– ಮನೆಯಿಂದ 200 ಮೀ. ದೂರದಲ್ಲೇ ಮೃತದೇಹ ಪತ್ತೆ
ಶ್ರೀನಗರ: ಕುರಾನ್ (Quran) ಅಭ್ಯಾಸಕ್ಕೆಂದು ಮನೆಯಿಂದ ಹೊರಹೋಗಿದ್ದ 12 ವರ್ಷದ ಬಾಲಕಿಯೊಬ್ಬಳ ಮೇಲೆ ದುಷ್ಕರ್ಮಿಗಳು ಅತ್ಯಾಚಾರವೆಸಗಿ ಕೊಲೆಗೈದಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ (Budgam) ಜಿಲ್ಲೆಯಲ್ಲಿ ನಡೆದಿದೆ. ಬಾಲಕಿಯ ಮನೆಯಿಂದ 200 ಮೀಟರ್ ದೂರದಲ್ಲೇ ಅಪ್ರಾಪ್ತೆಯ ಮೃತದೇಹ ಪತ್ತೆಯಾಗಿದೆ.
ಜಮ್ಮುವಿನಲ್ಲಿ (Jammu) ಈ ಘಟನೆ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ, ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಹಚ್ಚುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ. ಈಗಾಗಲೇ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ಪ್ರಾಥಮಿಕ ತನಿಖೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ (Rape) ಎಸಗಿ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. ಈ ನಡುವೆ ಶಿಕ್ಷಣ ಸಚಿವೆ ಸಕೀನಾ ಯಾಟೂ ಸೇರಿದಂತೆ ಅನೇಕ ನಾಯಕರು ಬಾಲಕಿಯ ಕುಟುಂಬ ಸಂಪರ್ಕಿಸಿದ್ದು, ಅಪ್ರಾಪ್ತೆಯ ಸಾವಿಗೆ ನ್ಯಾಯ ಕೊಡಿಸುವುದಾಗಿ ಭರವಸೆ ಕೊಟ್ಟಿದ್ದಾರೆ.

ಶನಿವಾರ ಬೆಳಿಗ್ಗೆ 7:15ರ ಸುಮಾರಿಗೆ ಅಪ್ರಾಪ್ತೆಯ ಮೆನೆಯಿಂದ 200 ಮೀಟರ್ ದೂರದಲ್ಲಿ ಶವ ಪತ್ತೆಯಾಗಿತ್ತು. ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಿದ ವೇಳೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ಗೊತ್ತಾಗಿದೆ. ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ. ಪಾರದರ್ಶಕವಾಗಿ ತನಿಖೆ ನಡೆಸುವುದಾಗಿ ಬುದ್ಗಾಮ್‌ನ ಎಸ್‌ಪಿ ಹರಿಪ್ರಸಾದ್ ಹೇಳಿದ್ದಾರೆ.
ಕುರಾನ್ ಅಭ್ಯಾಸಕ್ಕೆ ಹೋಗಿದ್ದ ಬಾಲಕಿ ಸಿಕ್ಕಿದ್ದು ಶವವಾಗಿ
ಬಾಲಕಿ ತನ್ನ ಕುರಾನ್ ಅಭ್ಯಾಸಕ್ಕೆಂದು ಶನಿವಾರ ಸಂಜೆ 4 ಗಂಟೆಗೆ ಮೆನೆಯಿಂದ ಹೊರಹೋಗಿದ್ದಳು. ಆಕೆಯ ಮೃತ ದೇಹ ಪತ್ತೆಯಾದ ಸಮೀಪದಲ್ಲೇ ಕುರಾನ್ ಪುಸ್ತಕ ಕೂಡ ಸಿಕ್ಕಿದೆ. ಸುತ್ತಮುತ್ತ ಇಷ್ಟೊಂದು ಮನೆಗಳು ಹಾಗೂ ಜನಗಳಿದ್ದರೂ ಬಾಲಕಿ ಹೇಗೆ ಕಾಣೆಯಾದಳು ಎಂಬುದೇ ನಿಗೂಢ. ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು. ಬಾಲಕಿಯ ಸಾವಿಗೆ ನ್ಯಾಯ ಸಿಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಘಟನೆಯ ಕುರಿತು ಯಾವುದೇ ಊಹಾಪೋಹಗಳಿಗೆ ಕಿವಿಗೊಡಬೇಡಿ. ವಿಷಯದ ಕುರಿತು ಹರಡುವ ಯಾವುದೇ ಮಾಹಿತಿಯನ್ನ ಪರಾಮರ್ಶಿಸದೇ ನಂಬಬೇಡಿ. ಈ ರೀತಿಯ ಬೆಳವಣಿಗೆಗಳು ತನಿಖೆಗೆ ಅಡ್ಡಿಪಡಿಸಿ ಅನಗತ್ಯ ತೊಂದರೆ ಉಂಟುಮಾಡಬಹುದು ಎಂದು ಪೊಲೀಸರು ವಿನಂತಿಸಿಕೊಂಡಿದ್ದಾರೆ.

ಘಟನೆಯನ್ನು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಓಮಾರ್ ಅಬ್ದುಲ್ಲಾ ತೀವ್ರವಾಗಿ ಖಂಡಿಸಿದ್ದು, ಇದು ಆಘಾತಕಾರಿ ಮತ್ತು ದುಃಖಕರ ಸಂಗತಿ. ಮೃತ ಬಾಲಕಿಯ ಕುಟುಂಬಕ್ಕೆ ನನ್ನ ಸಂತಾಪಗಳು. ಆಕೆ ಜನ್ನತ್ ಸೇರಲಿ, ಈ ಘಟನೆಯಿಂದ ಒಟ್ಟಾರೆಯಾಗಿ ಸಮಾಜ ಗಂಭೀರ ಆತ್ಮಾವಲೋಕನದ ಮಾಡಿಕೊಳ್ಳಬೇಕು. ತನಿಖಾ ಸಂಸ್ಥೆಗಳು ಹತ್ಯೆಯ ಬಗ್ಗೆ ತನಿಖೆ ಮಾಡುವುದರ ಜೊತೆಗೆ ಚಿಕ್ಕಮಕ್ಕಳಿಗೂ ಸುರಕ್ಷತೆ ಇಲ್ಲದೇ ಸಮಾಜ ಎತ್ತ ಕಡೆಗೆ ಸಾಗುತ್ತಿದೆ ಎಂಬುದರ ಕುರಿತು ಚಿಂತನೆ ನಡೆಸಬೇಕು ಎಂದು ತಿಳಿವಳಿಕೆ ಹೇಳಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವುದಾಗಿ ಭರವಸೆನನ್ನೂ ನೀಡಿದ್ದಾರೆ.
