ಚಾಮರಾಜನಗರ: ಶ್ರೀ ಕ್ಷೇತ್ರ ಮಲೆ ಮಹದೇಶ್ವರ (Male Mahadeshwara Betta) ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದ ಬಾಲಕನ ಮೇಲೆ ಚಿರತೆ (Leopard) ದಾಳಿ ಮಾಡಿರುವ ಘಟನೆ ನಡೆದಿದೆ.
ಚನ್ನಪಟ್ಟಣ ತಾಲೂಕಿನ ಭುವಳ್ಳಿ ಗ್ರಾಮದ ಶ್ರೇಯಸ್ (8) ಚಿರತೆ ದಾಳಿಯಿಂದ ಗಾಯಗೊಂಡ ಬಾಲಕನಾಗಿದ್ದಾನೆ. ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತಾದಿಗಳು ಪಾದಯಾತ್ರೆಯ ಮೂಲಕ ತೆರಳುವುದು ವಾಡಿಕೆ. ಅದರಂತೆ ಪಾದಯಾತ್ರೆಯ ಮೂಲಕ ಪೊನ್ನಾಚಿ ಕ್ರಾಸ್‍ನಿಂದ ತಲುಪಿ, ನಂತರ ಮುಂದೆ ಅರಣ್ಯ ಪ್ರದೇಶದಲ್ಲಿ ತೆರಳುತ್ತಿದ್ದಾಗ ಬಾಲಕನ ಮೇಲೆ ಚಿರತೆ ದಾಳಿ ಮಾಡಿದೆ. ಇದನ್ನೂ ಓದಿ: ಚಾಮರಾಜನಗರ| ಚಿರತೆ ದಾಳಿಗೆ ಕರು ಬಲಿ
ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜಗದೀಶ್ ಹಾಗೂ ಇಲಾಖೆಯ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ. ಗಾಯಗೊಂಡಿದ್ದ ಬಾಲಕನನ್ನು ಜೊತೆಯಲ್ಲಿದ್ದ ಭಕ್ತಾದಿಗಳು ಬಸ್ಸಿನ ಮೂಲಕ ಮಲೆ ಮಹದೇಶ್ವರ ಬೆಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಪಾದಯಾತ್ರೆಯ ಮೂಲಕ ತೆರಳುತ್ತಿದ್ದ ಪಾದಯಾತ್ರಿಕರಿಗೆ ಒಂದು ಬೃಹತ್ ಗಾತ್ರದ ಚಿರತೆ ಹಾಗೂ ಒಂದು ಚಿಕ್ಕ ಚಿರತೆ ಕಾಣಿಸಿಕೊಂಡಿದೆ. ಪಾದಯಾತ್ರೆಯ ಮೂಲಕ ತೆರಳುತ್ತಿರುವ ಭಕ್ತಾದಿಗಳು ಅರಣ್ಯ ಪ್ರದೇಶ ಮೂಲಕ ಪಾದಯಾತ್ರೆ ಮಾಡುವ ಬದಲು ಮುಖ್ಯ ರಸ್ತೆಯ ಮೂಲಕ ಪಾದಯಾತ್ರೆ ಮಾಡಿದರೆ ಸುರಕ್ಷತೆ ಇರಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಚಾಮರಾಜನಗರದಲ್ಲಿ ಮುಂದುವರಿದ ಚಿರತೆ ಹಾವಳಿ – ವ್ಯಕ್ತಿ ಮೇಲೆ ಏಕಾಏಕಿ ದಾಳಿ

