– ಸಿದ್ದರಾಮಯ್ಯನವರ ಆಪ್ತನಾಗಿದ್ದಕ್ಕೆ ಸ್ಥಾನ ತಪ್ಪಿದೆ
– ಈ ಸಂಪುಟ ಮಾಡಲು 2 ತಿಂಗಳು ಬೇಕಿತ್ತಾ?
ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್ ಆಂತರಿಕ ಅಸಮಾಧಾನ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಹಾಗೂ ಪಕ್ಷದ ಹೈಕಮಾಂಡ್ ನಡೆಗೆ ಮಾಜಿ ಸಚಿವ ಎಂಸಿ ಸುಧಾಕರ್(MC Sudhakar) ಭಾರೀ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಗೆ ನೀಡಿದ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ಸಿಎಂ ಹೆಸರನ್ನು ನೇರವಾಗಿ ಉಲ್ಲೇಖಿಸದೇ “ಸರ್ಕಾರದ ಮುಖ್ಯಸ್ಥರು” ಎಂದು ವಾಗ್ದಾಳಿ ನಡೆಸಿದ ಅವರು, ಅಗತ್ಯ ಬಿದ್ದರೆ ಮುಂದಿನ ದಿನಗಳಲ್ಲಿ ಕಠಿಣ ನಿರ್ಧಾರ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸಚಿವ ಸ್ಥಾನ ಕೈತಪ್ಪಿರುವ ಕುರಿತು ಮಾತನಾಡಿದ ಸುಧಾಕರ್, ಸಿದ್ದರಾಮಯ್ಯ ಅವರ ಕಾರ್ಯವೈಖರಿಯನ್ನು ಮೆಚ್ಚಿ ನಾನು ಅವರಿಗೆ ಆತ್ಮೀಯನಾದೆ. ನಾನು ಜಾತಿ ನೋಡಿ ನಾಯಕತ್ವ ಮೆಚ್ಚಿಕೊಂಡವನಲ್ಲ. ಆದರೆ ಸಿದ್ದರಾಮಯ್ಯ ಅವರ ಆಪ್ತ ಎನ್ನುವ ಒಂದೇ ಕಾರಣಕ್ಕೆ ವೈಯಕ್ತಿಕ ದ್ವೇಷ ಸಾಧಿಸಿ ನನಗೆ ಸಚಿವ ಸ್ಥಾನ ಕೈತಪ್ಪುವಂತೆ ಮಾಡಲಾಗಿದೆ. ಸಿದ್ದರಾಮಯ್ಯ ಸರ್ಕಾರದ ಹಲವರಿಗೆ ಅವಕಾಶ ಸಿಕ್ಕಿದೆ, ಆದರೆ ಯಾವ ಮಾನದಂಡದ ಮೇಲೆ ಸಚಿವ ಸ್ಥಾನ ನೀಡಲಾಗಿದೆ ಎಂಬುದು ತಿಳಿಯುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಸಿಎಂ ಆಶಯದಂತೆ ತಾವು ನಡೆದುಕೊಳ್ಳದ ಕಾರಣಕ್ಕೆ ಈ ರೀತಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಸಮಾಧಾನ ಹೊರಹಾಕಿದ ಅವರು, “ಕೆಲವರ ನಡವಳಿಕೆ ಹಾಗೂ ಮಾತು ನನಗೆ ಇಷ್ಟವಿಲ್ಲ, ಬಹುಶಃ ನನ್ನ ಕಾರ್ಯವೈಖರಿ ಅವರ ನಿರೀಕ್ಷೆಯ ಮಟ್ಟದಲ್ಲಿ ಇರಲಿಲ್ಲವೇನೋ” ಎಂದಿದ್ದಾರೆ. ಇದನ್ನೂ ಓದಿ: ಶಾಸಕರು ರಾಜೀನಾಮೆ ಕೊಟ್ಟರೆ ಎರಡೇ ನಿಮಿಷದಲ್ಲಿ ಅಂಗೀಕಾರ: ಡಿ.ಕೆ ಶಿವಕುಮಾರ್
ಪಕ್ಷದ ಹೈಕಮಾಂಡ್ ಮತ್ತು ಸರ್ಕಾರದ ಹಿರಿಯ ನಾಯಕರ ವಿರುದ್ಧ ಕಿಡಿಕಾರಿದ ಅವರು, ನಿನ್ನೆ ನಡೆದ ಸಂಪುಟ ವಿಸ್ತರಣೆಯಲ್ಲಿ ಸಿದ್ದರಾಮಯ್ಯ ಅವರ ಮಾತಿಗೆ ಮನ್ನಣೆ ಸಿಕ್ಕಿಲ್ಲ. ಅವರ ತ್ಯಾಗಕ್ಕೆ ಯಾವುದೇ ಬೆಲೆ ಇಲ್ಲದಂತಾಗಿದೆ. ಮುಂಬರುವ ದಿನಗಳಲ್ಲಿ ಸಿದ್ದರಾಮಯ್ಯ ಅವರನ್ನು ಪಕ್ಷ ಹೇಗೆ ನಡೆಸಿಕೊಳ್ಳುತ್ತದೆ ಮತ್ತು ಅವರಿಗೆ ಯಾವ ಸ್ಥಿತಿ ಬರುತ್ತದೆ ಎಂಬುದನ್ನು ಕಾದು ನೋಡಿ. ಈ ಸಣ್ಣ ಸಂಪುಟ ಮಾಡಲು 2 ತಿಂಗಳು ಬೇಕಿತ್ತಾ? ಹೈಕಮಾಂಡ್ ನಾಯಕರು ಈ ಪ್ರಕ್ರಿಯೆಯನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಆರೋಪಿಸಿದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಭಾಗದ ರಾಜಕೀಯ ಸ್ಥಿತಿಗತಿ ಕುರಿತು ಮಾತನಾಡುತ್ತಾ, “ನಮಗೆ ನಿರಂತರವಾಗಿ ಕೆ.ಎಚ್. ಮುನಿಯಪ್ಪ ಅವರಿಂದ ಸಮಸ್ಯೆ ಎದುರಾಗುತ್ತಿದೆ. ಅದೇ ಕಾರಣಕ್ಕೆ ಅವರು ರಾಜಕೀಯವಾಗಿ ದೇವನಹಳ್ಳಿಗೆ ಸ್ಥಳಾಂತರಗೊಂಡರು. ಆದಾಗ್ಯೂ, ನಾನು 3 ವರ್ಷ ಸಚಿವನಾಗಿದ್ದಾಗ ಕೋಲಾರದಲ್ಲಿ ಮುನಿಯಪ್ಪ ಹಸ್ತಕ್ಷೇಪ ಮಾಡುತ್ತಿದ್ದರು. ಶಿಡ್ಲಘಟ್ಟದಲ್ಲಿ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ತಪ್ಪಿಸಿ ಬೇರೆಯವರಿಗೆ ನೀಡಲಾಯಿತು. ಇವರ ಪ್ರತಿಷ್ಠೆಯೋ ಅಥವಾ ಬೇರೆ ಯಾವುದೇ ವ್ಯವಹಾರ ನಡೆದಿದೆಯೋ ಗೊತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು.
ಈ ಎಲ್ಲಾ ವಿದ್ಯಮಾನಗಳ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಭಾಗದ ಶಾಸಕರು ಮತ್ತು ತಮ್ಮ ಬೆಂಬಲಿಗರೊಂದಿಗೆ ಪ್ರಮುಖ ಸಭೆ ನಡೆಸುವುದಾಗಿ ಸುಧಾಕರ್ ತಿಳಿಸಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದಿನ ನಡೆ ಕುರಿತು ಕಠಿಣ ತೀರ್ಮಾನ ಕೈಗೊಳ್ಳುವುದಾಗಿ ಸೂಚನೆ ನೀಡಿದ್ದಾರೆ.
