ವಾಷಿಂಗ್ಟನ್: ಇರಾನ್ ಟಾರ್ಗೆಟ್ ಮಾಡಿ ನಡೆಸುವ ಕಾರ್ಯಾಚರಣೆಗಳಿಗೆ ವಾಯುನೆಲೆ ಬಳಕೆಗೆ ಅನುಮತಿ ನಿರಾಕರಿಸಿದ ಹಿನ್ನೆಲೆ ಸ್ಪೇನ್ ಜೊತೆಗಿನ ವ್ಯಾಪಾರ ಒಪ್ಪಂದ ರದ್ದುಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಅವರೊಂದಿಗಿನ ಓವಲ್ ಆಫೀಸ್ ಸಭೆಯಲ್ಲಿ ಮಾತನಾಡಿದ ಟ್ರಂಪ್, ಇರಾನ್ ಮೇಲಿನ ದಾಳಿಗೆ ಸ್ಪ್ಯಾನಿಷ್ ಮಿಲಿಟರಿ ನೆಲೆಗಳ ಬಳಕೆಗೆ ಸ್ಪೇನ್ ನಿರಾಕರಿಸಿದೆ. ಹೀಗಾಗಿ, ಅಮೆರಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ನಾವು ಸ್ಪೇನ್ನೊಂದಿಗಿನ ಎಲ್ಲಾ ವ್ಯಾಪಾರವನ್ನು ಕಡಿತಗೊಳಿಸಲಿದ್ದೇವೆ. ನಾವು ಸ್ಪೇನ್ನೊಂದಿಗೆ ಏನನ್ನೂ ಮಾಡಲು ಬಯಸುವುದಿಲ್ಲ ಎಂದು ಟ್ರಂಪ್ ತಿಳಿಸಿದ್ದಾರೆ. ಇದು NATO ಮಿತ್ರರಾಷ್ಟ್ರಗಳ ನಡುವಿನ ಉದ್ವಿಗ್ನತೆಯಲ್ಲಿ ನಾಟಕೀಯ ಬೆಳವಣಿಗೆಯಾಗಿದೆ.
ಅಮೆರಿಕದ ನಿರ್ಧಾರಕ್ಕೆ ಸ್ಪೇನ್ನ ಉಪಪ್ರಧಾನ ಮಂತ್ರಿ ಮಾರಿಯಾ ಜೀಸಸ್ ಮಾಂಟೆರೊ ಪ್ರತಿಕ್ರಿಯೆ ನೀಡಿದ್ದು, ನಮ್ಮ ದೇಶವು ಅಮೆರಿಕದ ಸಾಮಂತ ದೊರೆಯಾಗುವುದಿಲ್ಲ. ನಾವು ಯಾವುದೇ ಬೆದರಿಕೆಗಳನ್ನು ಸ್ವೀಕರಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಸಂಘರ್ಷವು ಜಗತ್ತಿಗೆ ದೊಡ್ಡ ಬೆದರಿಕೆಯನ್ನು ಒಡ್ಡಬಹುದು ಎಂದ ಸ್ಪ್ಯಾನಿಷ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಹೇಳಿದ್ದಾರೆ. ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿಗಳನ್ನು ಸ್ಪೇನ್ ಖಂಡಿಸಿದೆ. ಈ ಘೋಷಣೆಯು ಅಮೆರಿಕ-ಸ್ಪೇನ್ ಸಂಬಂಧಗಳಲ್ಲಿ ಬಿರುಕು ಮೂಡಿಸಿದೆ. ಇದು ಎರಡು ದೀರ್ಘಕಾಲದ ಮಿತ್ರರಾಷ್ಟ್ರಗಳ ನಡುವಿನ ವ್ಯಾಪಾರ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆಗೆದುಹಾಕುವ ನಿರೀಕ್ಷೆಯನ್ನು ಹೆಚ್ಚಿಸಿದೆ.

