್ತಮುತ್ತಲಿನ ಇರಾನ್ನ ಸುಮಾರು 60 ಸೇನಾ ನೆಲೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿವೆ. ವಾಯು ರಕ್ಷಣಾ ವ್ಯವಸ್ಥೆಗಳು, ರಾಡಾರ್ಗಳು, ಸಂವಹನ ಕೇಂದ್ರಗಳು ಹೊಡೆದುರುಳಿಸಲಾಗಿದೆ. ಅಲ್ಲದೆ ಡ್ರೋನ್ ಮತ್ತು ಆಂಟಿ-ಶಿಪ್ ಕ್ಷಿಪಣಿ ದಾಳಿಗಳನ್ನು ಹೊಡೆದುಹಾಕಲಾಗಿದೆ. ಇದನ್ನೂ ಓದಿ: 5,000 ಅಮೆರಿಕ ಯೋಧರ ಆಗಮನ; ಸೆಕ್ಸ್ ಟೂರಿಸಂಗೆ ಹೆಸರುವಾಸಿಯಾದ ಪಟ್ಟಾಯದಲ್ಲಿ ವೇಶ್ಯಾಗೃಹಗಳ ಖಾಲಿ
ಯುದ್ಧ ಪ್ರಾರಂಭವಾಗುವ ಮುನ್ನ ಈ ಜಲಸಂಧಿಯ ಮೂಲಕ ನಿತ್ಯ ಸುಮಾರು 2 ಕೋಟಿ ಬ್ಯಾರೆಲ್ ತೈಲ ಸಾಗಣೆಯಾಗುತ್ತಿತ್ತು. ಆದರೆ ಕಳೆದ ಆರು ತಿಂಗಳಿಂದ ನಡೆಯುತ್ತಿರುವ ಸಂಘರ್ಷದಿಂದಾಗಿ ಹಡಗು ಸಂಚಾರ ಬಹುತೇಕ ಸ್ಥಗಿತಗೊಂಡಿದ್ದು, ಜಾಗತಿಕವಾಗಿ ತೈಲ ಬೆಲೆ ಗಗನಕ್ಕೇರಿದೆ.
ಸೋಮವಾರ ಸೌದಿ ಅರೇಬಿಯಾದ ಧ್ವಜ ಹೊತ್ತಿದ್ದ ಕಚ್ಚಾ ತೈಲ ಟ್ಯಾಂಕರ್ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಫಿಲಿಪೈನ್ಸ್ ಸಿಬ್ಬಂದಿ ಮೃತಪಟ್ಟಿದ್ದು, 14 ಜನರು ಪಾರಾಗಿದ್ದಾರೆ.
ಬಹ್ರೇನ್ ಮತ್ತು ಯುಎಇಯಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಡ್ರೋನ್ ದಾಳಿ ನಡೆಸಿರುವುದಾಗಿ ಇರಾನ್ ಹೇಳಿಕೊಂಡಿದೆ. ಬಹ್ರೇನ್ ತನ್ನ ವಾಯು ರಕ್ಷಣಾ ವ್ಯವಸ್ಥೆಯ ಮೂಲಕ ಹಲವು ದಾಳಿಗಳನ್ನು ವಿಫಲಗೊಳಿಸಿದೆ.
