ತಮಿಳುನಾಡಿಗೇ ಹೊಂದಿಕೊಂಡಿರುವ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಎನ್‌ಡಿಎ ಮಿತ್ರಕೂಟಕ್ಕೆ ಜಯ ಸಿಗಲಿದೆ ಅನ್ನೋದು ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯವಾಣಿ. ಪುದುಚೇರಿಯಲ್ಲಿ ಇದೇ ಮೊದಲ ಬಾರಿಗೆ ಶೇ.89.87% ರಷ್ಟು ದಾಖಲೆಯ ಮತದಾನ ಆಗಿರುವುದು ಮತ್ತೊಂದು ವಿಶೇಷ.
ಸಾಕಷ್ಟು ಸಂಚಲನ ಸೃಷ್ಟಿಸಿದ್ದ ನಟ-ರಾಜಕಾರಣಿ ವಿಜಯ್ ನೇತೃತ್ವದ ಟಿವಿಕೆ-ಎನ್‌ಎಂಕೆ ಮೈತ್ರಿ ಎರಡರಿಂದ ನಾಲ್ಕು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಭವಿಷ್ಯ ನುಡಿದಿದೆ.
ಎನ್‌ಡಿಎ 16 ರಿಂದ 25 ಸ್ಥಾನಗಳೊಂದಿಗೆ ಎರಡನೇ ಬಾರಿಗೆ ಅಧಿಕಾರಕ್ಕೆ ಬರಲಿದೆ ಎಂದು ಮೂರು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಕಾಂಗ್ರೆಸ್ ನೇತೃತ್ವದ ಬಣಕ್ಕೆ 6 ರಿಂದ 12 ಸ್ಥಾನಗಳನ್ನು ನೀಡಿವೆ. ಈ ಮೂಲಕ ಮತ್ತೆ ಬಿಜೆಪಿ ಅಧಿಕಾರದಲ್ಲಿ ಮುಂದುವರಿಯುವ ನಿರೀಕ್ಷೆ ಇದೆ.

ದಾಖಲೆಯ ಮತದಾನ
ಪುದುಚೇರಿಯ 30 ಸ್ಥಾನಗಳಿಗೆ ಏ.9 ರಂದು ಮತದಾನ ನಡೆದಿದ್ದು, 89.87% ಮತದಾನವಾಗಿತ್ತು. ಕೇಂದ್ರಾಡಳಿತ ಪ್ರದೇಶದಲ್ಲಿ ಒಟ್ಟು 294 ಅಭ್ಯರ್ಥಿಗಳು ಕಣದಲ್ಲಿದ್ದರು. AINRC, BJP, AIADMK ಮತ್ತು LJK ಗಳನ್ನು ಒಳಗೊಂಡಿರುವ ಆಡಳಿತಾರೂಢ NDA ಕಣದಲ್ಲಿತ್ತು. ಕಾಂಗ್ರೆಸ್, DMK ಮತ್ತು VCK ನೇತೃತ್ವದ ವಿರೋಧ ಪಕ್ಷ INDIA ಬಣವು ಸ್ಪರ್ಧೆಯಲ್ಲಿತ್ತು. ಬಹುಮತಕ್ಕೆ 16 ಸೀಟ್‌ಗಳ ಅಗತ್ಯವಿತ್ತು.
ಕಳೆದ ಚುನಾವಣೆಯಲ್ಲಿ 30 ಸದಸ್ಯ ಬಲದ ವಿಧಾನಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟವು ಸರಳ ಬಹುಮತವನ್ನು ಪಡೆದಿತ್ತು. ಎನ್‌ಡಿಎ (NDA): 16 ಸ್ಥಾನಗಳು (ಎಐಎನ್ಆರ್‌ಸಿ: 10, ಬಿಜೆಪಿ: 6), ಯುಪಿಎ (UPA): 8 ಸ್ಥಾನಗಳನ್ನು ಜಯಿಸಿದ್ದವು.












