ಡಿಯರ್ ಮಳೆ ಫ್ರೆಂಡ್..!
ಇವತ್ತು ನೀನು ತುಂಬಾ ನೆನಪಾದೆ. ಯಾಕಂದ್ರೆ ಆಕಾಶದಲ್ಲಿ ಮೋಡವೇ ಇರದೇ, ಮಳೆ ಬರೋ ಯಾವ ಲಕ್ಷಣವೂ ಇರದೇ, ಇದ್ದಕ್ಕಿದ್ದಂತೆ ಜೋರಾಗಿ ಮಳೆ ಬಂತು. ನೀನು ಅವತ್ತು ಅಚಾನಕ್ಕಾಗಿ ಸಿಕ್ಕಿದ್ಯಲ್ಲ ಸೇಮ್ ಅದೇ ಥರ.
ಅವತ್ತು ಅಷ್ಟೇ, ಇವತ್ತಿನ ಹಾಗೇ ವರ್ಷದ ಮೊದಲ ಮಳೆ. ನಾನ್ ಪೇಟೆಯಿಂದ ಮನೆ ಕಡೆ ಬೈಕಲ್ಲಿ ಬರ್ತಿದ್ದೇ. ಯಾವ ಸುಳಿವೂ ಇರದೇ ಜೋರಾಗಿ ಮಳೆ ಸುರಿದಿತ್ತು. ಬೇರೆ ದಾರಿಯೇ ಕಾಣದೇ ಮಾಲ್ಗುಡಿ ಬಸ್ಟ್ಯಾಂಡ್ ಪಕ್ಕದಲ್ಲಿ ಬೈಕ್ ನಿಲ್ಲಿಸಿ ಒಳಗೆ ಹೋಗಿ ನಿಂತಿದ್ದೆ. ಎರಡು ನಿಮಿಷ ಕೂಡ ಕಳೆದಿರಲಿಲ್ಲ. ನನ್ನ ಗಾಡಿ ಪಕ್ಕದಲ್ಲೇ ಸ್ಕೂಟಿ ನಿಲ್ಲಿಸಿ, ಮೈತುಂಬಾ ಮಳೆ ಹನಿಗಳ ಮುತ್ತಿನ ಮಣಿ ಹೊತ್ತು ನೀನ್ ಬಂದೆ. ಇದನ್ನೂ ಓದಿ: ಒಪ್ತಿದ್ನೋ.. ಬಿಡ್ತಿದ್ನೋ.. ನೀನು ನನಗೆಲ್ಲಾ ಹೇಳ್ಬಿಡ್ಬೇಕಿತ್ತು..!
ಒದ್ದೆಯಾದ ನವಿಲೊಂದು ತನ್ನ ಗರಿ ಬಿಚ್ಚಿ ಕೊಡವಿದಂತೆ ನಿನ್ನ ಸೆರಗನ್ನ ಕೊಡವಿದ ರೀತಿ.. ವಾವ್! ಆ ಬಿಳಿ ಬಣ್ಣದ ಸೀರೆಯಲ್ಲಿ ಮಿಂಚಿನ ಗೆರೆಗಳಂತೆ ಹೊಳೆಯುತ್ತಿದ್ದ ನಿನ್ನ ಅಂದ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಅದಕ್ಕೆ ಹೋಲಿಕೆಯೇ ಇಲ್ಲ. ಅದೊಂದು ಸದಾ ಜೀವಂತ ದೃಶ್ಯಕಾವ್ಯ! ಮಳೆಯ ನಡುವೆ ಜೋರಾಗಿ ಅಬ್ಬರಿಸುತ್ತಿದ್ದ ಗುಡುಗಿಗೆ ಭಯ ಬಿದ್ದು, ಸಿನಿಮಾದಲ್ಲಿ ಹೀರೋನ ಹೀರೋಯಿನ್ ತಬ್ಬಿಕೊಳ್ಳೋ ಥರ ಬಂದು ತಬ್ಬಿಕೊಂಡಿದ್ರೆ ಅನ್ನೋ ಆಸೆ ಸಹ ಕಾಡಿತ್ತು! ಆದ್ರೆ ಅದ್ಯಾವುದು ಆಗಲೇ ಇಲ್ಲ.

ನಿನ್ನ ಮನಸ್ಸಲ್ಲಿ ದೇವ್ರೇ ಮಳೆ ಕಡಿಮೆ ಆಗಲಿ ಅನ್ನೋ ಪ್ರಾರ್ಥನೆ ಇತ್ತೇನೋ? ನನಗೆ ಮಾತ್ರ ದೇವ್ರೇ ಮಳೆ ಜಾಸ್ತಿ ಆಗಲಿ. ಮನೆ ಎಲ್ಲೂ ಓಡಿ ಹೋಗಲ್ಲ. ನಿನ್ನ ಜೊತೆ ಇನ್ನೂ ಸ್ವಲ್ಪ ಹೊತ್ತು ಇರಬಹುದು, ಮಾತಾಡೋ ಯಾವುದಾದ್ರೂ ಸನ್ನಿವೇಶ ಸೃಷ್ಟಿ ಆಗ್ಬಹುದೇನೋ ಅಂತಾನೇ ಅನ್ಸೋದು.
ಆ ಗ್ಯಾಪಲ್ಲಿ ಅಯ್ಯೋ ಮಳೆ ಕಡಿಮೆ ಆಗಲೇ ಇಲ್ಲ ಅಂತ ನನ್ನ ಪಾಡಿಗೆ ಗೊಣಗಿದೆ. ಆ ಕಡೆಯಿಂದ ಹೌದಲ್ವಾ? ಮಳೆ ಬರ್ತಾನೆ ಇದೆ. ಸಂಜೆ ಬೇರೆ ಆಗ್ತಿದೆ. ಅನ್ನೋ ಧ್ವನಿ ಬಂತು. ಹೀಗೆ ಆರಂಭಗೊಂಡ ಮಾತಿನ ಮಳೆಯಲ್ಲಿ. ನಿಜವಾದ ಮಳೆ ನಿಂತಿದ್ದೆ ಗೊತ್ತಾಗಲಿಲ್ಲ.. ಅಷ್ಟು ಮೈಮರೆತು ಪರಿಚಿತರಂತೆ ಹರಟೆ ಹೊಡೆದ್ವಿ!
ಎಷ್ಟು ಚೆನ್ನಾಗಿ ಮಾತಾಡ್ತಿರಿ ಮೇಡಂ, ಮಳೆ ನಿಂತಿದ್ದೇ ಗೊತ್ತಾಗಲಿಲ್ಲ ನೋಡಿ, ಅಂದೆ. ಆಗ ಆ ಸಂಜೆ ಕೆಂಪಲ್ಲಿ ಕಂಡ ನಿನ್ನ ನಗು. ಆ ವೆದರ್ಲ್ಲಿ ಒಂದು ಕಪ್ ಟೀ ಸಿಕ್ಕಷ್ಟು ಖುಷಿ ಕೊಟ್ಟಿತ್ತು. ಹಾಗೇ ಇಬ್ಬರೂ ಬಸ್ಟ್ಯಾಂಡ್ನಿಂದ ಹೊರಗೆ ಬಂದು, ಗಾಡಿ ಒರೆಸಿ ಹೊರಡುವಾಗ ಅದ್ಯಾಕೋ ಕಾಲು, ಮನಸ್ಸು ಭಾರವಾಗಿತ್ತು.
ಹೊರಡುವಾಗ ನಿನ್ನ ಕೊನೆಯ ನೋಟದಲ್ಲಿ ಅದೇನೋ ಮಾತು ಉಳಿದಿತ್ತು ಅಂತ ಎದ್ದು ಕಾಣಿಸ್ತಿತ್ತು. ಅದೇನು ಅಂತ ಮನಸ್ಸಿಗೆ ಅರ್ಥ ಆಯ್ತು. ಹಾಗೇ ನನ್ನಲ್ಲೂ ಆಡದೇ ಉಳಿದ ಮಾತು ಮಳೆ ಮುಗಿದ ಮೇಲೂ ಮರದ ಹನಿಯಂತೆ ಮನಸ್ಸಲ್ಲೇ ಉಳಿದು ಹೋಯ್ತು. ಈಗಲೂ ಆ ಮೌನ ಮಾತಾಗಿ ಸುರಿಯುವ ಮಳೆಗಾಗಿ ಕಾಯುತ್ತಲೇ ಇದ್ದೇನೆ..! ಇದನ್ನೂ ಓದಿ: ಮುಗುಳ್ನಗೆಯ ಗಿಫ್ಟ್ ಹಿಡ್ಕೊಂಡು ಮತ್ತೆ ಮತ್ತೆ ಸಿಗ್ತಾಳೆ ಆ ಅಪರಿಚಿತೆ..!
ಇಂತಿ ನಿನ್ನ ಪ್ರೀತಿಯ ಸೆಳತಕ್ಕೆ ಸಿಕ್ಕವನು

