ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ (ಮೃತ) ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ (Disha Salian) ಸಾವಿನ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ.
ಪ್ರಕರಣದ ತನಿಖೆಯನ್ನ ಸಿಬಿಐಗೆ (ಕೇಂದ್ರೀಯ ತನಿಖಾ ದಳ) ವಹಿಸುವಂತೆ ಬಾಂಬೆ ಹೈಕೋರ್ಟ್ (Bombay Highcourt) ಆದೇಶ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಪ್ರತ್ಯೇಕವಾಗಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಕೋರ್ಟ್ ನಿರ್ದೇಶನ ನೀಡಿದೆ.

ಏನಿದು ದಿಶಾ ಸಾಲಿಯಾನ್ ಕೇಸ್?
ದಿಶಾ ಸಾಲಿಯಾನ್ 2020ರ ಜೂನ್ 8ರಂದು ಮೃತಪಟ್ಟಿದ್ದರು. ಇದಾದ ಕೆಲವೇ ದಿನಗಳ ಬಳಿಕ, ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರು ಮುಂಬೈನ ಬಾಂದ್ರಾದ ನಿವಾಸದಲ್ಲಿ ಮೃತಪಟ್ಟಿದ್ದರು. ಈ ಎರಡು ಸಾವುಗಳ ನಡುವೆ ಸಂಬಂಧವಿದೆ ಎಂಬ ಹಲವು ಆರೋಪಗಳು ಮತ್ತು ಅನುಮಾನಗಳು ದಟ್ಟವಾಗಿದ್ದವು.
ವಿಚಾರಣೆ ವೇಳೆ ಏನಾಯಿತು?
ದಿಶಾ ಅವರ ತಂದೆ ಸತೀಶ್ ಸಾಲಿಯಾನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಈ ಮಹತ್ವದ ನಿರ್ದೇಶನ ನೀಡಿದೆ. ಅರ್ಜಿದಾರರ ಪರ ವಕೀಲ ನಿಲೇಶ್ ಓಜಾ ಅವರು, ಸಿಬಿಐ ಸತೀಶ್ ಸಾಲಿಯಾನ್ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕು ಮತ್ತು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮುಂಬೈನ ಮಾಲ್ವಾಣಿ ಪೊಲೀಸ್ ಠಾಣೆ ಸಿಬಿಐಗೆ ಹಸ್ತಾಂತರಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ ಎಂದು ತಿಳಿಸಿದ್ದಾರೆ.

ಅಲ್ಲದೆ, ತನಿಖೆಯ ನೇತೃತ್ವ ವಹಿಸಲು ಹಿರಿಯ ಅಧಿಕಾರಿಯೊಬ್ಬರನ್ನು ನೇಮಿಸುವಂತೆ ಸಿಬಿಐಗೆ ಸೂಚಿಸಲಾಗಿದೆ. ತನಿಖೆಯ ವೇಳೆ ಯಾರ ವಿರುದ್ಧ ಸಾಕ್ಷ್ಯಗಳು ದೊರೆಯುತ್ತವೆಯೋ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಸಾಕ್ಷ್ಯಾಧಾರಗಳಿಲ್ಲದೇ ಯಾರನ್ನೂ ಆರೋಪಿಯನ್ನಾಗಿ ಮಾಡಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಸಿಬಿಐ ತನಿಖೆಯ ಬಳಿಕ ನಕಾರಾತ್ಮಕ ವರದಿ ಸಲ್ಲಿಸಿದರೂ, ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನಾ ಅರ್ಜಿ ಸಲ್ಲಿಸುವ ಹಕ್ಕು ಅರ್ಜಿದಾರರಿಗೆ ಇದೆ ಎಂದು ನ್ಯಾಯಾಲಯದ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ ಎಂದು ವಕೀಲ ನಿಲೇಶ್ ಓಜಾ ಹೇಳಿದ್ದಾರೆ.
ದಿಶಾ ತಂದೆ ಪರ ವಕೀಲರ ಆರೋಪವೇನು?
ಪ್ರಕರಣದ ತನಿಖೆ ನಡೆದ ರೀತಿಯ ಬಗ್ಗೆ ದಿಶಾ ಅವರ ತಂದೆಯ ಪರ ವಕೀಲರು, ಈ ಹಿಂದೆ ಹಲವು ಆರೋಪಗಳನ್ನ ಮಾಡಿದ್ದರು. ಪ್ರಭಾವಿ ವ್ಯಕ್ತಿಗಳು ಹಾಗೂ ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂಬ ಆರೋಪ ಅವರು ಮಾಡಿದ್ದರು. ಆದರೆ ಇವು ಅರ್ಜಿದಾರರ ಪರದಿಂದ ಮಾಡಲಾಗಿರುವ ಆರೋಪಗಳಾಗಿದ್ದು, ಇದೀಗ ಸಿಬಿಐ ತನಿಖೆಯ ಮೂಲಕ ಅವುಗಳ ಸತ್ಯಾಸತ್ಯತೆ ಹೊರಬರಬೇಕಿದೆ.

ಪೋಸ್ಟ್‌ಮಾರ್ಟಂ ವರದಿ ಬಗ್ಗೆಯೂ ಪ್ರಶ್ನೆ
ದಿಶಾ ಸಾಲಿಯಾನ್ ಅವರ ಪೋಸ್ಟ್‌ಮಾರ್ಟಂ ವರದಿ ಬಗ್ಗೆಯೂ ಅರ್ಜಿದಾರರ ಪರ ವಕೀಲರು ಅನುಮಾನ ವ್ಯಕ್ತಪಡಿಸಿದ್ದರು. ವರದಿಯಲ್ಲಿ ಹಲವು ವ್ಯತ್ಯಾಸಗಳಿವೆ ಎಂದು ಅವರು ಆರೋಪಿಸಿದ್ದರು. 14ನೇ ಮಹಡಿಯಿಂದ ಬಿದ್ದ ವ್ಯಕ್ತಿಯ ಮುಖಕ್ಕೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿರುವುದು ಅನುಮಾನಾಸ್ಪದವಾಗಿದೆ ಎಂದು ವಕೀಲರು ಪ್ರಶ್ನಿಸಿದ್ದರು. ಪೋಸ್ಟ್‌ಮಾರ್ಟಂ ವರದಿಯಲ್ಲಿ ಒಂದು ಅಥವಾ ಎರಡು ಆಂತರಿಕ ಹಲ್ಲುಗಳು ಮುರಿದಿರುವುದನ್ನು ಮಾತ್ರ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದರು.
ಸದ್ಯ ಸಾವಿನ ಸುತ್ತ ಹಲವು ಅನುಮಾನಗಳು ಮೂಡಿಬಂದಿದ್ದು, ಸಿಬಿಐ ತನಿಖೆ ಬಳಿಕ ಸತ್ಯಾಸತ್ಯತೆ ತಿಳಿದುಬರಬೇಕಿದೆ.
