– ಮೃತರ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ
ಮುಂಬೈ: ಇಲ್ಲಿನ ಮುಲುಂಡ್ ಪ್ರದೇಶದಲ್ಲಿ ಮೆಟ್ರೋ ಸ್ಲ್ಯಾಬ್ (Mumbai Metro Slab) ಕುಸಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಪ್ರಕರಣ ಸಂಬಂಧ ಯೋಜನಾ ನಿರ್ದೇಶಕರು, ಗುತ್ತಿಗೆದಾರರು (Contractors) ಸೇರಿ ಐವರನ್ನ ಬಂಧಿಸಲಾಗಿದೆ. ಅಲ್ಲದೇ ಕಾರ್ಯನಿರ್ವಾಹಕ ಇಂಜಿನಿಯರ್‌ನನ್ನ ಅಮಾನತುಗೊಳಿಸಿದ್ದು, ಯೋಜನೆಯಲ್ಲಿ ಭಾಗಿಯಾಗಿರುವ ಗುತ್ತಿಗೆದಾರರು ಮತ್ತು ಸಲಹೆಗಾರರಿಗೆ 6 ಕೋಟಿ ದಂಡ ವಿಧಿಸಿದೆ.
ಯೋಜನಾ ನಿರ್ದೇಶಕ ಹರೀಶ್ ಚೌಹಾಣ್, ಇಬ್ಬರು ಯೋಜನಾ ವ್ಯವಸ್ಥಾಪಕರು ಸೇರಿದಂತೆ ಮಿಲನ್ ರೋಡ್ ಬಿಲ್ಡ್‌ಟೆಕ್‌ನ ನಾಲ್ವರು ಉದ್ಯೋಗಿಗಳು ಮತ್ತು ಡಿಬಿ ಹಿಲ್ ಎಲ್‌ಬಿಜಿ ಸೂಪರ್‌ವೈಸರಿ ಕಂಪನಿಯ ಓರ್ವ ಉದ್ಯೋಗಿಯನ್ನ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಪಿಲ್ಲರ್ ಕುಸಿತ – ಓರ್ವ ಸಾವು, ಮೂವರು ಗಂಭೀರ

ಶನಿವಾರ (ಫೆ.14) ಮಧ್ಯಾಹ್ನ ಮುಲುಂಡ್ ಪ್ರದೇಶದ ಜಾನ್ಸನ್ & ಜಾನ್ಸನ್ ಕಂಪನಿಯ ಬಳಿ ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಲೇನ್-4 ರ ಸ್ಲ್ಯಾಬ್ ಕುಸಿದು ಕೆಳಗೆ ಚಲಿಸುತ್ತಿದ್ದ ಆಟೋ, ಕಾರಿನ ಮೇಲೆ ಬಿದ್ದಿತ್ತು. ವಡಾಲಾ ದಿಂದ ಥಾಣೆಗೆ ಸಂಪರ್ಕಿಸುವ ಮೆಟ್ರೋ ಮಾರ್ಗ ಇದಾಗಿದೆ. ಈ ವೇಳೆ ಮದುವೆ ಕಾರ್ಯಕ್ರಮಕ್ಕೆ ತರಳುತ್ತಿದ್ದ ಸಮಾಜವಾದಿ ಪಕ್ಷದ ಮುಖಂಡ ರಾಮಧನ್ ಯಾದವ್ ಸಾವನ್ನಪ್ಪಿದ್ದರು. ಇದನ್ನೂ ಓದಿ: ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಪಿಲ್ಲರ್ ಕುಸಿದು ದುರಂತ – ಆಟೋ, ಕಾರು ಅಪ್ಪಚ್ಚಿ!
ಘಟನೆ ತಿಳಿದ ಕೂಡಲೇ ಕಾರ್ಯನಿರ್ವಾಹಕ ಎಂಜಿನಿಯರ್ ಸತ್ಯಜೀತ್ ಸಾಲ್ವೆ ಅವರನ್ನ ಅಮಾನತುಗೊಳಿಸುವಂತೆ ಉಪಮುಖ್ಯಮಂತ್ರಿ ಮತ್ತು ನಗರಾಭಿವೃದ್ಧಿ ಸಚಿವರೂ ಆದ ಏಕನಾಥ್ ಶಿಂಧೆ (Eknath Shinde) ಆದೇಶಿಸಿದ್ದಾರೆ. ಜೊತೆಗೆ ಗುತ್ತಿಗೆದಾರರು ಮತ್ತು ಸಲಹೆಗಾರರಾದ ಮಿಲನ್ ರೋಡ್ ಬಿಲ್ಡ್‌ಟೆಕ್ ಮತ್ತು ಲೂಯಿಸ್ ಬರ್ಗರ್ ಅವರಿಗೆ ಒಟ್ಟು 6 ಕೋಟಿ ರೂ. ದಂಡ ವಿಧಿಸಿದ್ದಾಗಿ ಹೇಳಿದ್ದಾರೆ. ಸಿಎಂ ದೇವೇಂದ್ರ ಫಡ್ನವಿಸ್ ಸಹ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ಹೊಣೆಗಾರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಮೃತರ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ
ಘಟನೆಯಿಂದ ಸುತ್ತಮುತ್ತಲಿನ ಪ್ರದೇಶದ ತೀವ್ರ ಆತಂಕಕ್ಕೀಡಾಗಿದ್ದಾರೆ. ಹೀಗಾಗಿ ಡಿಸಿಎಂ ಶಿಂಧೆ ಅವರು ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ತಾಕೀತು ಮಾಡಿದ್ದಾರೆ. ಇದರೊಂದಿಗೆ ಮೃತರ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.

