ಚಂಡೀಗಢ: ಖಾಸಗಿ ಶಾಲೆಯ (Teacher Murder) ಶಿಕ್ಷಕಿಯೊಬ್ಬರನ್ನು ಶಾಲೆಯ ಆವರಣದಲ್ಲೇ ಮುಸುಕುಧಾರಿ ಯುವಕ ಭೀಕರವಾಗಿ ಹತ್ಯೆ ಮಾಡಿರುವ ಭೀಕರ ಘಟನೆ ಹರಿಯಾಣದ ಫರಿದಾಬಾದ್ನಲ್ಲಿ (Faridabad) ನಡೆದಿದೆ.
29 ವರ್ಷದ ಸಂಧ್ಯಾ ಮೃತ ಶಿಕ್ಷಕಿ, 21 ವರ್ಷದ ಅಮಿತ್ ಕೊಲೆಗೈದ ಆರೋಪಿ. 30 ಸೆಕೆಂಡುಗಳಲ್ಲಿ 34 ಬಾರಿ ಚಾಕುವಿನಿಂದ ಇರಿದು ಶಿಕ್ಷಕಿಯನ್ನು ಕೊಲೆ ಮಾಡಲಾಗಿದ್ದು, ಈ ಭಯಾನಕ ದೃಶ್ಯ ಶಾಲೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೆಳಗ್ಗೆ ಶಾಲೆಗೆ ಬಂದಿದ್ದ ಮುಸುಕುಧಾರಿ ವ್ಯಕ್ತಿ, ಶಿಕ್ಷಕಿಯೊಂದಿಗೆ ಮಾತನಾಡಬೇಕಿದೆ ಎಂದು ಹೇಳಿ ಗೇಟ್ ಬಳಿ ಕಾಯುತ್ತಿದ್ದ. ಬಳಿಕ ಸಂಧ್ಯಾ ಹೊರಗೆ ಬಂದ ತಕ್ಷಣ ಆಕೆಯ ಕುತ್ತಿಗೆ ಹಿಡಿದು ಎಳೆದುಕೊಂಡು ಹೋಗಿ ಚಾಕುವಿನಿಂದ ಮನಬಂದಂತೆ ಹಲ್ಲೆ ನಡೆಸಿದ್ದಾನೆ.ಇದನ್ನೂ ಓದಿ: ನಾರಾಯಣಪುರ ಡ್ಯಾಮ್ನಿಂದ 1.40 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ – ಗಡ್ಡೆಗೂಳಿ ಬಸವೇಶ್ವರ ದೇವಾಲಯ ಮುಳುಗಡೆ
ಅರ್ಧ ನಿಮಿಷದಲ್ಲಿ ಆಕೆಯ ಕುತ್ತಿಗೆ, ಮುಖ, ಎದೆ ಹಾಗೂ ಹೊಟ್ಟೆಗೆ 30ಕ್ಕೂ ಹೆಚ್ಚು ಬಾರಿ ಚಾಕು ಇರಿದಿದ್ದಾನೆ. ಶಿಕ್ಷಕಿ ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಬಿಡದೆ ದಾಳಿ ಮಾಡಿದ್ದಾನೆ. ಕಿರುಚಾಟ ಕೇಳಿ ಓಡಿ ಬಂದ ಶಾಲೆಯ ಆಡಳಿತಾಧಿಕಾರಿ ತಡೆಯಲು ಯತ್ನಿಸಿದಾಗ, ಆರೋಪಿಯು ಅವರ ಮೇಲೂ ಚಾಕು ತೋರಿಸಿ ಬೆದರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಸಂಧ್ಯಾಳನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು.
ಪೊಲೀಸರು ಘಟನೆ ನಡೆದ ಎರಡು ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಕೊಲೆ ಮಾಡಿರುವುದನ್ನು ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ, ಸುಮಾರು ಎರಡು ವರ್ಷಗಳಿಂದ ಅಮಿತ್ ಶಿಕ್ಷಕಿಯನ್ನು ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಸಂಧ್ಯಾ ಹಲವು ಬಾರಿ ಆತನನ್ನು ದೂರವಿರಲು ಎಚ್ಚರಿಕೆ ನೀಡಿದ್ದರೂ ಆತ ಕಿರುಕುಳ ಮುಂದುವರಿಸಿದ್ದ. ಕೆಲವು ದಿನಗಳ ಹಿಂದೆ ಶಿಕ್ಷಕಿ ಅಮಿತ್ ವಿರುದ್ಧ ಲೈಂಗಿಕ ಕಿರುಕುಳದ ಪ್ರಕರಣ ದಾಖಲಿಸಿದ್ದರು. ಅದೇ ಸೇಡಿನಿಂದ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.ಇದನ್ನೂ ಓದಿ: ಕಾರಿನ ಮೇಲೆ ಕಾಡಾನೆ ದಾಳಿ – ಚಾಲಕನ ಸಮಯಪ್ರಜ್ಞೆಯಿಂದ ಕುಟುಂಬ ಪಾರು
