ಟೆಹ್ರಾನ್: ಹಾರ್ಮುಜ್‌ನಿಂದ (Strait of Hormuz) ಹೊರಹೋಗಲು ಯತ್ನಿಸುತ್ತಿದ್ದ ಎರಡು ತೈಲ ಟ್ಯಾಂಕರ್‌ಗಳನ್ನು (Oil Tankers) ತಡೆದು, ವಾಪಸ್ ಹೋಗುವಂತೆ ಯುಎಸ್ ನೌಕಾಪಡೆ (US Navy) ಆದೇಶಿಸಿದೆ.
ಹಡಗುಗಳು ಒಮಾನ್ ಕೊಲ್ಲಿಯ ಚಾಬಹಾರ್ ಬಂದರಿನಿಂದ ಹೊರಟಿದ್ದು, ಯುದ್ಧನೌಕೆ ರೇಡಿಯೋ ಮೂಲಕ ಅವರನ್ನು ಸಂಪರ್ಕಿಸಿದೆ. ಅವರಿಗೆ ಹಿಂತಿರುಗಲು ಸೂಚನೆ ನೀಡಲಾಗಿದೆ ಎಂದು ಯುಎಸ್ ನೌಕಾಪಡೆ ತಿಳಿಸಿದೆ. ಇದನ್ನೂ ಓದಿ: ಅಮೆರಿಕ ದಿಗ್ಭಂಧನಕ್ಕೆ ಸೆಡ್ಡು – ಹಾರ್ಮುಜ್ ದಾಟಿದ ಇರಾನ್ ಬಂದರಿನಿಂದ ಬಂದ 2 ಹಡಗು
ಜಾಗತಿಕ ತೈಲ ಪೂರೈಕೆಯ ಸರಿಸುಮಾರು ಐದನೇ ಒಂದು ಭಾಗದಷ್ಟು ಸಾಗಣೆಯಾಗುವ ಪ್ರಮುಖ ಇಂಧನ ಚಾಕ್‌ಪಾಯಿಂಟ್ ಹಾರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿದೆ. ಹೀಗಾಗಿ, ಜಲಸಂಧಿಯನ್ನು ಇರಾನ್ ವಶದಿಂದ ಮುಕ್ತಗೊಳಿಸಲು ಅಮೆರಿಕ ದಿಗ್ಬಂಧನ ಜಾರಿಗೊಳಿಸಿದೆ.
ಫೆಬ್ರವರಿ 28 ರಂದು ಭುಗಿಲೆದ್ದ ಇರಾನ್-ಅಮೆರಿಕ-ಇಸ್ರೇಲ್ ಸಂಘರ್ಷವನ್ನು ಕೊಲೆಗೊಳಿಸಲು ಇಸ್ಲಾಮಾಬಾದ್‌ನಲ್ಲಿ ನಡೆದ ಸಂಧಾನ ಮಾತುಕತೆ ವಿಫಲವಾಯಿತು. ಇದರ ಬೆನ್ನಲ್ಲೇ ಟ್ರಂಪ್ ಹಾರ್ಮುಜ್ ದಿಗ್ಬಂಧನ ಕ್ರಮ ಕೈಗೊಂಡಿದ್ದಾರೆ. ಸೋಮವಾರದಿಂದ ದಿಗ್ಬಂಧನ ಪ್ರಾರಂಭವಾದಾಗಿನಿಂದ ಯಾವುದೇ ಹಡಗುಗಳು ಈ ಮೂಲಕ ಹಾದು ಹೋಗಿಲ್ಲ ಎನ್ನಲಾಗಿದೆ.
ಅಮೆರಿಕದ ನೌಕಾ ದಿಗ್ಬಂಧನದ ಹೊರತಾಗಿಯೂ ಇರಾನ್ ಬಂದರುಗಳಿಂದ ಹೊರಟ ಮೂರು ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ದಾಟುವಲ್ಲಿ ಯಶಸ್ವಿಯಾಗಿವೆ ಎಂದು ಕಡಲ ಟ್ರ್ಯಾಕಿಂಗ್ ದತ್ತಾಂಶವು ತಿಳಿಸಿದೆ. ಇದನ್ನೂ ಓದಿ: ಹಾರ್ಮುಜ್‌ಗೆ ಬಂದ್ರೆ ಕತೆ ಮುಗಿಸಿಬಿಡ್ತೀನಿ – ದಿಗ್ಬಂಧನ ಮುರಿಯುವ ಯಾವ್ದೇ ಪ್ರಯತ್ನ ಬೇಡ: ಟ್ರಂಪ್ ಬಿಗ್ ವಾರ್ನಿಂಗ್
ಲೈಬೀರಿಯಾ ಧ್ವಜ ಹೊತ್ತ ಬೃಹತ್ ನೌಕೆ ಕ್ರಿಸ್ಟಿಯಾನ್ನಾ, ಕೊಮೊರೊಸ್ ಧ್ವಜ ಹೊತ್ತ ಟ್ಯಾಂಕರ್ ಎಲ್ಪಿಸ್ ಮತ್ತು ಇರಾನಿನ ಬಂದರುಗಳಲ್ಲಿ ಸರಕು ಕಾರ್ಯಾಚರಣೆಯ ನಂತರ ಚಾಕ್‌ಪಾಯಿಂಟ್ ಮೂಲಕ ಚಲಿಸಿದ ಬೃಹತ್ ನೌಕೆ ಅರ್ಗೋ ಮಾರಿಸ್, ಹಾರ್ಮುಜ್ ಜಲಸಂಧಿಯನ್ನು ದಾಟಿವೆ ಎನ್ನಲಾಗಿದೆ.

