ಬೆಂಗಳೂರು: ತೆರವುಗೊಳಿಸಿದ ಜಾಗದಲ್ಲಿ ಮತ್ತೆ ಫುಟ್‌ಪಾತ್(Footpaths) ಮೇಲೆ ಅಂಗಡಿಯನ್ನು ಆರಂಭಿಸಿದರೆ ದಂಡ ವಿಧಿಸುವಂತೆ ಬೆಂಗಳೂರು ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ(Krishna Byre Gowda) ಖಡಕ್ ಆದೇಶ ನೀಡಿದ್ದಾರೆ.
ಇತ್ತೀಚೆಗಷ್ಟೇ ಬರೋಬ್ಬರಿ 490 ಕಿಲೋಮೀಟರ್‌ನಷ್ಟು ಸುದೀರ್ಘ ಫುಟ್‌ಪಾತ್ ತೆರವು ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಯಾವುದೇ ಕಾರಣಕ್ಕೂ ಫುಟ್‌ಪಾತ್‌ಗಳ ಮೇಲೆ ವ್ಯಾಪಾರ ಮಾಡಬಾರದು ಎಂದು ಬಿಬಿಎಂಪಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವ್ಯಾಪಾರಸ್ಥರಿಗೆ ಖಡಕ್ ಎಚ್ಚರಿಕೆಯನ್ನೂ ನೀಡಿದ್ದರು.
ಬೆಂಗಳೂರಿನ(Bengaluru) ಅತ್ಯಂತ ಜನನಿಬಿಡ ಪ್ರದೇಶಗಳಾದ ಕೆ.ಆರ್. ಮಾರ್ಕೆಟ್ ರಸ್ತೆ ಹಾಗೂ ವಿಕ್ಟೋರಿಯಾ ಆಸ್ಪತ್ರೆ ರಸ್ತೆಗಳಲ್ಲಿ ಇತ್ತೀಚೆಗೆ ಜೆಸಿಬಿಗಳ ಮೂಲಕ ದೊಡ್ಡ ಮಟ್ಟದ ಫುಟ್‌ಪಾತ್ ತೆರವು ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಕಾರ್ಯಾಚರಣೆ ಮುಗಿದು ಮೂರ್ನಾಲ್ಕು ದಿನ ಕಳೆಯುವಷ್ಟರಲ್ಲೇ ವಿಕ್ಟೋರಿಯಾ ಆಸ್ಪತ್ರೆ ರಸ್ತೆಯ ಫುಟ್‌ಪಾತ್‌ಗಳ ಮೇಲೆ ವ್ಯಾಪಾರಸ್ಥರು ಮತ್ತೆ ಅಕ್ರಮವಾಗಿ ಅಂಗಡಿಗಳನ್ನು ಹೂಡಿ, ವ್ಯಾಪಾರ ಶುರು ಮಾಡಿದ್ದಾರೆ. ಇದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಫುಟ್‌ಪಾತ್ ತೆರವುಗೊಳಿಸಿದ ಜಾಗದಲ್ಲಿ ಮತ್ತೆ ಅತಿಕ್ರಮಣವಾಗಿರುವ ವಿಷಯ ತಿಳಿಯುತ್ತಿದ್ದಂತೆ ಗರಂ ಆದ ಸಚಿವ ಕೃಷ್ಣಬೈರೇಗೌಡರು ಬಿಬಿಎಂಪಿ ಅಧಿಕಾರಿಗಳಿಗೆ ಮಹತ್ವದ ನಿರ್ದೇಶನ ನೀಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಹೆಚ್ಚಿದ ಕೊರೋನಾ ಭೀತಿ – 32 ಜನರಲ್ಲಿ ಸೋಂಕು ದೃಢ
ಪಾದಚಾರಿಗಳ ಮುಕ್ತ ಸಂಚಾರಕ್ಕೆ ಅಡ್ಡಿಪಡಿಸುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಬಿಬಿಎಂಪಿ ಫುಟ್‌ಪಾತ್ ಸ್ಕ್ವಾಡ್ ಕಣ್ಗಾವಲು ಮತ್ತಷ್ಟು ಬಿಗಿಯಾಗಲಿದೆ.
