ಬಳ್ಳಾರಿ: ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದ ಅವೈಜ್ಞಾನಿಕ ರಸ್ತೆ ಕಾಮಗಾರಿಗೆ ಮತ್ತೊಂದು ಅಮಾಯಕ ಜೀವ ಬಲಿಯಾಗಿದೆ. ರಾತ್ರಿ ಡ್ಯೂಟಿ ಮುಗಿಸಿ ಮನೆಗೆ ಮರಳುತ್ತಿದ್ದ ದಂಪತಿ ಬೈಕ್ ಸಮೇತ ರಸ್ತೆ ಗುಂಡಿಗೆ ಬಿದ್ದ ಪರಿಣಾಮ, ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿ, ಪತಿ ತೀವ್ರವಾಗಿ ಗಾಯಗೊಂಡಿರುವ ಭೀಕರ ಘಟನೆ ಬಳ್ಳಾರಿ (Ballari) ಜಿಲ್ಲೆಯ ಸಿರುಗುಪ್ಪ ತಾಲೂಕಿನ ಚಾಣಕನೂರು ಕ್ರಾಸ್ ಬಳಿ ನಡೆದಿದೆ.
ರಾವಿಹಾಳ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ನರ್ಸ್(Nurse) ಆಗಿ ಸೇವೆ ಸಲ್ಲಿಸುತ್ತಿದ್ದ ಮಂಜುಳ (36) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರ ಪತಿ ಚಂದ್ರಶೇಖರ್ (46) ಅವರಿಗೆ ಗಂಭೀರ ಗಾಯಗಳಾಗಿದ್ದು, ಸದ್ಯ ಬಳ್ಳಾರಿಯ ವಿಮ್ಸ್ (VIMS) ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಈ ದಂಪತಿ ರಾವಿಹಾಳ ಸರ್ಕಾರಿ ಆರೋಗ್ಯ ಕೇಂದ್ರದಲ್ಲೇ ಆರೋಗ್ಯ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಮಂಜುಳ ಹಾಗೂ ಚಂದ್ರಶೇಖರ್ ಅವರು ಎಂದಿನಂತೆ ಆಸ್ಪತ್ರೆಯಲ್ಲಿ ತಮ್ಮ ರಾತ್ರಿ ಅವಧಿಯ ಕರ್ತವ್ಯ ಮುಗಿಸಿ ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದರು. ರಾಜ್ಯ ಹೆದ್ದಾರಿ 63ರ ಚಾಣಕನೂರು ಕ್ರಾಸ್ ಬಳಿ ರಸ್ತೆ ಕಾಮಗಾರಿಗಾಗಿ ದೊಡ್ಡ ಗುಂಡಿಯೊಂದನ್ನು ತೋಡಲಾಗಿತ್ತು. ಆದರೆ ಕಾಮಗಾರಿ ನಡೆಸುವವರು ಯಾವುದೇ ಮುನ್ನೆಚ್ಚರಿಕೆ ಫಲಕ ಹಾಕದೇ ಗುಂಡಿಯನ್ನೂ ಮುಚ್ಚದೇ ಹಾಗೇ ಬಿಟ್ಟಿದ್ದರು. ರಾತ್ರಿಯ ಕತ್ತಲಲ್ಲಿ ಈ ಗುಂಡಿ ಕಾಣಿಸದ ಕಾರಣ ಬೈಕ್ ನೇರವಾಗಿ ಗುಂಡಿಗೆ ಬಿದ್ದಿದೆ. ಬಿದ್ದ ರಭಸಕ್ಕೆ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಮಂಜುಳ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಖಾತೆ ಹಂಚಿಕೆಯಾದ ಒಂದೇ ಗಂಟೆಯಲ್ಲಿ ಖಾದರ್ ಸರ್ಪ್ರೈಸ್ ವಿಸಿಟ್ – ಆಸ್ಪತ್ರೆ ಸಿಬ್ಬಂದಿ ಮೇಲೆ ಗರಂ
