ವಾಂಖೆಡೆ: ಸೂರ್ಯ ಬೆಂಕಿ ಬ್ಯಾಟಿಂಗ್, ಸಂಘಟಿತ ಬೌಲಿಂಗ್ ನೆರವಿನಿಂದ ಯುಎಸ್‌ಎ ವಿರುದ್ಧ ಭಾರತ 29 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಐಸಿಸಿ ಟಿ20 ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಶುಭಾರಂಭ ಮಾಡಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಭಾರತ ಸೂರ್ಯಕುಮಾರ್ ಯಾದವ್ ಸಿಡಿಸಿದ ಸ್ಫೋಟಕ ಅರ್ಧಶತಕ (84) ಬಲದಿಂದ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು. ಗುರಿ ಬೆನ್ನತ್ತಿದ ಅಮೆರಿಕ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 132 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.
ಬ್ಯಾಟಿಂಗ್‌ನಲ್ಲಿ ಅಮೆರಿಕ ಆರಂಭಿಕ ಆಘಾತ ಎದುರಿಸಿತು. ಆಂಡ್ರೀಸ್ ಗೌಸ್ ಕೇವಲ 6 ಹಾಗೂ ಸಾಯಿತೇಜ ಮುಕ್ಕಮಲ್ಲ 2 ರನ್ ಗಳಿಸಿ ಔಟಾಗಿದ್ದು, ನಿರಾಸೆ ಮೂಡಿಸಿತು. ಕ್ಯಾಪ್ಟನ್ ಮೊನಾಂಕ್ ಪಟೇಲ್ ಶೂನ್ಯ ಸುತ್ತಿ ಹೊರನಡೆದರು. ಈ ನಡುವೆ ಮಿಲಿಂದ್ ಕುಮಾರ್ 34, ಸಂಜಯ್ ಕೃಷ್ಣಮೂರ್ತಿ ಹಾಗೂ ಶುಭಂ ರಂಜನೆ ತಲಾ 37 ರನ್ ಗಳಿಸಿ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದ್ದರು. ಆದರೆ, ಯುಎಸ್‌ಎ ಬ್ಯಾಟರ್‌ಗಳನ್ನು ಟೀಂ ಇಂಡಿಯಾ ಬೌಲರ್‌ಗಳು ಚೆಂಡಾಡಿದರು.
ಸಿರಾಜ್ 3 ವಿಕೆಟ್ ಪಡೆದು ಮಿಂಚಿದರು. ಅರ್ಷದೀಪ್ ಸಿಂಗ್, ಅಕ್ಷರ್ ಪಟೇಲ್ ತಲಾ 2, ವರುಣ್ ಚಕ್ರವರ್ತಿ 1 ವಿಕೆಟ್ ಪಡೆದರು. ಜವಾಬ್ದಾರಿಯುತ ಬೌಲಿಂಗ್ ನೆರವಿನಿಂದ ಯುಎಸ್‌ಎ ವಿರುದ್ಧ ಭಾರತ ಭರ್ಜರಿ ಜಯ ಸಾಧಿಸಿತು.
ಇದಕ್ಕೂ ಮೊದಲು ಟೀಂ ಇಂಡಿಯಾ ಆರಂಭದಲ್ಲೇ ಎಡವಿತ್ತು. ಪವರ್‌ಪ್ಲೇಯಲ್ಲಿ 4 ವಿಕೆಟ್‌ಗೆ 46 ರನ್‌ಗೆ ಕುಸಿದು ಆತಂಕ ಮೂಡಿಸಿತ್ತು. ಅಭಿಷೇಕ್ ಶರ್ಮಾ ಅಲಿ ಖಾನ್‌ಗೆ ಗೋಲ್ಡನ್ ಡಕ್‌ಗೆ ಬಿದ್ದರು. ಇಶಾನ್ ಕಿಶನ್ 20, ತಿಲಕ್ ವರ್ಮಾ 25 ರನ್ ಅಷ್ಟೇ ಗಳಿಸಿ ನಿರ್ಗಮಿಸಿದರು. ಆದರೂ ಸೂರ್ಯಕುಮಾರ್ ಔಟಾಗದೇ 49 ಬಾಲ್‌ಗೆ 84 ರನ್ ಗಳಿಸಿ ತಂಡವು ಸವಾಲಿನ ಮೊತ್ತ ಪೇರಿಸಲು ನೆರವಾದರು. ವ್ಯಾನ್ ಶಾಲ್ಕ್‌ವಿಕ್ 25 ರನ್‌ಗಳಿಗೆ 4 ವಿಕೆಟ್ ಪಡೆದು ಗಮನ ಸೆಳೆದರು.

