ಬೆಂಗಳೂರು: ಶಾಸಕರು ಖಾಸಗಿಯಾಗಿ ವಿದೇಶ ಪ್ರವಾಸಕ್ಕೆ(Foreign Tour) ಹೋದರೆ ಬೇಡ ಎನ್ನಲೂ ಆಗುತ್ತಾ ಎಂದು ಶಾಸಕರ ವಿದೇಶ ಪ್ರವಾಸವನ್ನು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಸಮರ್ಥನೆ ಮಾಡಿಕೊಂಡಿದ್ದಾರೆ.
ಖಾಸಗಿಯಾಗಿ ಟೂರ್ ಮಾಡೋದು ತಪ್ಪಾ? ನಾವು ಎಲ್ಲೂ ಹೋಗಬಾರದಾ? ನಮ್ಮ ಪಕ್ಷದ ವಿಚಾರ ಬಂದಾಗ ನಾವೆಲ್ಲ ಒಂದೇ. ಕಳೆದ ವರ್ಷ ಕೆಲವರು ಹೋಗಿದ್ರು. ಅವತ್ತಿಲ್ಲದ ವಿಚಾರ ಈಗ್ಯಾಕೆ? ಹೋಗೋರನ್ನು ತಡೆಯಲು ಸಾಧ್ಯವೇ? ಅಂತ ಶಾಸಕರ ಟೂರ್ ವಿಚಾರ ಸಮರ್ಥನೆ ಮಾಡಿಕೊಂಡರು.
ಕಾಂಗ್ರೆಸ್‌ನಲ್ಲಿ (Congress) ಅಧಿಕಾರ ಹಂಚಿಕೆ ಗೊಂದಲದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರ ಒಳ ಜಗಳದ ವಿಚಾರ ಮುಚ್ಚಿಡಲು ನಮ್ಮ ಮೇಲೆ ಬೆರಳು ತೋರಿಸುತ್ತಿದ್ದಾರೆ. ನಮ್ಮಲ್ಲಿ ಗೊಂದಲ ಇಲ್ಲ. ಹೈಕಮಾಂಡ್ (High Command) ಕೂಡ ಸ್ಪಷ್ಟವಾಗಿ ಹೇಳಿದೆ. ಖರ್ಗೆಯವರೂ ಈ ವಿಚಾರವಾಗಿ ಸ್ಪಷ್ಟನೆ ಮಾಡಿದ್ದಾರೆ. ಇನ್ನು ಗೊಂದಲ ಎಲ್ಲಿದೆ? ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಅಂತ ತಿಳಿಸಿದರು.
ಸರ್ಕಾರಕ್ಕೆ ಸಾವಿರ ದಿನಗಳು ತುಂಬಿದ ಹಿನ್ನಲೆ ಕಾರ್ಯಕ್ರಮ ಮಾಡಿದ್ದಕ್ಕೆ ಬಿಜೆಪಿ ವಿರೋಧದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ವಿರೋಧ ಮಾಡೋದಕ್ಕೆ ವಿರೋಧ ಮಾಡೋರನ್ನ ಏನೂ ಮಾಡೋಕೆ ಆಗಲ್ಲ. ಬೇಡಬಾದ ವಿಚಾರದ ಬಗ್ಗೆ ಸದನದಲ್ಲಿ ಚರ್ಚೆ ಮಾಡ್ತಾರೆ. ಜನರಿಗೆ ಉಪಯೋಗವಾಗುವ ಚರ್ಚೆಗಳನ್ನ ಮಾಡಲು ಬಿಡಲ್ಲ ಅಂತ ವಾಗ್ದಾಳಿ ನಡೆಸಿದರು.
ನಮ್ಮ ಸರ್ಕಾರ ಜನರಿಗೆ ಒಳ್ಳೇದನ್ನ ಮಾಡ್ತಿದೆ. ಅದನ್ನೂ ಸಹಿಸಲಾಗುತ್ತಿಲ್ಲ. ಜನ ಇವರಿಗೆ ವೋಟ್ ಮಾಡಲ್ಲ ಅನ್ನೋದು ಇವರಿಗೆ ಗೊತ್ತಾಗಿದೆ. ಅದಕ್ಕೆ ವಿರೋಧ ಮಾಡಿ ಮಾತಾಡ್ತಾರೆ ಅಂತ ಬಿಜೆಪಿ ವಿರುದ್ದ ಕಿಡಿಕಾರಿದರು.
ಸರ್ಕಾರದ ಸಾವಿರ ದಿನದ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷರು ಬಾರದಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು,ಇದು ರಾಜ್ಯದ ಕಾರ್ಯಕ್ರಮ. ಹೀಗಾಗಿ ಬರಲಿಲ್ಲ.ಖರ್ಗೆ ಅವರಿಗೆ ಪೂರ್ವ ನಿಗಧಿತ ಕಾರ್ಯಕ್ರಮ ಇತ್ತು ಹಾಗಾಗಿ ಬರಲಿಲ್ಲ ಅಂತ ತಿಳಿಸಿದರು.

