ಉಡುಪಿ: ಇಲ್ಲಿನ ಹಲವೆಡೆ ಉಪಲೋಕಾಯುಕ್ತ (Deputy Lokayukta) ದಿಢೀರ್ ದಾಳಿ ನಡೆಸಿ, ಸರ್ಕಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದಲ್ಲಿ ದಾಳಿ ಮಾಡಲಾಗಿತ್ತು. ಜೀನ್ಸ್ ಪ್ಯಾಂಟ್ ಧರಿಸಿ ಬಂದ ಸರ್ಕಾರಿ ನೌಕರರ ಬೆವರಿಳಿಸಿದರು. ಚಿಟ್ ಫಂಡ್ ದಾಖಲೆ ಹಿಡಿದುಕೊಂಡು ಬಂದಿದ್ದ ಸರ್ಕಾರಿ ನೌಕರರ ವಿರುದ್ಧ ಗರಂ ಆದರು. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಕಂದಾಯ ಇಲಾಖೆ ಸಮಾವೇಶ – 25,000 ಫಲಾನುಭವಿಗಳಿಗೆ ಸವಲತ್ತು ಸಮರ್ಪಣೆ
ಮಂಜುರಾದ ಸರ್ಕಾರಿ ಭೂಮಿಗಾಗಿ ಮಾಜಿ ಸೈನಿಕನು ಅಲೆದಾಡುತ್ತಿರುವ ಮಾಜಿ ಸೈನಿಕರ ಸಂಕಷ್ಟವನ್ನು ಲೋಕಾಯುಕ್ತ ಕೇಳಿತು. ತಾಂತ್ರಿಕ ದೋಷ ಸರಿಪಡಿಸಿ ತಕ್ಷಣವೇ ಭೂಮಿ ಮಂಜೂರು ಮಾಡುವಂತೆ ಸೂಚನೆ ನೀಡಿತು. ನೌಕರನೊಬ್ಬ ತನ್ನ ವೈಯಕ್ತಿಕ ಬ್ಯಾಗ್‌ನಲ್ಲಿ ಸಾಲ ಇಟ್ಟುಕೊಂಡಿದ್ದ. ನೌಕರನನ್ನು ಅಮಾನತು ಮಾಡುವಂತೆ ಸೂಚನೆ ನೀಡಲಾಗಿದೆ.
ಸರ್ವೇ ಕಚೇರಿಯಲ್ಲಿ ಅಸಮರ್ಪಕ ದಾಖಲೆ ಕಂಡು ನೌಕರರ ವಿರುದ್ಧ ಗರಂ ಆದರು. ಬೆಳ್ಳಂಬೆಳಗ್ಗೆ ಮಲ್ಪೆ ಬಂದರು ಪ್ರದೇಶದ ಮೇಲೂ ದಾಳಿ ನಡೆಸಲಾಯಿತು. ಸಮುದ್ರ ಸೇರುತ್ತಿರುವ ಕೊಳಕು ನೀರಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲಾಯಿತು. ಕೊಳಕು ನೀರು ತಿಂದ ಮೀನುಗಳು ದೇಶಕ್ಕೆಲ್ಲ ಸರಬರಾಜಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದೆ.
ಉಡುಪಿ ಸರ್ಕಾರಿ ಬಸ್ ನಿಲ್ದಾಣ ಅವ್ಯವಸ್ಥೆ ತಾಂಡವವಾಡುತ್ತಿದೆ. ತಿಂಡಿಯ ದರ ನಮೂದಿಸದ ಹೋಟೆಲ್ ಮಾಲೀಕನನ್ನು ತರಾಟೆಗೆ ತೆಗೆದುಕೊಳ್ಳಲಾಯಿತು. ದೋಸೆ ಮಾಡಲು ಬಳಸುವ ಸೊರಕೆ ಕಂಡು ಕೆಂಡಮಂಡಲ ಆದರು. ಬಸ್ ನಿಲ್ದಾಣದ ಸ್ವಚ್ಛತಾ ಕಾರ್ಮಿಕರ ಸಂಕಷ್ಟ ಆಲಿಸಿದರು.
ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಮಾತನಾಡಿ, ಉಡುಪಿಯಲ್ಲಿ ಕಚೇರಿಗಳ ಭೇಟಿ ಮಾಡಿ ನನಗೆ ಬಹಳ ನೋವಾಗಿದೆ. ನಿಟ್ಟೂರಿನ ಶುದ್ದೀಕರಣ ಘಟಕ ಸಂಪೂರ್ಣ ಹಾಳಾಗಿದೆ. ಕೊಳಕು ನೀರಿನ ಶುದ್ಧೀಕರಣ ಕಾರ್ಯ ಆಗುತ್ತಿಲ್ಲ. ಬಂದರಿನ ಕೊಳಚೆ ಬಗ್ಗೆ ಸುಮೋಟೋ ಪ್ರಕರಣ ದಾಖಲಿಸುತ್ತಿದ್ದೇವೆ. ನಿಟ್ಟೂರಿನ ತ್ಯಾಜ್ಯ ನೀರು ಶುದ್ಧೀಕರಣ ಘಟಕದ ಅಸಮರ್ಪಕ ನಿರ್ವಹಣೆ ಬಗೆಗೂ ಸುಮೋಟೋ ಪ್ರಕರಣ ದಾಖಲಿಸಲಾಗುವುದು. ಗಲೀಜು ನೀರನ್ನು ಉಡುಪಿಯ ಜನಕ್ಕೆ ಕೊಡುತ್ತಿದ್ದಾರೆ. ಸಮುದ್ರಕ್ಕೆ ಕೊಳಕು ನೀರು ಬಿಟ್ಟು ರಾಜ್ಯಕ್ಕೆಲ್ಲ ಮೀನು ಹಂಚುತ್ತಿದ್ದಾರೆ. ಕೆಮಿಕಲ್ಸ್ ಎಲ್ಲ ನೀರಿಗೆ ಸೇರಿ ಮೀನುಗಾರಿಕೆ ಕುಸಿತವಾಗಿದೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಗಲೀಜು ಹಾಕಲು ಓಪನ್ ಡ್ರಮ್ ಇಟ್ಟಿದ್ದಾರೆ ಎಂದು ಬೇಸರ ಹೊರಹಾಕಿದರು. ಇದನ್ನೂ ಓದಿ: ದಲಿತರಿಗೆ ಕ್ಷೌರ ನಿರಾಕರಣೆ – ಸರ್ಕಾರದಿಂದಲೇ ಕ್ಷೌರದಂಗಡಿ ಆರಂಭ
ಪ್ರತ್ಯೇಕ ಡಸ್ಟ್ ಬಿನ್ ಇರಿಸಲು ಸೂಚಿಸಲಾಗಿದೆ. ತಾಲೂಕು ಕಚೇರಿಯಲ್ಲಿ ತುಂಬಾ ಕೇಸುಗಳು ಪೆಂಡಿಂಗ್ ಇವೆ. ಸಬ್ ರಿಜಿಸ್ಟರ್ ಕಚೇರಿಯಲ್ಲಿ ಸರ್ಕಾರಿ ದಾಖಲೆಗಳು ಖಾಸಗಿಯಾಗಿ ಬ್ಯಾಗಿನಲ್ಲಿ ಇರಿಸಿಕೊಳ್ಳಲಾಗಿದೆ. ಮಾಜಿ ಸೈನಿಕರೊಬ್ಬರ ಭೂಮಿ ಏಳು ವರ್ಷ ಆದರೂ ಸರ್ವೆ ಮಾಡಿಲ್ಲ. ಅಟೆಂಡೆನ್ಸ್ ರಿಜಿಸ್ಟರ್ ಸಮರ್ಪಕವಾಗಿಲ್ಲ. ಸರ್ಕಾರಿ ನೌಕರ ಚಿಟ್ ಫಂಡ್ ದಾಖಲೆ ಇಟ್ಟುಕೊಂಡಿದ್ದಾರೆ. ಸರ್ಕಾರಿ ನೌಕರ ಚಿಟ್ ಫಂಡ್ ಮಾಡುವುದರಲ್ಲಿ ಅರ್ಥ ಇಲ್ಲ. ಎಲ್ಲಾ ನೌಕರರು ಜೀನ್ಸ್ ಪ್ಯಾಂಟಿನಲ್ಲಿ ಬಂದಿದ್ದಾರೆ. ಸರ್ಕಾರಿ ನೌಕರರಿಗೆ ಡ್ರೆಸ್ ಕೋಡ್ ಇದೆ. ಆರಾಮಾಗಿ ಜೀನ್ಸ್ ಪ್ಯಾಂಟ್ ಹಾಕಿಕೊಂಡು ಬಂದಿದ್ದಾರೆ. ಸಬ್ ರಿಜಿಸ್ಟರ್ ಕಚೇರಿಯಲ್ಲಿ ಇಬ್ಬರು ಸಿಬ್ಬಂದಿ ಮೇಲೆ ಕೇಸ್ ರಿಜಿಸ್ಟರ್ ಮಾಡುತ್ತೇವೆ. ನನಗೆ ತುಂಬಾ ನೋವಾಗಿದೆ ಎಂದರು.
ದೇಸಿ ಕಚೇರಿಯಲ್ಲಿ ಮೀಟಿಂಗ್ ಮಾಡಿದಾಗ ಇಲ್ಲಿಯ ಜನ ಬಹಳ ಬುದ್ಧಿವಂತರು ಎಂದಿದ್ದಾರೆ. ಇಲ್ಲಿ ಸಾಕ್ಷರರು ಜಾಸ್ತಿ ಎಂದು ಹೇಳಿದ್ದಾರೆ. ವಿದ್ಯಾವಂತ ಮೋಸಗಾರರಿಂದ ದೇಶ ಹಾಳಾಗುತ್ತಿದೆ. ಇಲ್ಲಿ ಅದರ ಉದಾಹರಣೆ ಕಾಣುತ್ತಿದೆ. ಏನೇ ಕೇಳಿದರೂ ಬಾಯಿ ಮುಚ್ಚಿ ಕೂತಿರುತ್ತಾರೆ. ಮೌನವೇ ಉತ್ತರ ಎಂಬಂತೆ ಇರುತ್ತಾರೆ. ಇಲ್ಲಿ ಅಧಿಕಾರಿಗಳು ವಿದ್ಯಾವಂತರಿದ್ದಾರೆ, ಆದರೆ ಮೋಸಗಾರರಿದ್ದಾರೆ. ನಮಗೆ ಯಾಮಾರಿಸುತ್ತಾರೆ. ಎಲ್ಲಾ ವಿಚಾರಗಳ ಬಗ್ಗೆ ಸುಮೋಟೋ ಪ್ರಕರಣ ದಾಖಲಿಸುತ್ತೇವೆ. ಸರ್ಕಾರಿ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಸಲು ಪರವಾನಿಗೆ ಸಿಕ್ಕಂತೆ ಆಗಿದೆ ಎಂದು ತಿಳಿಸಿದರು.

