ಹಾಸನ: 40 ವರ್ಷವಾದ್ರೂ ತನಗಿನ್ನೂ ಮದ್ವೆ (Marriage) ಮಾಡಿಸಿಲ್ಲ ಅಂತ ಪಾಪಿ ಮಗನೊಬ್ಬ ಹೆತ್ತ ತಾಯಿಯನ್ನೇ ಭೀಕರವಾಗಿ ಕೊಲೆ ಮಾಡಿರುವ ಘಟನೆ ಹಾಸನ (Hassan) ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ನಡೆದಿದೆ.
ಗಂಗಮ್ಮ (65) ಕೊಲೆಯಾದ ಮಹಿಳೆ, ಉಮಾಶಂಕರ್ (40) ತಾಯಿಯನ್ನ ಕೊಂದ ಪುತ್ರ. ಇದನ್ನೂ ಓದಿ: ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ವೇ ನಲ್ಲಿ ಇಂದಿನಿಂದ ಟೋಲ್ ದರ ಏರಿಕೆ; ಯಾವ ವಾಹನಕ್ಕೆ ಎಷ್ಟು?

ಘಟನೆ ನಡೆದಿದ್ದು ಹೇಗೆ?
ಕಳೆದ 1 ವರ್ಷದ ಹಿಂದೆ ಕುಂಭಮೇಳಕ್ಕೆ ತೆರಳಿ ವಾಪಾಸ್ ಆಗುವಾಗ ನಡೆದ ಅಪಘಾತದಲ್ಲಿ ಆರೋಪಿ ಉಮಾಶಂಕರ್ ತಲೆಗೆ ಪೆಟ್ಟು ಬಿದ್ದಿತ್ತು. ಇದರಿಂದ ಒಮ್ಮೊಮ್ಮೆ ಬುದ್ದಿ ಭ್ರಮಣೆಯಾದವನಂತೆ ವರ್ತಿಸುತ್ತಿದ್ದನಂತೆ. ಪದೇ ಪದೇ ಮದುವೆ ಮಾಡಿಸುವಂತೆ ತಾಯಿ ಜೊತೆ ಜಗಳವಾಡುತ್ತಿದ್ದನಂತೆ. ಮಾರ್ಚ್ 26 ರಂದು ಕೂಡ ತಾಯಿ ಗಂಗಮ್ಮರೊಂದಿಗೆ ಮದುವೆ ವಿಚಾರಕ್ಕೆ ಜಗಳ ತೆಗೆದಿದ್ದನಂತೆ. ಈ ವೇಳೆ ಮಾತಿಗೆ ಮಾತು ಬೆಳೆದು ಮೊದಲು ಕೈನಿಂದ ತಾಯಿಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ಆಕೆ ಕುಸಿದು ಬಿದ್ದಾಗ ತಲೆ ಮೇಲೆ ಕಲ್ಲು ಎತ್ತಿಹಾಕಿದ್ದಾನೆ ಉಮಾಶಂಕರ್.
ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಗಂಗಮ್ಮ ಅವರನ್ನ ಐಸಿಯುಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮಾ.30 ರ ಮಧ್ಯರಾತ್ರಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಶ್ರವಣಬೆಳಗೊಳ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ತನಿಖೆ ಪ್ರಗತಿಯಲ್ಲಿದೆ.

