ಮುಂಬೈ: ಇ20 ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯ (E20 Ethanol Blending Policy) ಬಗ್ಗೆ ತಪ್ಪು ಮಾಹಿತಿ ಹರಡಿದ ಮತ್ತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ(Nitin Gadkari) ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಅವರ ಇಮೇಜ್ಗೆ ಧಕ್ಕೆ ತಂದ ಆರೋಪದ ಮೇಲೆ ನಾಲ್ವರು ಯೂಟ್ಯೂಬರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ನಾಗ್ಪುರದ ಬಿಜೆಪಿ ಸೋಶಿಯಲ್ ಮೀಡಿಯಾ ಸೆಲ್ ಅಧ್ಯಕ್ಷ ಶಿಶಿರ್ ತ್ರಿಪಾಠಿ ನೀಡಿದ ದೂರಿನ ಆಧಾರದ ಮೇಲೆ ಬಿಹಾರದ ಪ್ರಸಿದ್ಧ ಯೂಟ್ಯೂಬರ್ ಮನೀಶ್ ಕಶ್ಯಪ್, ದೇಸಿ ಬಾಯ್ಸ್, ಹರ್ಷಿತ್ ರಾಠಿ, ಅಂಕಲೇಶ್ ಇನ್ವಾತೆ ವಿರುದ್ಧ ನಾಗ್ಪುರ ಸೈಬರ್ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಇ20 ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದ ವಾಹನಗಳ ಇಂಜಿನ್ ಹಾಳಾಗುತ್ತಿದೆ ಎಂಬ ಚರ್ಚೆಗಳು ತೀವ್ರವಾಗಿದ್ದವು. ಈ ನಡುವೆ ಯೂಟ್ಯೂಬರ್ ಮನೀಶ್ ಕಶ್ಯಪ್(Manish Kashyap) ಎಥೆನಾಲ್ ಮಿಶ್ರಿತ ಪೆಟ್ರೋಲ್ನಿಂದಾಗಿ ತಮ್ಮ ಟೊಯೋಟಾ ಕಾರಿನ ಇಂಜಿನ್ ಸೀಜ್ ಆಗಿದೆ ಎಂದು ಆರೋಪಿಸಿ ಪೆಟ್ರೋಲ್ ಪಂಪ್ನಲ್ಲಿ ಗಲಾಟೆ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಇದನ್ನೂ ಓದಿ: ಕಸದಿಂದ ತಯಾರಿಸಿದ ಹೈಡ್ರೋಜನ್ ಇಂಧನ ಬಳಸಿ ಓಡಲಿವೆ ದೆಹಲಿ ಬಸ್ಗಳು: ಗಡ್ಕರಿ ಘೋಷಣೆ
ದೂರಿನಲ್ಲಿ ಏನಿದೆ?
ಈ ಇನ್ಫ್ಲುಯೆನ್ಸರ್ಗಳು ತಮ್ಮ ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ಹಂಚಿಕೊಂಡಿರುವ ವಿಡಿಯೋಗಳು ಸಾರ್ವಜನಿಕರಲ್ಲಿ ತಪ್ಪು ಮಾಹಿತಿ ಮತ್ತು ಗೊಂದಲ ಮೂಡಿಸುತ್ತಿವೆ. ತಮ್ಮ ವೀಡಿಯೊಗಳಿಗೆ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಇವರು ಸಾಮಾನ್ಯ ನಾಗರಿಕರೊಂದಿಗೆ ನಕಲಿ ಅಥವಾ ದಾರಿತಪ್ಪಿಸುವ ಸಂದರ್ಶನಗಳನ್ನು ಬಳಸಿದ್ದಾರೆ.
ಎಥೆನಾಲ್ ಬಳಕೆಯನ್ನು ಒಳಗೊಂಡಂತೆ ದೊಡ್ಡ ಪ್ರಮಾಣದ ವಂಚನೆ ಮತ್ತು ನಕಲಿ ವಹಿವಾಟುಗಳು ನಡೆಯುತ್ತಿವೆ ಎಂದು ಹೇಳಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ಎಥೆನಾಲ್ ನೀತಿಯನ್ನು ದುರುದ್ದೇಶಪೂರ್ವಕವಾಗಿ ತಿರುಚಿ, ಅದಕ್ಕೆ ಸಚಿವ ನಿತಿನ್ ಗಡ್ಕರಿ ಅವರ ಹೆಸರನ್ನು ಸುಳ್ಳಾಗಿ ಲಿಂಕ್ ಮಾಡಲಾಗಿದೆ. ತಪ್ಪು ಸಂದರ್ಶನಗಳನ್ನು ಬಳಸಿ ಸಚಿವರ ಇಮೇಜ್ಗೆ ಕಳಂಕ ತರಲು ಪ್ರಯತ್ನಿಸಲಾಗಿದೆ. ಇದನ್ನೂ ಓದಿ: ಪೆಟ್ರೋಲ್ಗಿಂತ ಎಥೆನಾಲ್ ಅಗ್ಗ? ದರ ಏರಿಕೆ ಹೊತ್ತಲ್ಲೇ ಚರ್ಚೆಗೆ ಬಂತು ‘E100’
ವಾಹನಗಳಲ್ಲಿ ಎಥೆನಾಲ್ ಬಳಕೆಗೆ ಸಂಬಂಧಿಸಿದಂತೆ ಕಾನೂನುಬಾಹಿರ ಮತ್ತು ವಂಚನೆಯ ನಡವಳಿಕೆಗಳನ್ನು ಪ್ರೋತ್ಸಾಹಿಸುವ ರೀತಿಯಲ್ಲಿ ಈ ವಿಡಿಯೋಗಳಿವೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಪೆಟ್ರೋಲ್ ಟ್ಯಾಂಕ್ಗೆ ನೀರು ಹಾಕಿ ಎಥೆನಾಲ್ ವಿರುದ್ಧ ಅಪಪ್ರಚಾರ – ಯೂಟ್ಯೂಬರ್ ವಿರುದ್ಧ ಟೊಯೋಟಾ ಎಫ್ಐಆರ್
ಇನ್ನೊಂದೆಡೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದು, “ಎಥೆನಾಲ್ ಮಿಶ್ರಿತ ಪೆಟ್ರೋಲ್ನಿಂದ ಒಂದೇ ಒಂದು ವಾಹನದ ಇಂಜಿನ್ ಹಾಳಾಗಿದ್ದರೂ ಸಾಬೀತುಪಡಿಸಿ” ಎಂದು ಸವಾಲು ಹಾಕಿದ್ದಾರೆ.
ವಿಡಿಯೋಗಳಲ್ಲಿ ಸಚಿವರ ಹೆಸರನ್ನು ಬಳಸಲಾಗಿದೆಯೇ ಹೊರತು, ಈ ಅಪರಾಧಕ್ಕೂ ನಿತಿನ್ ಗಡ್ಕರಿ ಅವರಿಗೂ ಯಾವುದೇ ನೇರ ಸಂಬಂಧವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

