ಮುಂಬೈ: ಸೋಶಿಯಲ್ ಮೀಡಿಯಾದಲ್ಲಿ ‘ಲವ್ ಜಿಹಾದ್‌ನ ಬ್ರ್ಯಾಂಡ್ ಅಂಬಾಸಿಡರ್’ ಎಂದು ಟ್ರೋಲ್ ಮಾಡಿದ್ದಕ್ಕೆ ನಟ ಅಮೀರ್ ಖಾನ್(Aamir Khan) ನೇರವಾಗಿಯೇ ತಿರುಗೇಟು ನೀಡಿದ್ದಾರೆ.
ಅಮೀರ್ ಖಾನ್ ಇತ್ತೀಚೆಗಷ್ಟೇ ತಮ್ಮ ದೀರ್ಘಕಾಲದ ಸ್ನೇಹಿತೆ ಗೌರಿ ಸ್ಪ್ರ್ಯಾಟ್(Gauri Spratt) ಅವರನ್ನು ವಿವಾಹವಾಗುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಅವರ ಮದುವೆಯ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಇವರ ವಿರುದ್ಧ ಟೀಕೆಗಳು ವ್ಯಕ್ತವಾಗಿತ್ತು.
ಈ ಬಗ್ಗೆ ಮಾತನಾಡಿರುವ ಅಮೀರ್ ಖಾನ್, ತಮ್ಮ ಕುಟುಂಬವು ಯಾವಾಗಲೂ ಅಂತರ್ಧರ್ಮೀಯ ಸಂಬಂಧಗಳನ್ನು ಮುಕ್ತವಾಗಿ ಒಪ್ಪಿಕೊಂಡಿದೆ ಮತ್ತು ತಮ್ಮ ಯಾವುದೇ ಮದುವೆಗಳಲ್ಲೂ ಧರ್ಮ ಬದಲಾವಣೆಯ ಪ್ರಕ್ರಿಯೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
“ಸತ್ಯ ಏನೆಂದರೆ ನಮ್ಮದು ಎಲ್ಲರನ್ನೂ ಒಳಗೊಳ್ಳುವ ಅತ್ಯಂತ ವಿಶಾಲ ಮನೋಭಾವದ ಕುಟುಂಬ. ನನ್ನ ಇಬ್ಬರು ಸಹೋದರಿಯರು ಹಿಂದೂಗಳನ್ನು ವಿವಾಹವಾಗಿದ್ದಾರೆ. ನನ್ನ ಮಗಳು ಇರಾ ಖಾನ್ ಕೂಡ ಹಿಂದೂ ಯುವಕನನ್ನು ಮದುವೆಯಾಗಿದ್ದಾಳೆ. ನನ್ನ ಸೋದರ ಸಂಬಂಧಿ ಮನ್ಸೂರ್ ಕ್ರಿಶ್ಚಿಯನ್ ಮಹಿಳೆಯನ್ನು ವರಿಸಿದ್ದಾರೆ. ನಮ್ಮ ಕುಟುಂಬದಲ್ಲಿ ಹಿಂದೂ, ಕ್ರಿಶ್ಚಿಯನ್ ಹೀಗೆ ಎಲ್ಲ ಧರ್ಮದವರೂ ಇದ್ದಾರೆ” ಎಂದು ಅಮೀರ್ ಹೇಳಿದ್ದಾರೆ.

ಲವ್ ಜಿಹಾದ್ (Love Jihad) ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿದ ಅವರು, ನನ್ನ ಪತ್ನಿಯರಾದ ಗೌರಿ ಆಗಲಿ, ಕಿರಣ್ ರಾವ್ ಆಗಲಿ ಅಥವಾ ರೀನಾ ದತ್ತಾ ಆಗಲಿ ಯಾರೂ ತಮ್ಮ ಧರ್ಮವನ್ನು ಬದಲಾಯಿಸಿಲ್ಲ. ಏಕೆಂದರೆ ನಮ್ಮ ಮದುವೆಗಳೆಲ್ಲವೂ ಕಾನೂನುಬದ್ಧವಾಗಿ ನೋಂದಣಿಯಾದ ಸಿವಿಲ್ ಮ್ಯಾರೇಜ್ (Civil Marriages) ಗಳಾಗಿವೆ. ಇನ್ನು ಈಗಿನ ನನ್ನ ಪತ್ನಿ ಗೌರಿ ಹಿಂದೂ ಕೂಡ ಅಲ್ಲ, ಆಕೆ ಕ್ರಿಶ್ಚಿಯನ್. ಅದೂ ಕೂಡ ಧಾರ್ಮಿಕ ಆಚರಣೆಗಳನ್ನು ಅಷ್ಟಾಗಿ ಪಾಲಿಸದ ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿದಾಕೆ ಎಂದಿದ್ದಾರೆ. ಇದನ್ನೂ ಓದಿ: ಶಾರುಖ್ ಖಾನ್‌ಗೆ ರಿಲೀಫ್ – `ಮನ್ನತ್’ ನವೀಕರಣ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ

ಕಳೆದ ವರ್ಷ ಮಾರ್ಚ್‌ನಲ್ಲಿ ಅಮೀರ್ ಖಾನ್ ತಮ್ಮ 60ನೇ ವರ್ಷದ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ ಗೌರಿ ಅವರನ್ನು ಮಾಧ್ಯಮಗಳಿಗೆ ಅಧಿಕೃತವಾಗಿ ಪರಿಚಯಿಸಿದ್ದರು. ಸುಮಾರು ಎರಡು ವರ್ಷಗಳ ಕಾಲ ಡೇಟಿಂಗ್ ನಡೆಸಿದ ಈ ಜೋಡಿ ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
ಈ ಖಾಸಗಿ ಮದುವೆ ಸಮಾರಂಭದಲ್ಲಿ ಕೇವಲ 150 ಆಪ್ತ ಅತಿಥಿಗಳು ಮಾತ್ರ ಭಾಗವಹಿಸಿದ್ದರು. ಅಮೀರ್ ಮಕ್ಕಳಾದ ಜುನೈದ್ ಖಾನ್, ಇರಾ ಖಾನ್ ಹಾಗೂ ಅಳಿಯ ನೂಪುರ್ ಶಿಖಾರೆ ಅವರ ಜೊತೆಗೆ ಉದ್ಯಮಿ ಮುಖೇಶ್ ಅಂಬಾನಿ, ರಾಜಕಾರಣಿ ರಾಜ್ ಠಾಕ್ರೆ, ನಿರ್ದೇಶಕ ಅಶುತೋಷ್ ಗೋವಾರಿಕರ್, ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಹಾಗೂ ಹಾಸ್ಯನಟ ವೀರ್ ದಾಸ್ ಸೇರಿದಂತೆ ಗಣ್ಯರು ಪಾಲ್ಗೊಂಡು ನವದಂಪತಿಗಳಿಗೆ ಹರಸಿದ್ದರು.
ಈ ಹಿಂದೆ ಅಮೀರ್ ಖಾನ್ ರೀನಾ ದತ್ತಾ (1986-2002) ಹಾಗೂ ನಿರ್ದೇಶಕಿ ಕಿರಣ್ ರಾವ್ (2005-2021) ಅವರನ್ನು ವಿವಾಹವಾಗಿದ್ದರು.
