ಟೆಹ್ರಾನ್: ಹಾರ್ಮುಜ್ ಜಲಸಂಧಿಯ (Hormuz Strait) ಮೂಲಕ ಸುರಕ್ಷಿತ ಸಾಗಣೆಯನ್ನ ಖಚಿತಪಡಿಸುವ ಪ್ರಯತ್ನಗಳಿಗೆ 20 ಕ್ಕೂ ಹೆಚ್ಚು ದೇಶಗಳು ಬೆಂಬಲ ನೀಡುವುದಾಗಿ ಪ್ರತಿಜ್ಞೆ ಮಾಡಿವೆ. ಅಲ್ಲದೇ ವಿಶ್ವದ ತೈಲ (Oil) ಮತ್ತು ಅನಿಲದ 5ನೇ ಒಂದು ಭಾಗವನ್ನು ಸಾಗಿಸುವ ಪ್ರಮುಖ ಜಲಮಾರ್ಗವನ್ನ ಮುಚ್ಚಿರುವ ಇರಾನ್ ಕ್ರಮವನ್ನ ಬಲವಾಗಿ ಖಂಡಿಸಿವೆ.
ಯುಎಇ (UAE), ಬಹ್ರೇನ್ ಸೇರಿದಂತೆ ಒಟ್ಟು 22 ರಾಷ್ಟ್ರಗಳು ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ಪರ್ಷಿಯನ್ ಕೊಲ್ಲಿಯಲ್ಲಿ ಇರಾನ್ ನಡೆಸಿದ ದಾಳಿಯನ್ನ ಕಟುವಾದ ಪದಗಳಲ್ಲಿ ಖಂಡಿಸಿವೆ. 22 ದಿನಗಳ ಕಳೆದರೂ ಸಂಘರ್ಷ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆ ಈ ಘೋಷಣೆ ಮಾಡಲಾಗಿದೆ.

ಕೊಲ್ಲಿಯಲ್ಲಿ ನಿರಾಯುಧ ವಾಣಿಜ್ಯ ಹಡಗುಗಳ ಮೇಲೆ ಇರಾನ್ ನಡೆಸಿದ ಇತ್ತೀಚಿನ ದಾಳಿಗಳು (Iran Strikes), ತೈಲ ಮತ್ತು ಅನಿಲ ಸ್ಥಾಪನೆ ಸೇರಿದಂತೆ ನಾಗರಿಕ ಮೂಲ ಸೌಕರ್ಯಗಳ ಮೇಲೆ ನಡೆಸಿದ ದಾಳಿಗಳು, ಜೊತೆಗೆ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿರುವ ಇರಾನ್ ಕ್ರಮವನ್ನು ಕಠಿಣ ಪದಗಳಲ್ಲಿ ಖಂಡಿಸುತ್ತೇವೆ. ಜಲಸಂಧಿಯ ಮೂಲಕ ಸುರಕ್ಷಿತ ಸಾಗಣೆಯನ್ನು ಖಚಿತಪಡಿಸಿಕೊಳ್ಳಲು ಸೂಕ್ತ ಪ್ರಯತನ್ಗಳಿಗೆ ಬೆಂಬಲ ನೀಡುವುದಾಗಿ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
ಫೆಬ್ರವರಿ 28 ರಂದು ಅಮೆರಿಕ – ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದ ನಂತರ, ಟೆಹ್ರಾನ್ ತನ್ನ ಗಲ್ಫ್ ನೆರೆಹೊರೆಯವರ ಮೇಲೆ ಮತ್ತು ಜಲಸಂಧಿಯ ಮೂಲಕ ಸಾಗುವ ಹಡಗುಗಳ ಮೇಲೆ ದಾಳಿ ಮಾಡುವ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ.

