ಪ್ರೀತಿಸಿದ ಯುವಕನನ್ನು ಮದುವೆಯಾಗಿದ್ದಕ್ಕೆ ಮಗಳನ್ನೇ ಕೊಂದ ತಂದೆ – ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ ಇನ್ಸ್‌ಪೆಕ್ಟರ್ ಸಸ್ಪೆಂಡ್

1 Min Read

ಹೈದರಾಬಾದ್: ಪ್ರೀತಿಸಿದ (Love) ಯುವಕನನ್ನು ಮದುವೆಯಾಗಿದ್ದಕ್ಕೆ ವ್ಯಕ್ತಿಯೊಬ್ಬ ಮಗಳನ್ನೇ ಹತ್ಯೆ ಮಾಡಿರುವ ಪ್ರಕರಣ ಆಂಧ್ರಪ್ರದೇಶದ (Andhra Pradesh) ಮಾಚೆರ್ಲಾ ಪಟ್ಟಣದಲ್ಲಿ ನಡೆದಿದೆ. ಮಾರ್ಚ್‌ನಲ್ಲಿ ಈ ಹತ್ಯೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಹತ್ಯೆಯಾದ ಮಹಿಳೆಯನ್ನು ಚೌಡೇಶ್ವರಿ (22) ಎಂದು ಗುರುತಿಸಲಾಗಿದೆ. ಮಹಿಳೆ ಯುವಕನೊಬ್ಬನ ಜೊತೆ ಪ್ರೇಮ ಸಂಬಂಧ ಹೊಂದಿದ್ದಳು. ಇದಕ್ಕೆ ಆಕೆಯ ಕುಟುಂಬಸ್ಥರ ವಿರೋಧವಿತ್ತು. ಮಾ.4 ರಂದು, ಆಕೆ ಮನೆ ಬಿಟ್ಟು ಪೋಷಕರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಳು. ಈ ಸಂಬಂಧ ಕುಟುಂಬಸ್ಥರು ದೂರು ದಾಖಲಿಸಿದ್ದರು. ಇದನ್ನೂ ಓದಿ: ಓವರ್‌ಟೇಕ್ ಮಾಡುವಾಗ KSRTC, ಖಾಸಗಿ ಬಸ್ ನಡುವೆ ಡಿಕ್ಕಿ – ಇಬ್ಬರು ಸಾವು, 20 ಮಂದಿಗೆ ಗಾಯ

ಮಾಚೆರ್ಲಾ ಪಟ್ಟಣದ ಸರ್ಕಲ್ ಇನ್ಸ್‌ಪೆಕ್ಟರ್ (ಸಿಐ) ಮಾ.15 ರಂದು ದಂಪತಿಯನ್ನು ಪತ್ತೆಹಚ್ಚಿದ್ದರು. ಬಳಿಕ ಮಹಿಳೆಗೆ ಬೆದರಿಸಿ ಪೋಷಕರ ಮನೆಗೆ ಹಿಂತಿರುಗುವಂತೆ ಒತ್ತಾಯಿಸಿದ್ದರು ಎಂದು ಆರೋಪಿಸಲಾಗಿದೆ. ಮೂರು ದಿನಗಳ ನಂತರ ಪೋಷಕರ ಮನೆಯಲ್ಲಿ ಆಕೆ ಶವವಾಗಿ ಪತ್ತೆಯಾಗಿದ್ದಳು.

ಆರಂಭದಲ್ಲಿ, ಅವರ ಕುಟುಂಬವು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿಕೊಂಡಿತ್ತು. ಪೊಲೀಸ್ ಅಧಿಕಾರಿಯ ಸಹಾಯದಿಂದ ಅದನ್ನು ಆತ್ಮಹತ್ಯೆ ಪ್ರಕರಣವೆಂದು ಮುಚ್ಚಿಹಾಕಲು ಕುಟುಂಬಸ್ಥರು ಪ್ರಯತ್ನಿಸಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಮಹಿಳೆಯ ಸಾವು ಆತ್ಮಹತ್ಯೆಯಲ್ಲ, ಕೊಲೆ ಎಂದು ದೃಢಪಟ್ಟಿತ್ತು. ಮಹಿಳೆ ಮಲಗಿದ್ದಾಗ ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ ಎಂದು ವೈದ್ಯರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಈ ಸಂಬಂಧ ಮಹಿಳೆಯ ತಂದೆ ಚಂದ್ರಶ್ರೀನು ಮತ್ತು ಇನ್ನೊಬ್ಬ ಸಂಬಂಧಿಯನ್ನು ಬಂಧಿಸಲಾಗಿದೆ. ಪೊಲೀಸ್ ಅಧಿಕಾರಿ ಮಹಿಳೆಯ ಪೋಷಕರಿಂದ ಲಂಚ ಪಡೆದು ಅವರನ್ನು ರಕ್ಷಿಸಲು ಪ್ರಯತ್ನಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಪೊಲೀಸರು ಬ್ಯಾಂಕ್ ದಾಖಲೆಗಳನ್ನು ಮತ್ತು ಕುಟುಂಬದಿಂದ ದೊಡ್ಡ ಪ್ರಮಾಣದ ನಗದು ವಿತ್‌ಡ್ರಾ ಮಾಡಿರುವ ಬಗ್ಗೆ ಪರಿಶೀಲಿಸುತ್ತಿದ್ದಾರೆ.

ಸರ್ಕಲ್ ಇನ್ಸ್‌ಪೆಕ್ಟರ್‌ನನ್ನು ಅಮಾನತುಗೊಳಿಸಲಾಗಿದೆ. ಪಿತೂರಿ, ಲಂಚ ತೆಗೆದುಕೊಂಡಿರುವುದು ಹಾಗೂ ಸಾಕ್ಷ್ಯಾ ನಾಶ ಮಾಡಿರುವುದು ದೃಢಪಟ್ಟರೆ ಕ್ರಿಮಿನಲ್ ಆರೋಪಗಳನ್ನು ಅವರು ಎದುರಿಸಬೇಕಾಗುತ್ತದೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್‌ ಜಿಹಾದ್‌ ಕೇಸ್‌ – 14 ದಿನ ನ್ಯಾಯಾಂಗ ಬಂಧನಕ್ಕೆ ಮುಫೀಸ್

Share This Article