-ಮೃತನ ಹಿರಿಯ ಸಹೋದರನ ಮದುವೆ ನಿಶ್ಚಯಿಸಲು ಕುಟುಂಬಸ್ಥರು ತೆರಳಿದ್ದಾಗ ಸೂಸೈಡ್
ಲಕ್ನೋ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಬಿ.ಟೆಕ್ ಗೋಲ್ಡ್ ಮೆಡಲಿಸ್ಟ್ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ. ಹಲವು ಪ್ರಯತ್ನಗಳ ನಂತರವೂ ಸರ್ಕಾರಿ ಕೆಲಸ ಸಿಗಲಿಲ್ಲ ಎಂದು ಡೆತ್‌ನೋಟ್ ಬರೆದಿಟ್ಟು ತಂದೆಗೆ ಕ್ಷಮೆಯಾಚಿಸಿದ್ದಾನೆ.
ಮೃತನನ್ನು ಆನಂದ್ ಕುಮಾರ್ (23) ಎಂದು ಗುರುತಿಸಲಾಗಿದೆ. 2024ರಲ್ಲಿ ಕಾನ್ಪುರದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಟೆಕ್ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಉತ್ತರ ಪ್ರದೇಶಕ್ಕೆ ಮೂರನೇ ರ‍್ಯಾಂಕ್ ಪಡೆದಿದ್ದ. ಅಲ್ಲದೇ ಕಾಲೇಜಿನ ಸಮಾರಂಭದಲ್ಲಿ ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರಿಂದ ಚಿನ್ನದ ಪದಕ ಪಡೆದಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: 178 ತಾಲೂಕಲ್ಲಿ ಮಳೆ ಕೊರತೆ – ವಿಬಿ-ಜಿರಾಮ್‌ಜಿ ಉದ್ಯೋಗ ನೀಡಲು ಈಶ್ವರ್ ಖಂಡ್ರೆ ಸೂಚನೆ
ಅಣ್ಣನ ಮದುವೆ ನಿಶ್ಚಯಿಸಲು ಕುಟುಂಬಸ್ಥರು ತೆರಳಿದ್ದಾಗ ಸೂಸೈಡ್:
ಯುವಕ ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ. ಮೃತನ ಹಿರಿಯ ಸಹೋದರನ ಮದುವೆ ನಿಶ್ಚಯಿಸಲು ಕುಟುಂಬಸ್ಥರೆಲ್ಲರು ತಮ್ಮ ಸ್ವಂತ ಊರು ಬಿಹಾರಕ್ಕೆ ತೆರಳಿದ್ದರು. ಈ ವೇಳೆ ಕೆಲಸದಾಕೆ ಬಂದು ಮನೆ ಬಾಗಿಲು ತಟ್ಟಿದರೂ ಆನಂದ್ ತೆರೆಯದಿದ್ದಾಗ, ಅವರು ನೆರೆಹೊರೆಯವರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪೊಲೀಸರು ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಜೊತೆಗೆ ಆತ್ಮಹತ್ಯೆ ಮಾಡಿಕೊಂಡ ಕೊಠಡಿಯಲ್ಲಿ ಐದು ಸಾಲುಗಳಲ್ಲಿ ಬರೆದಿರುವ ಡೆತ್‌ನೋಟ್ ಪತ್ತೆಯಾಗಿದೆ.ಇದನ್ನೂ ಓದಿ: ಮೆಣಸಿನಕಾಯಿ ತುಂಬಿದ್ದ ಲಾರಿ ಪಲ್ಟಿಯಾಗಿ ಕಾರಿಗೆ ಡಿಕ್ಕಿ – ಒಂದೇ ಕುಟುಂಬದ ನಾಲ್ವರು ಸೇರಿ 6 ಮಂದಿ ಸಜೀವ ದಹನ
ಡೆತ್‌ನೋಟ್‌ನಲ್ಲಿ ಏನಿದೆ?
ಸಾರಿ ಅಪ್ಪ, ನಾನು ಸರ್ಕಾರಿ ಕೆಲಸಕ್ಕಾಗಿ ಸುಮಾರು 50 ಬಾರಿ ಪ್ರಯತ್ನಿಸಿದೆ, ಆದರೆ ನನಗೆ ಯಶಸ್ಸು ಸಿಗಲಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಇಂಗ್ಲಿಷ್‌ನಲ್ಲಿ ಬರೆದಿದ್ದಾನೆ.
ಈ ಕುರಿತು ಮೃತ ಆನಂದ್ ತಂದೆ ರಾಜಕುಮಾರ್ ಮಾತನಾಡಿ, ಮಗ ಪದವಿ ಮುಗಿಸಿದ ನಂತರ ಒಂದು ವರ್ಷದ ಅಪ್ರೆಂಟಿಸ್‌ಶಿಪ್ ಪೂರ್ಣಗೊಳಿಸಿದ್ದ. ಬಳಿಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ. ಅವನು ರೈಲ್ವೆ, ಎಸ್‌ಎಸ್‌ಸಿ, ಬ್ಯಾಂಕುಗಳು ಮತ್ತು ಶಿಕ್ಷಣ ಇಲಾಖೆ ನಡೆಸಿದ ನೇಮಕಾತಿ ಪರೀಕ್ಷೆಗಳಿಗೆ ಪರೀಕ್ಷೆ ಬರೆದಿದ್ದ. ಆದರೆ ಎಲ್ಲಿಯೂ ಯಶಸ್ಸು ಸಿಗಲಿಲ್ಲ. ಇದರಿಂದಾಗಿ ಕಳೆದ ಕೆಲವು ತಿಂಗಳುಗಳಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಫಿಫಾ ವಿಶ್ವಕಪ್ ಗೆದ್ದ ಸ್ಪೇನ್‌ಗೆ 18 ಕ್ಯಾರೆಟ್ ಚಿನ್ನದ ಅಸಲಿ ಟ್ರೋಫಿ ಸಿಗಲ್ಲ ಯಾಕೆ?
