ವಾಷಿಂಗ್ಟನ್: ಜೂನ್ 2025 ರಲ್ಲಿ ಇಸ್ರೇಲ್ (Israel) ಇರಾನ್ (Iran) ಮೇಲೆ ಬೃಹತ್ ದಾಳಿ ನಡೆಸಿತ್ತು. ಈ ಸಮಯದಲ್ಲಿ ಅಲ್ಲಿನ ಉನ್ನತ ನಾಯಕ ಅಲಿ ಖಮೇನಿಯ (Ayatollah Khamenei) ಹತ್ಯೆಗೆ ಯೋಜನೆ ರೂಪಿಸಲಾಗಿತ್ತು. ಆದರೆ ಈ ಸಮಯದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ (Donald Trump) ತಡೆದಿದ್ದರು ಎಂಬ ವಿಚಾರ ಹೊರಬಿದ್ದಿದೆ.
ಈ ಘಟನೆ ನಡೆದ ಸುಮಾರು ಎಂಟು ತಿಂಗಳ ನಂತರ, ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಖಮೇನಿ, ಅವರ ಪತ್ನಿ, ಮಗಳು, ಅಳಿಯ ಮತ್ತು ಮೊಮ್ಮಗಳು ಸಾವನ್ನಪ್ಪಿದ್ದಾರೆ. ಅಲ್ಲದೇ ರಕ್ಷಣಾ ಸಚಿವರು ಸೇರಿದಂತೆ ಇತರ ಅನೇಕ ಉನ್ನತ ಇರಾನಿನ ಅಧಿಕಾರಿಗಳನ್ನು ಸಹ ಹತ್ಯೆ ಮಾಡಲಾಗಿದೆ. ಇದನ್ನೂ ಓದಿ: ಶ್ರೀಲಂಕಾ ಬಳಿ ಅಮೆರಿಕದ ಸಬ್‌ಮೆರಿನ್ ಡಿಕ್ಕಿ; ಇರಾನ್ ನೌಕೆ ಮುಳುಗಡೆ – 148 ಮಂದಿ ನಾಪತ್ತೆ

ಈ ದಾಳಿಯ ಬಳಿಕ ಪ್ರತಿಕ್ರಿಯಿಸಿದ ಟ್ರಂಪ್ ಖಮೇನಿ ತನ್ನನ್ನು ಎರಡು ಬಾರಿ ಕೊಲ್ಲಲು ಪ್ರಯತ್ನಿಸಿದ್ದರು ಎಂದು ಆರೋಪಿಸಿದ್ದಾರೆ. 2024 ರಲ್ಲಿ ಟ್ರಂಪ್ ಮೇಲೆ 2 ಬಾರಿ ದಾಳಿಗೆ ಯತ್ನಿಸಲಾಗಿತ್ತು. ಜುಲೈನಲ್ಲಿ ಒಮ್ಮೆ ಪೆನ್ಸಿಲ್ವೇನಿಯಾ ರ‍್ಯಾಲಿಯಲ್ಲಿ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ಈ ವೇಳೆ ಕಿವಿಗೆ ಗುಂಡು ತಗುಲಿ, ಅಪಾಯದಿಂದ ಪಾರಾಗಿದ್ದರು. ಸೆಪ್ಟೆಂಬರ್‌ನಲ್ಲಿ ವೆಸ್ಟ್ ಪಾಮ್ ಬೀಚ್‌ನಲ್ಲಿ ಗಾಲ್ಫ್ ಆಡುತ್ತಿದ್ದಾಗ ಅವರಿಗೆ ರೈಫಲ್ ಗುರಿಯಿಟ್ಟ ವ್ಯಕ್ತಿಯನ್ನು ಬಂಧಿಸಲಾಗಿತ್ತು.
ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ, ಇರಾನ್ ಅತ್ಯಂತ ದುರ್ಬಲ” ಸ್ಥಿತಿಯಲ್ಲಿದೆ. ಇರಾನ್ ಹುಚ್ಚರಿಂದ ಆಳಲ್ಪಡುತ್ತಿದೆ. ಧಾರ್ಮಿಕ ಮತಾಂಧತೆ ಅವರಲ್ಲಿದೆ. ಅವರಿಗೆ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವ ಮಹತ್ವಾಕಾಂಕ್ಷೆ ಇದೆ. ಇದರಿಂದ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ. ಅವರು ಕ್ಷಿಪಣಿಗಳು, ಡ್ರೋನ್‌ಗಳು ಮತ್ತು ಭಯೋತ್ಪಾದನೆಗೆ ಬೆಂಬಲ ನೀಡಲು ಮುಂದಾಗಿದ್ದಾರೆ. ಇದರಿಂದ ಜಗತ್ತು ಅವರನ್ನು ಮುಟ್ಟಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
ಈಗ ಇರಾನ್‌ನ್ನು ಬೆನ್ನಟ್ಟುವ ಸಮಯ. ಅವರ ಕ್ಷಿಪಣಿಗಳನ್ನು, ನೌಕಾಪಡೆಯನ್ನು, ಡ್ರೋನ್‌ಗಳನ್ನು ಕಸಿದುಕೊಳ್ಳಲು ಸರಿಯಾದ ಸಮಯ. ಆ ವಸ್ತುಗಳನ್ನು ತಯಾರಿಸುವ ಅವರ ಸಾಮರ್ಥ್ಯವನ್ನು ಕಸಿದುಕೊಳ್ಳಲು ಟ್ರಂಪ್ ನಿರ್ಧರಿಸಿದ್ದಾರೆ. ಇದರಿಂದ ಅವರು ಎಂದಿಗೂ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಲು ಸಾಧ್ಯವಿಲ್ಲ. ಧರ್ಮಗುರುಗಳು ಶಸ್ತ್ರಾಸ್ತ್ರಗಳನ್ನು ಹೊಂದಲು ಸಾಧ್ಯವಾಗದಿದ್ದಾಗ ಜಗತ್ತು ಸುರಕ್ಷಿತ ಸ್ಥಳವಾಗಿರುತ್ತದೆ ಎಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಖಮೇನಿಯವರ ಸಾವನ್ನು ಮೊದಲು ಘೋಷಿಸಿದ ಟ್ರಂಪ್, ಅವರನ್ನು “ಇತಿಹಾಸದ ಅತ್ಯಂತ ದುಷ್ಟ ಜನರಲ್ಲಿ ಒಬ್ಬರು” ಎಂದು ಕರೆದಿದ್ದರು. ಇದನ್ನೂ ಓದಿ: ಕತಾರ್‌ನಲ್ಲಿ 10 ಶಂಕಿತ ಐಆರ್‌ಜಿಸಿ ಗೂಢಚಾರರ ಬಂಧನ

