– ರಾಜ್ಯದಲ್ಲಿ ಮರ್ಯಾದೆ ಹತ್ಯೆ ನಿಷೇಧ ಮಸೂದೆಗೆ ಜಾರಿಗೆ ಸಂಪುಟದಲ್ಲಿ ತೀರ್ಮಾನ
ಬೆಂಗಳೂರು: ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರವೊಂದನ್ನು ಕೈಗೊಳ್ಳಲಾಗಿದೆ. ಕೆಹೆಚ್‌ಬಿಯಿಂದ ಸೂರ್ಯನಗರದಲ್ಲಿ ಅಂತರರಾಷ್ಟ್ರೀಯ ಕ್ರೀಡಾಂಗಣಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಆನೇಕಲ್ ತಾಲೂಕಿನ ಸೂರ್ಯನಗರದಲ್ಲಿ 813 ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ ಆಗಲಿದೆ. 75 ಎಕರೆ ಜಮೀನಿನಲ್ಲಿ ಕ್ರೀಡಾಂಗಣ ನಿರ್ಮಿಸಲು ಯೋಜಿಸಿದ್ದು, ಕ್ರೀಡಾಂಗಣದ ಸುತ್ತ ವಾಣಿಜ್ಯ ಮಳಿಗೆ, ಇತರೆ ಕಟ್ಟಡ ಕಾಮಗಾರಿಗಳ ಬಗ್ಗೆ ಇಂದು ಯಾವುದೇ ತಿರ್ಮಾನಕ್ಕೆ ಸಂಪುಟ ಬಂದಿಲ್ಲ. ವೆಚ್ಚ ಪರಿಷ್ಕರಣೆ ಮಾಡಿ ಮುಂದಿನ ಸಚಿವ ಸಂಪುಟ ಸಭೆಗೆ ತರಲು ಸೂಚನೆ ನೀಡಲಾಗಿದೆ.
ಮೈಶುಗರ್ ಸಕ್ಕರೆ ಕಾರ್ಖಾನೆ ದುರಸ್ತಿ ಹಾಗೂ 5 ಸಾವಿರ ಟಿಸಿಡಿ ಕಬ್ಬು ನುರಿಯುವ ಹೊಸ ಯಂತ್ರೋಪಕರಣ ಅಳವಡಿಕೆಗೆ 60 ಕೋಟಿ ಅನುದಾನ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. 76 ಮೌಲಾನಾ ಆಝಾದ್ ಆಂಗ್ಲ ಮಾದರಿ ಶಾಲೆಗಳು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಉನ್ನತೀಕರಣ, 41 ಊರ್ದು ಮಾಧ್ಯಮ ಶಾಲೆಗಳನ್ನ ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಣ, ಒಟ್ಟು 683 ಕೋಟಿ ವೆಚ್ಚದಲ್ಲಿ ಕೆಪಿಎಸ್ ಶಾಲೆಗಳಾಗಿ ಉನ್ನತೀಕರಿಸಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
ಮಂಡ್ಯ ವಿಧಾನಸಭಾ ಕ್ಷೇತ್ರದ 4 ಕಾವೇರಿ ನಾಲೆಗಳಿಗೆ ವಿತರಣಾ ನಾಲೆ ಹಾಗೂ ಪಿಕಪ್ ನಾಲೆಗಳ ಆಧುನೀಕರಣಕ್ಕೆ 100 ಕೋಟಿ ಅನುದಾನ ನೀಡಲು ಕ್ಯಾಬಿನೆಟ್ ಒಪ್ಪಿಗೆ ಕೊಟ್ಟಿದೆ. ಕಾವೇರಿ ಶಾಖಾ ನಾಲೆ, ಕೆರೆಗೋಡು ಶಾಖಾ ನಾಲೆ, ಶಿಂಶಾ ಶಾಖಾ ನಾಲೆಗಳ ಆಧುನೀಕರಣಕ್ಕೆ ಒಪ್ಪಿಗೆ ನೀಡಲಾಗಿದೆ. ಅಲ್ಲದೇ, ನೂತನ ಜಾಹೀರಾತು ನೀತಿಗೆ ಅನುಮೋದನೆ ಕೊಡಲಾಗಿದೆ.
ರಾಜ್ಯದಲ್ಲಿ ಮರ್ಯಾದೆ ಹತ್ಯೆ ನಿಷೇಧ ಮಸೂದೆ ಜಾರಿಗೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಈ ಅದಿವೇಶನದಲ್ಲೇ ಮಸೂದೆ ಮಂಡನೆಗೆ ತೀರ್ಮಾನಿಸಲಾಗಿದೆ. ‘ಇವ ನಮ್ಮವ ಇವ ನಮ್ಮವ ಮಸೂದೆ’ ಈ ಬಾರಿ ಅಧಿವೇಶನದಲ್ಲೇ ಮಂಡನೆಯಾಗಲಿದೆ. ಮರ್ಯಾದಾ ಹತ್ಯೆಗೆ 5 ವರ್ಷ ಜೈಲು ಶಿಕ್ಷೆ, ಗಂಭೀರವಾಗಿ ಗಾಯಗೊಳಿಸಿದ್ರೆ 3 ವರ್ಷದಿಂದ ಜೀವಾವಧಿ ಶಿಕ್ಷೆ. ದಂಪತಿಗೆ ಸರ್ಕಾರದಿಂದಲೇ ರಕ್ಷಣೆ. ಮರ್ಯಾದೆ ಹೆಸರಿನಲ್ಲಿ ಅಂತರ್ಜಾತಿ ವಿವಾಹಗಳನ್ನ ನಿಲ್ಲಿಸಲು ಸಭೆ ನಡೆಸಿದ್ರೆ, ಮಧ್ಯವರ್ತಿಗಳಂತೆ ನ್ಯಾಯ ಪಂಚಾಯ್ತಿ ಮಾಡಿದವರಿಗೂ 2 ವರ್ಷ ಜೈಲು ಶಿಕ್ಷೆ ಇರಲಿದೆ.
ಅಂತರ್ಜಾತಿ ವಿವಾಹಿತರ ರಕ್ಷಣೆಗೆ ಹೊಸ ಕಾಯ್ದೆಗೆ ಸಂಪುಟ ಒಪ್ಪಿಗೆ ಸೂಚಿಸಿದೆ. ಇದೇ ಅಧಿವೇಶನದಲ್ಲಿ ಮಸೂದೆ ಮಂಡನೆಗೆ ಒಪ್ಪಿಗೆ ನೀಡಲಾಗಿದೆ. ಕರ್ನಾಟಕ ವಿವಾಹ ಆಯ್ಕೆಯ ಸ್ವಾತಂತ್ರ‍್ಯ ಮತ್ತು ಗೌರವದ ಹೆಸರಿನ ಅಪರಾಧಗಳ ತಡೆ ಹಾಗೂ ನಿಷೇಧ ಕಾಯ್ದೆ-2026’ಗೆ ಒಪ್ಪಿಗೆ ಸೂಚಿಸಲಾಗಿದೆ.

