ನವದೆಹಲಿ: ಪಾಕಿಸ್ತಾನದ (Pakistan) ಲಷ್ಕರ್-ಎ-ತೊಯ್ಬಾ (Lashkar-e-Taiba) ಉಗ್ರ ಸಂಘಟನೆಯು ದೆಹಲಿಯ ಕೆಂಪು ಕೋಟೆ (Red Fort) ಮತ್ತು ಚಾಂದನಿ ಚೌಕ್‌ನಲ್ಲಿರುವ ದೇವಾಲಯ ಸೇರಿದಂತೆ ದೇಶಾದ್ಯಂತ ಪ್ರಮುಖ ಧಾರ್ಮಿಕ ಸ್ಥಳಗಳ ಬಳಿ ಸ್ಫೋಟಕ್ಕೆ ಸಂಚು ರೂಪಿಸಿದೆ ಎಂದು ಭದ್ರತಾ ಸಂಸ್ಥೆ ಮೂಲಗಳು ತಿಳಿಸಿವೆ.
ಭಯೋತ್ಪಾದಕ ಸಂಘಟನೆಯು ಸುಧಾರಿತ ಸ್ಫೋಟಕ ಸಾಧನ (ಐಇಡಿ) ದಾಳಿಗೆ ಸಂಚು ರೂಪಿಸಿದೆ. ಫೆಬ್ರವರಿ 6 ರಂದು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನ ಮಸೀದಿಯಲ್ಲಿ ನಡೆದ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ 31 ಜನರು ಸಾವನ್ನಪ್ಪಿ, 160 ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆಗೆ ಸೇಡು ತೀರಿಸಿಕೊಳ್ಳಲು ಈ ಸಂಘಟನೆ ಪ್ರಯತ್ನಿಸುತ್ತಿದೆ. ಇದನ್ನೂ ಓದಿ: ಸರ್ಕಾರಿ ಕಟ್ಟಡದೊಳಗೆ ನಮಾಜ್ – ಜೋಶಿಮಠದಲ್ಲಿ ಉದ್ವಿಗ್ನ ಪರಿಸ್ಥಿತಿ
ಮಸೀದಿ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಗುಂಪು ಹೊತ್ತುಕೊಂಡಿತ್ತು. ಬಳಿಕ 2025ರ ನವೆಂಬರ್ 10 ರಂದು ದೆಹಲಿಯ ಐತಿಹಾಸಿಕ ಕೆಂಪು ಕೋಟೆಯ ಬಳಿ ಸಂಭವಿಸಿದ ಮಾರಕ ಕಾರು ಸ್ಫೋಟದ ಮೂರು ತಿಂಗಳ ನಂತರ ಇದು ಸಂಭವಿಸಿದೆ. ಇದರಲ್ಲಿ 12 ಜನರು ಸಾವನ್ನಪ್ಪಿದರು. ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಸ್ಫೋಟಕಗಳಿಂದ ತುಂಬಿದ ಕಾರಿನಿಂದ ಉಂಟಾದ ಸ್ಫೋಟದಿಂದ ಹತ್ತಿರದ ಹಲವಾರು ವಾಹನಗಳು ಬೆಂಕಿಗೆ ಆಹುತಿಯಾದವು.
ಡಿಎನ್ಎ ಪರೀಕ್ಷಾ ಫಲಿತಾಂಶಗಳ ಪ್ರಕಾರ, ಸ್ಫೋಟಗೊಂಡ ಕಾರನ್ನು ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದ ವೈದ್ಯ ಉಮರ್ ಮೊಹಮ್ಮದ್ ಅಲಿಯಾಸ್ ಉಮರ್ ಉನ್ ನಬಿ ಚಾಲನೆ ಮಾಡುತ್ತಿದ್ದ.
ನೆರೆಯ ಹರಿಯಾಣದ ಫರಿದಾಬಾದ್‌ನಲ್ಲಿ ರಾಜಧಾನಿಯಿಂದ ಕೇವಲ 50 ಕಿ.ಮೀ ದೂರದಲ್ಲಿ ಅಮೋನಿಯಂ ನೈಟ್ರೇಟ್ ಸೇರಿದಂತೆ 2,900 ಕೆಜಿ ಸ್ಫೋಟಕಗಳು ಪತ್ತೆಯಾದ ದಿನದಂದು ಈ ಘಟನೆ ನಡೆದಿತ್ತು. ಇದನ್ನೂ ಓದಿ: 33 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ – ಯುಪಿ ದಂಪತಿಗೆ ಮರಣದಂಡನೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೀರ್ ರಶೀದ್ ಮಿರ್, ಜಾಸಿರ್ ಬಿಲಾಲ್ ವಾನಿ, ಮುಫ್ತಿ ಇರ್ಫಾನ್ ಅಹ್ಮದ್ ವಾಗೆ, ಡಾ. ಮುಜಾಮಿಲ್ ಶಕೀಲ್ ಗನಿ, ಡಾ. ಅದೀಲ್ ಅಹ್ಮದ್ ರಾಥರ್, ಡಾ. ಶಾಹೀನ್ ಸಯೀದ್ ಮತ್ತು ಸೋಯಾಬ್‌ನನ್ನು ಬಂಧನಕ್ಕೆ ಒಳಪಡಿಸಲಾಗಿತ್ತು. ಇತ್ತೀಚೆಗೆ ಅವರ ನ್ಯಾಯಾಂಗ ಬಂಧನವನ್ನು ಮಾ.13 ರವರೆಗೆ ವಿಸ್ತರಿಸಲಾಗಿತ್ತು.
ಸ್ಫೋಟ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಲು ದೆಹಲಿ ನ್ಯಾಯಾಲಯವು ಕಳೆದ ವಾರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ 45 ದಿನಗಳ ಕಾಲಾವಕಾಶ ನೀಡಿತು.

