ಬೆಂಗಳೂರು: ನಿವೃತ್ತ ಇಸ್ರೋ (ISRO) ಉದ್ಯೋಗಿಯೊಬ್ಬರು ಪತ್ನಿಯನ್ನೇ(Wife) ಕೊಲೆ ಮಾಡಿದ ಘಟನೆ ಬೆಂಗಳೂರು (Bengaluru) ಹೊರವಲಯದ ಅವಲಹಳ್ಳಿ ಬಳಿಯ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.
ಇಂದು ಬೆಳಗ್ಗೆ ಟವಲ್‌ನಿಂದ ಕತ್ತು ಬಿಗಿದು ನಾಗೇಶ್ವರ್ ರಾವ್ (75)ಪತ್ನಿ ಸಂಧ್ಯಾ (65) ಅವರನ್ನು ಕೊಲೆ ಮಾಡಿದ್ದಾರೆ.
ಮೂರು ವರ್ಷಗಳಿಂದ ಅಪಾರ್ಟ್‌ಮೆಂಟ್‌ನಲ್ಲಿ ದಂಪತಿ ವಾಸವಿದ್ದರು. ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಾಗೇಶ್ವರ್ ರಾವ್ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನ ಮಾಡಿದ್ದರು. ತಾನು ಆತ್ಮಹತ್ಯೆ ಮಾಡಿದರೆ ಪತ್ನಿ ಒಂಟಿಯಾಗುತ್ತಾಳೆ. ಆಕೆಯನ್ನು ನೋಡಿಕೊಳ್ಳಲು ಯಾರು ಇರುವುದಿಲ್ಲ ಎಂದು ತೀರ್ಮಾನಿಸಿ ಪತ್ನಿಯನ್ನು ಹತ್ಯೆ ಮಾಡಲು ಪ್ಲ್ಯಾನ್ ಮಾಡಿದ್ದರು.
ಈ ಪ್ಲ್ಯಾನ್‌ನಂತೆ ಇಂದು ಬೆಳಗ್ಗೆ 11 ಗಂಟೆಗೆ ಟವಲ್‌ನಿಂದ ಕತ್ತು ಬಿಗಿದು ಪತ್ನಿಯನ್ನು ಹತ್ಯೆ ಮಾಡಿದ್ದಾರೆ. ಬಳಿಕ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಧೈರ್ಯ ಸಾಲದೇ ಕಿರುಚಿಕೊಂಡು ಹೊರಗೆ ಬಂದಿದ್ದಾರೆ. ಅಕ್ಕಪಕ್ಕದ ನಿವಾಸಿಗಳು ಬಂದು ನೋಡಿದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ.
ಸಂಧ್ಯಾ ಮೃತದೇಹವನ್ನು ಈಸ್ಟ್ ಪಾಯಿಂಟ್ ಕಾಲೇಜಿಗೆ ಕಳುಹಿಸಲಾಗಿದೆ. ಪುತ್ರಿ ವಿದೇಶದಲ್ಲಿದ್ದು ಆಕೆಗೆ ಮಾಹಿತಿ ತಿಳಿಸಲಾಗಿದೆ. ಅವಲಹಳ್ಳಿ ಪೊಲೀಸ್ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ನಾಗೇಶ್ವರ್ ರಾವ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

