ಮುಂಬೈ: ಚಲಿಸುತ್ತಿದ್ದ ಕಾರಿಗೆ (Car) ಹಿಂಬದಿಯಿಂದ ಲಾರಿ (Lorry) ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು ಒಂದೇ ಕುಟುಂಬದ ನಾಲ್ವರು ಸೇರಿದಂತೆ ಒಟ್ಟು 6 ಮಂದಿ ಸಜೀವ ದಹನವಾಗಿರುವ ಘಟನೆ ಮಹಾರಾಷ್ಟ್ರದ (Maharashtra) ವಾರ್ಧಾ (Wardha) ಜಿಲ್ಲೆಯ ಸಮೃದ್ಧಿ ಎಕ್ಸ್‌ಪ್ರೆಸ್ ವೇಯಲ್ಲಿ ನಡೆದಿದೆ. ಸಂಭ
ಮುಂಜಾನೆ ಸುಮಾರು 3 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಎಥೆನಾಲ್ ಸಾಗಿಸುತ್ತಿದ್ದ ಕಂಟೇನರ್ ಲಾರಿಯೊಂದು ಮೊದಲು ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಇಂಧನ ಸೋರಿಕೆಯಾಗಿತ್ತು. ಇದರಿಂದ ವಾಹನಗಳ ಸಂಚಾರವನ್ನು ಮತ್ತೊಂದು ಲೇನ್‌ಗೆ ತಿರುಗಿಸಲಾಗಿತ್ತು. ಈ ವೇಳೆ ಪುಣೆಯಿಂದ ವಾರ್ಧಾಕ್ಕೆ ತೆರಳುತ್ತಿದ್ದ ಕಾರಿಗೆ ಹಿಂಬದಿಯಿಂದ ಅತಿವೇಗವಾಗಿ ಬಂದ ಮೆಣಸಿನಕಾಯಿ ತುಂಬಿದ್ದ ಲಾರಿಯೊಂದು ಪಲ್ಟಿಯಾಗಿ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಲಾರಿಯಡಿ ಸಿಲುಕಿ ನಜ್ಜುಗುಜ್ಜಾಗಿದ್ದು, ಕ್ಷಣಾರ್ಧದಲ್ಲೇ ಎರಡೂ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಇದನ್ನೂ ಓದಿ: ಸೋಷಿಯಲ್ ಮೀಡಿಯಾ ಕಿರುಕುಳಕ್ಕೆ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ ಐಶ್ವರ್ಯಾ ಸಿಂಧೋಗಿ
ಬೆಂಕಿ ವ್ಯಾಪಕವಾಗಿ ಹರಡಿದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಹಾಗೂ ಲಾರಿಯ ಚಾಲಕ ಮತ್ತು ಕ್ಲೀನರ್ ಸೇರಿ ಒಟ್ಟು ಆರು ಮಂದಿ ಸ್ಥಳದಲ್ಲೇ ಸಜೀವ ದಹನಗೊಂಡಿದ್ದಾರೆ. ಬೆಂಕಿಯ ತೀವ್ರತೆಗೆ ಮೃತದೇಹಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಮೃತರನ್ನು ವಾರ್ಧಾದ ಸಾಲೋಡ್ ಗ್ರಾಮದ ನಿವಾಸಿಗಳಾದ ರಾಜೇಶ್ ಟಿಪ್ಲೆ, ಅವರ ಪತ್ನಿ ಸುಷ್ಮಾ ಟಿಪ್ಲೆ, ಪುತ್ರಿ ಜಾಹ್ನವಿ ಟಿಪ್ಲೆ ಹಾಗೂ ಕಾರು ಚಾಲಕ ಅಂಕುಶ್ ರಾವತ್ ಎಂದು ಗುರುತಿಸಲಾಗಿದೆ. ಇನ್ನಿಬ್ಬರು ಮೃತರು ಲಾರಿ ಚಾಲಕ ಸಂಜಯ್ ಕುಮಾರ್ ಮತ್ತು ಕ್ಲೀನರ್ ಸಮರ್ಜಿತ್ ಪಾಲ್ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹುಡುಗಿ ಆಸೆ ತೋರಿಸಿ ಸುಲಿಗೆ – 11 ಮಂದಿ ಅರೆಸ್ಟ್
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹೆದ್ದಾರಿ ಸುರಕ್ಷತಾ ಪಡೆ, ವಾರ್ಧಾ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಬಳಿಕ ವಾಹನಗಳನ್ನು ತೆರವುಗೊಳಿಸಿ ಸಂಚಾರವನ್ನು ಪುನಃ ಆರಂಭಿಸಲಾಯಿತು. ಈ ಪ್ರಕರಣ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ತ್ರಿಪುರ ಡಿಜಿಪಿ ಅನುರಾಗ್ ಧನಕರ್ ಶವವಾಗಿ ಪತ್ತೆ: ಕಚೇರಿಯಲ್ಲೇ ಆತ್ಮಹತ್ಯೆ ಶಂಕೆ
