– ಸಿದ್ದರಾಮಯ್ಯನವರ ಸರ್ಕಾರ ಮೂರು ವರ್ಷದಿಂದ ಹಿಂದೂಗಳ ಭಾವನೆಗೆ ಧಕ್ಕೆ ಮಾಡುತ್ತಲೇ ಇದೆ ಅಂತ ಟೀಕೆ
ಬೆಂಗಳೂರು: ಕಾಂಗ್ರೆಸ್‌ನ ಕುಮ್ಮಕ್ಕಿನಿಂದಾಗಿ ಸಿಇಟಿ (CET) ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸುವ ಘಟನೆಗಳು ನಡೆಯುತ್ತಿವೆ. ಈ ಘಟನೆ ಇಲ್ಲಿಗೆ ಕೊನೆಯಾಗಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R.Ashok) ಆಗ್ರಹಿಸಿದರು.
ತಪ್ಪಿತಸ್ಥ ಸಿಬ್ಬಂದಿಯ ಬಂಧನಕ್ಕೆ ಆಗ್ರಹಿಸಲು ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸಿಇಟಿ ಪರೀಕ್ಷೆ ಬರೆಯಲು ಹೋದ ವಿದ್ಯಾರ್ಥಿಯ ಜನಿವಾರ ತೆಗೆಸಿ ದೌರ್ಜನ್ಯ ಮಾಡಿರುವ ಘಟನೆ ನಡೆದಿದೆ. ತಂದೆ-ತಾಯಿ ತೀರಿಕೊಂಡಾಗ ಮಾತ್ರ ಮಕ್ಕಳು ಜನಿವಾರ ತೆಗೆದುಹಾಕುತ್ತಾರೆ. ಪರೀಕ್ಷೆ ಬರೆಯಲು ಹೋದ ವಿದ್ಯಾರ್ಥಿಯ ಜನಿವಾರ ತೆಗೆಸಿದರೆ ಆತನ ಮಾನಸಿಕ ಸ್ಥಿತಿ ಏನಾಗಬಹುದು ಎಂದು ಆಲೋಚಿಸಬೇಕಿತ್ತು. ಈ ಬಗ್ಗೆ ಹೈಕೋರ್ಟ್ ಸ್ಪಷ್ಟವಾಗಿ ಆದೇಶ ಮಾಡಿದ್ದರೂ ಸರ್ಕಾರ ಈ ತಪ್ಪು ಮಾಡಿದೆ. ಸರ್ಕಾರದ ಕುಮ್ಮಕ್ಕು ಇಲ್ಲವೆಂದರೆ ಇಂತಹ ಘಟನೆ ನಡೆಯಲು ಸಾಧ್ಯವೇ ಇಲ್ಲ. ಈ ಬಗ್ಗೆ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾಧಿಕಾರಿಯೊಂದಿಗೆ ಮಾತಾಡಿದ್ದೇನೆ. ಇಷ್ಟೆಲ್ಲ ಆದ ನಂತರ ಬಹಳ ತಡವಾಗಿ ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಈ ರೀತಿ ಕಿರುಕುಳ ಕೊಟ್ಟವರ ವಿರುದ್ಧವೂ ಕ್ರಮ ವಹಿಸಬೇಕೆಂದು ಒತ್ತಾಯಿಸಿದ್ದೇನೆ ಎಂದರು.
ಪದ್ಮನಾಭನಗರ ಕ್ಷೇತ್ರದ ವಿದ್ಯಾರ್ಥಿ ಸಿಇಟಿ ಪರೀಕ್ಷೆ ಬರೆಯಲು ಹೋದಾಗ ಮೂವರು ಸಿಬ್ಬಂದಿ ಜನಿವಾರ ತೆಗೆಯುವಂತೆ ಒತ್ತಡ ಹೇರಿದ್ದಾರೆ. ಇದು ನಮ್ಮ ಸಂಪ್ರದಾಯವಾಗಿದ್ದು, ತೆಗೆಯಲು ಸಾಧ್ಯವಿಲ್ಲ ಎಂದು ವಿದ್ಯಾರ್ಥಿ ಹೇಳಿದ್ದಾರೆ. ಇದು ಹಿಂದೂಗಳ ಭಾವನೆಯಾಗಿದೆ. ಆದರೆ ಸಿಎಂ ಸಿದ್ದರಾಮಯ್ಯನವರ ಸರ್ಕಾರ ಮೂರು ವರ್ಷದಿಂದ ಹಿಂದೂಗಳ ಭಾವನೆಗೆ ಧಕ್ಕೆ ಮಾಡುತ್ತಲೇ ಇದೆ. ಸಿಎಂ ಸಿದ್ದರಾಮಯ್ಯನವರಿಗೆ ಜನಿವಾರ, ಕುಂಕುಮ ನಾಮ ಹಾಗೂ ಹಿಂದೂಗಳ ಯಾವುದೇ ಸಂಪ್ರದಾಯ ಕಂಡರೆ ಆಗುವುದಿಲ್ಲ. ಮುಂದೆ ಶಿವದಾರ ಹಾಗೂ ಒಕ್ಕಲಿಗರ ಉಡುದಾರವನ್ನೂ ತೆಗೆದುಹಾಕುತ್ತಾರೆ. ಹೆಣ್ಣುಮಕ್ಕಳ ಮೂಗುತಿಗೂ ಟೇಪ್ ಹಾಕಿದ್ದಾರೆ. ಈ ಕುಟುಂಬದವರು ಪೊಲೀಸ್ ಠಾಣೆಗೆ ಹೋಗಿ ಮೂರು ಗಂಟೆಯಿಂದ ಕಾಯುತ್ತಿದ್ದಾರೆ. ಪೊಲೀಸರಿಗೆ ಸರ್ಕಾರದ ಕಡೆಯಿಂದ ಕರೆ ಬಂದಿದ್ದು, ದೂರು ಸ್ವೀಕಾರ ಮಾಡುತ್ತಿಲ್ಲ. ಕೂಡಲೇ ಈ ಸಿಬ್ಬಂದಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: CET Exam | ಜನಿವಾರ ತೆಗೆಸಿದ ಬೆಂಗಳೂರು ಕಾಲೇಜ್ – ಪೋಷಕರಿಂದ ದೂರು ದಾಖಲು
ಈ ವಿದ್ಯಾರ್ಥಿ ಪಿಯುಸಿಯಲ್ಲಿ 96% ಫಲಿತಾಂಶ ಪಡೆದಿದ್ದಾನೆ. ಆದರೆ, ಈಗ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ಈ ನಷ್ಟವನ್ನು ಯಾರು ತುಂಬಿಕೊಡುತ್ತಾರೆ? ಒಬ್ಬರಿಗೆ ಈ ರೀತಿ ಮಾಡಿದ್ದರೆ ವೈಯಕ್ತಿಕ ದ್ವೇಷ ಎಂದುಕೊಳ್ಳಬಹುದು. ಆದರೆ, ಸುಮಾರು ಇಪ್ಪತ್ತು ವಿದ್ಯಾರ್ಥಿಗಳಿಗೆ ಹೀಗೆ ಮಾಡಿದ್ದು, ಆ ಪೈಕಿ 6 ವಿದ್ಯಾರ್ಥಿಗಳು ದೂರು ನೀಡಿದ್ದಾರೆ. ಪರೀಕ್ಷೆಯ ವೇಳೆ ಜನಿವಾರ ತೆಗೆಸುವ ಪ್ರಕ್ರಿಯೆ ಇಲ್ಲಿಗೇ ಕೊನೆಯಾಗಬೇಕು. ಈ ಹಿಂದೆ ಪುಲ್ವಾಮದಲ್ಲಿ ಹಣೆಯಲ್ಲಿ ಕುಂಕುಮ ನೋಡಿ ಉಗ್ರರು ಗುಂಡು ಹಾಕಿದ್ದರು. ಇಲ್ಲಿ ಕಾಂಗ್ರೆಸ್ ಸರ್ಕಾರ ಜನಿವಾರ ನೋಡಿ ದೌರ್ಜನ್ಯ ಮಾಡುತ್ತಿದೆ. ಅಲ್ಲಿ ಪಾಕಿಸ್ತಾನದವರು ಹಾಗೆ ಮಾಡಿದರೆ, ಇಲ್ಲಿ ಕಾಂಗ್ರೆಸ್‌ನವರು ಹೀಗೆ ಮಾಡುತ್ತಿದ್ದಾರೆ ಎಂದು ದೂರಿದರು.
ಬೇರೆ ಧರ್ಮದವರಿಗೆ ಕಾಂಗ್ರೆಸ್ ಹೀಗೆ ಮಾಡುವುದಿಲ್ಲ. ಹಿಂದೂಗಳನ್ನು ಮಾತ್ರ ಟಾರ್ಗೆಟ್ ಮಾಡಲಾಗುತ್ತಿದೆ. ಪೊಲೀಸರು ಕೂಡಲೇ ನಿಷ್ಪಕ್ಷಪಾತ ತನಿಖೆ ಮಾಡಬೇಕು. ವಿದ್ಯಾರ್ಥಿಗಳು ಪರೀಕ್ಷೆ ಬರೆದು ಮೆಡಿಕಲ್, ಎಂಜಿನಿಯರಿಂಗ್ ಓದಬೇಕೆಂದು ಆಸೆ ಇಟ್ಟುಕೊಂಡಿರುತ್ತಾರೆ. ವಿದ್ಯಾರ್ಥಿಗಳು ವರ್ಷಪೂರ್ತಿ ಇದಕ್ಕಾಗಿ ಓದಿರುತ್ತಾರೆ. ಅವರ ಕನಸುಗಳನ್ನು ಸರ್ಕಾರ ಹಾಳು ಮಾಡುತ್ತಿದೆ. ವಿದ್ಯಾರ್ಥಿಗಳ ಮೇಲೆ ಮಾನಸಿಕ ಒತ್ತಡ ಹೇರಲಾಗುತ್ತಿದೆ. ಇಷ್ಟಾದರೂ ಪೊಲೀಸರು ಪರಿಶೀಲನೆ ಮಾಡುವುದರಲ್ಲೇ ಇದ್ದರು. ನಾನು ಆಯುಕ್ತರ ಬಳಿ ಹೋಗುತ್ತೇನೆ ಎಂದು ಗೊತ್ತಾದ ಕೂಡಲೇ ಎಫ್‌ಐಆರ್ ಪ್ರತಿ ನೀಡುತ್ತೇನೆ ಎಂದು ತಿಳಿಸಿದ್ದಾರೆ. ಇಂತಹ ಘಟನೆ ಮರುಕಳಿಸಬಾರದು ಎಂದರು.
ಕಾಂಗ್ರೆಸ್ ಸರ್ಕಾರದ ಕುಕೃತ್ಯ- ಎಕ್ಸ್‌ನಲ್ಲಿ ಖಂಡನೆ
ಘಟನೆಯನ್ನು ಎಕ್ಸ್ ಖಾತೆಯಲ್ಲಿ ಖಂಡಿಸಿರುವ ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಂಗಲ್ಯ, ಜನಿವಾರ ತೆಗೆಸುವ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರದ ಕುಕೃತ್ಯಗಳು ಮುಂದುವರಿಯುತ್ತಲೇ ಇವೆ. ಕಳೆದ ವರ್ಷ ಸಿಇಟಿ, ನೀಟ್ ಪರೀಕ್ಷೆಗಳ ಸಂದರ್ಭದಲ್ಲಿ ಜನಿವಾರ ಕತ್ತರಿಸಿ, ಕೆಪಿಎಸ್ಸಿ ಪರೀಕ್ಷೆಯಲ್ಲಿ ಮಾಂಗಲ್ಯ ತೆಗೆಸಿ ಪರೀಕ್ಷೆ ಬರೆಯುವಂತೆ ಹೇಳಿದ್ದ ಕಾಂಗ್ರೆಸ್ ಸರ್ಕಾರ ಈ ವರ್ಷವೂ ತನ್ನ ಹಳೆ ಚಾಳಿ ಮುಂದುವರಿಸಿದೆ. ಬೆಂಗಳೂರಿನ ಕೋರಮಂಗಲದ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯೊಬ್ಬನಿಗೆ ಜನಿವಾರ ತೆಗೆಸಿ ಪರೀಕ್ಷೆ ಬರೆಯುವಂತೆ ಒತ್ತಾಯಿಸುವ ಮೂಲಕ ಮತ್ತೊಮ್ಮೆ ಹಿಂದೂ ಸಮಾಜದ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತಂದಿದೆ. ಕಾಂಗ್ರೆಸ್ ಆಡಳಿತದಲ್ಲಿ ಒಂದೆಡೆ ಹಿಂದೂಗಳಿಗೆ ರಕ್ಷಣೆಯಿಲ್ಲ. ಇನ್ನೊಂದೆಡೆ ಹೀಗೆ ಹಿಂದೂಗಳ ನಂಬಿಕೆ, ಆಚಾರಗಳ ಮೇಲೆ ದಾಳಿ ಮಾಡುವ ಕೆಟ್ಟ ರಾಜಕಾರಣ ಮಾಡುತ್ತಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಕೆಪಿಎಸ್‌ಸಿ ಪರೀಕ್ಷೆ ನಡೆಯುವ ಸಂದರ್ಭದಲ್ಲಿ, ಮಹಿಳೆಯೊಬ್ಬರ ಮಾಂಗಲ್ಯ ಸರವನ್ನು ತೆಗೆಸಿದ್ದರು. ಈ ಬಗ್ಗೆ ಮಾಧ್ಯಮದವರು ಕಾಂಗ್ರೆಸ್ಸಿಗರನ್ನು ಪ್ರಶ್ನಿಸಿದರೆ, ‘ಏಯ್ ಅದು ರೂಲ್ಸು ಕಣ್ರಿ’ ಎಂದು ಅಬ್ಬರಿಸಿದ್ದರು. ಆದರೆ ಅದೇ ಮಾಧ್ಯಮದವರು ಹಾಗಾದರೆ ರೂಲ್ಸ್ ಪ್ರಕಾರ ಹಿಜಾಬ್ ಏಕೆ ತೆಗೆಸಲಿಲ್ಲ ಎಂದು ಮರು ಪ್ರಶ್ನೆ ಹಾಕಿದರೆ ಅದಕ್ಕೆ ಕಾಂಗ್ರೆಸ್ಸಿಗರದ್ದು ‘ನೋ ಕಾಮೆಂಟ್ಸ್.. ನೋ ಕಾಮೆಂಟ್ಸ್’. ಸಿಇಟಿ ಪರೀಕ್ಷೆಯ ಹಾಲ್ ಟಿಕೆಟ್‌ನಲ್ಲಿ ಅಥವಾ ಯಾವುದೇ ಮಾರ್ಗಸೂಚಿಯಲ್ಲಿ ಜನಿವಾರ ಧರಿಸಬಾರದು ಎಂದು ಎಲ್ಲಿಯೂ ಉಲ್ಲೇಖವಾಗಿಲ್ಲ. ಹಾಗಿದ್ದ ಮೇಲೆ ಜನಿವಾರ ತೆಗೆಯುವಂತೆ ಬಲವಂತ ಮಾಡುವುದು ಯಾಕೆ? ಈ ಅನ್ಯಾಯಕ್ಕೆ, ದೌರ್ಜನ್ಯಕ್ಕೆ ಯಾರು ಹೊಣೆ? ಸಂವಿಧಾನದ ಬಗ್ಗೆ ಮಾರುದ್ದ ಭಾಷಣ ಬಿಗಿಯುವ ಸಿಎಂ ಸಿದ್ದರಾಮಯ್ಯ ಅವರಿಗೆ ಜನಿವಾರ ಧರಿಸಿದ ವಿದ್ಯಾರ್ಥಿಯ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿರುವುದು ಕಣ್ಣಿಗೆ ಕಾಣಿಸುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: BJP ಮುಖಂಡನ ಪುತ್ರನ ವಿರುದ್ಧ ಅತ್ಯಾಚಾರ ಆರೋಪ ಕೇಸ್ – ಸಂತ್ರಸ್ತೆಗೆ ಪ್ರತಿ ತಿಂಗಳು 75 ಸಾವಿರ ಜೀವನಾಂಶ ನೀಡಲು ಹೈಕೋರ್ಟ್ ಆದೇಶ
ರಾಜ್ಯದಲ್ಲಿರುವ ಕಾಂಗ್ರೆಸ್ ಅಲಿಯಾಸ್ ಆಧುನಿಕ ಮುಸ್ಲಿಂ ಲೀಗ್ ಸರ್ಕಾರ ಷರಿಯಾ ಕಾನೂನನ್ನು ಅನಧಿಕೃತವಾಗಿ ಜಾರಿಗೆ ತಂದಿದೆ. ಹಿಂದೂ ಆಚಾರ-ವಿಚಾರಗಳನ್ನು ಕಾಂಗ್ರೆಸ್ ದ್ವೇಷಿಸುತ್ತಿದೆ. ಒಂದೆಡೆ ರಂಜಾನ್ ತಿಂಗಳಲ್ಲಿ ಉರ್ದು ಮಾಧ್ಯಮ ಶಾಲೆಗಳ ಸಮಯ ಬದಲಾವಣೆ ಮಾಡುವ ಸರ್ಕಾರ ಮತ್ತೊಂದೆಡೆ ಪರೀಕ್ಷೆಯ ತಪಾಸಣೆ ನೆಪದಲ್ಲಿ ಮಾಂಗಲ್ಯ ತೆಗೆಯಲು, ಜನಿವಾರ ತುಂಡರಿಸಲು ಅವಕಾಶ ನೀಡುತ್ತಿದೆ. ನ್ಯಾಯಾಲಯ ಸಮಾನ ವಸ್ತ್ರಸಂಹಿತೆಗೆ ಆದೇಶ ನೀಡಿದ್ದರೂ ಸಿದ್ದರಾಮಯ್ಯ ಸಾಹೇಬರು ಸೇರಿದಂತೆ ಕಾಂಗ್ರೆಸ್ ನಾಯಕರು ಹಿಜಾಬ್ ಹಕ್ಕುಗಳ ಬಗ್ಗೆ ಮಾತನಾಡಿದರು, ಬೀದಿಗಿಳಿದರು. ಆದರೆ ಇಂದು ಜನಿವಾರ ತುಂಡರಿಸಿದಾಗ ಅವರೆಲ್ಲರೂ ಮೌನಕ್ಕೆ ಶರಣಾಗಿದ್ದಾರೆ. ಜಾತಿಗಣತಿ ಹೆಸರಲ್ಲಿ ಹಿಂದೂ ಸಮಾಜವನ್ನು ವಿಭಜಿಸುವುದು, ಹಿಂದೂ ಸಂಪ್ರದಾಯವನ್ನು ಮೂಢನಂಬಿಕೆ ಹೆಸರಿನಲ್ಲಿ ಅವಹೇಳನ ಮಾಡುವುದು, ಹಿಂದೂ ಆಚರಣೆ-ಸಂಪ್ರದಾಯಕ್ಕೆ ನಿರ್ಬಂಧ ಹೇರುವುದು, ಹಿಂದೂ ಧರ್ಮದ ಅವಹೇಳನ ಮಾಡುವವರಿಗೆ ಪ್ರಶಸ್ತಿ ನೀಡಿ ಗೌರವಿಸುವುದನ್ನು ಕಾಂಗ್ರೆಸ್ ನಿರಂತರವಾಗಿ ನಡೆಸುತ್ತಾ ಬಂದಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಸಂಘಟಿತ ಹಿಂದೂ ಸಮಾಜ ಉತ್ತರ ನೀಡಲಿದೆ. ಚಾಣಕ್ಯನ ಶಿಖೆಗೆ ಕೈ ಹಾಕಿದ ನಂದರ ಕಥೆಯಂತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.



