ಸಂಕ್ರಾಂತಿ (Makar Sankranti) ಅಂದ್ರೆ ಸುಗ್ಗಿಯ ಸಂಭ್ರಮ. ಮುಂಗಾರಿನಲ್ಲಿ ಬಿತ್ತಿದ ಬೆಳೆ ಫಸಲು ನೀಡಲು ಸಜ್ಜಾಗಿ, ಭೂಮಿ ಹಸಿರಿನಿಂದ ನಳನಳಿಸುವ ಸುಸಂದರ್ಭ. ಸಂಕ್ರಾಂತಿಯೆಂದರೆ ಕೃಷಿಕರಿಗೆ ಎಲ್ಲಿಲ್ಲದ ಹಿಗ್ಗು. ಮನುಷ್ಯನಿಗೆ ಅನ್ನ ನೀಡುವ ಭೂತಾಯಿಯನ್ನು ಪೂಜಿಸಿ ನಮಿಸುವ ಹಬ್ಬವಿದು. ಅಪ್ಪಟ ಹಳ್ಳಿ ಸೊಗಡಿನ ಹಬ್ಬ ಸಂಕ್ರಾಂತಿ. ಗ್ರಾಮೀಣ ಭಾಗಗಳಲ್ಲಿ ಸುಗ್ಗಿ ಸಡಗರ ಜೋರಾಗಿರುತ್ತದೆ. ಉತ್ತರ ಮತ್ತು ದಕ್ಷಿಣ ಕರ್ನಾಟಕದಲ್ಲಿ ಸಂಕ್ರಾಂತಿ ವಿಶೇಷ ಆಚರಣೆಯಾಗಿ ನಡೆದುಕೊಂಡು ಬಂದಿದೆ.
ಉತ್ತರದಲ್ಲಿ ರೊಟ್ಟಿ-ಪಲ್ಯ ಹಬ್ಬದೂಟ
ಉತ್ತರ ಕಾರ್ನಾಟಕ ಭಾಗದಲ್ಲಿ ಸಂಕ್ರಾಂತಿಯೆಂದರೆ ಹಬ್ಬದೂಟ. ಮನೆ ಸ್ವಚ್ಛಗೊಳಿಸಿ, ತಳಿರು-ತೋರಣಗಳಿಂದ ಸಿಂಗರಿಸಿ, ಬಗೆಬಗೆಯ ಖಾದ್ಯಗಳನ್ನು ತಯಾರಿಸಿ ಪರಸ್ಪರರು ಹಂಚಿ ತಿನ್ನುವುದು. ಈ ಭಾಗದ ವಿಶೇಷ ಖಾದ್ಯಗಳಾದ ಜೋಳ, ಸಜ್ಜೆ ರೊಟ್ಟಿ, ಪುಂಡಿ ಪಲ್ಯ, ಎಣ್ಣೆಗಾಯಿ ಪಲ್ಯ, ಸೊಪ್ಪು ಪಲ್ಯ, ಶೇಂಗಾ ಚಟ್ನಿ, ಪಚಡಿ, ಹೋಳಿಗೆ, ಹಪ್ಪಳ ಮೊದಲಾದ ಖಾದ್ಯಗಳನ್ನು ಮಾಡಿ ಸವಿಯುತ್ತಾರೆ. ಇದನ್ನೂ ಓದಿ: ಮಕರ ಸಂಕ್ರಾಂತಿ – ಉತ್ತರಾಯಣದಲ್ಲೇ ಭೀಷ್ಮ ದೇಹ ತ್ಯಜಿಸಿದ್ದು ಯಾಕೆ?
ದಕ್ಷಿಣದಲ್ಲಿ ಸಂಕ್ರಾಂತಿ ಹಿಗ್ಗು
ದಕ್ಷಿಣ ಕರ್ನಾಟಕದಲ್ಲಿ ಸಂಕ್ರಾಂತಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಹೆಂಗಸರು ಮನೆಗಳನ್ನು ಶುಚಿಗೊಳಿಸಿ, ತೋರಣಗಳಿಂದ ಅಲಂಕರಿಸಿ, ಅಂಗಳದಲ್ಲಿ ರಂಗೋಲಿ ಬಿಟ್ಟು ಸಂಗರಿಸುತ್ತಾರೆ. ಪುರುಷರು ಜಾನುವಾರುಗಳನ್ನು ತೊಳೆದು ಅವುಗಳಿಗೆ ಬಣ್ಣ ಹಚ್ಚಿ ಅಲಂಕಾರ ಮಾಡುತ್ತಾರೆ. ರಾಸುಗಳನ್ನು ಕಿಚ್ಚಾಯಿಸಿ ಬಳಿಕ ಅವುಗಳಿಗೆ ಪೂಜೆ ಸಲ್ಲಿಸುತ್ತಾರೆ. ಮನೆಯಲ್ಲಿ ಹಬ್ಬದೂಟ ತಯಾರಿಸಿ ಸವಿಯುತ್ತಾರೆ.
ರಾಸುಗಳ ಕಿಚ್ಚು ಹಾಯಿಸುವುದು
ಸಂಕ್ರಾಂತಿ ಹಬ್ಬದಂದು ಹಳ್ಳಿಗಳಲ್ಲಿ ಹಸುಗಳನ್ನು ತೊಳೆದು ಅಲಂಕರಿಸುತ್ತಾರೆ. ಹಸು, ಕುರಿ, ಮೇಕೆ, ಕೋಣ, ಎಮ್ಮೆಗಳ ಮೈ-ಕೊಂಬಿಗೆ ಬಣ್ಣ ಬಳಿದು, ಹೂವು ಮತ್ತು ಬಲೂನ್‌ಗಳಿಂದ ಸಿಂಗರಿಸುತ್ತಾರೆ. ಸಾಯಂಕಾಲದ ಹೊತ್ತಿಗೆ ಊರಿನವರೆಲ್ಲ ಹಸುಗಳನ್ನು ಒಂದು ಕಡೆ ಸೇರಿಸುತ್ತಾರೆ. ಒಣಹುಲ್ಲನ್ನು ರಸ್ತೆಗೆ ಅಡ್ಡಲಾಗಿ ಹಾಕಿ ಬೆಂಕಿ ಹಚ್ಚುತ್ತಾರೆ. ಬೆಂಕಿಯಲ್ಲಿ ರಾಸುಗಳನ್ನು ನೆಗೆಸುತ್ತಾರೆ. ಜಾನುವಾರುಗಳು ಮಾಗಿಯ ಚಳಿಯಿಂದ ಮೈಕೊಡವಿ ನಿಲ್ಲಲಿ ಎಂಬ ಉದ್ದೇಶದಿಂದ ಕಿಚ್ಚು ಹಾಯಿಸಲಾಗುತ್ತದೆ. ಚಳಿಗಾಲದಲ್ಲಿ ವೈರಲ್ ಫೀವರ್ ಸಾಮಾನ್ಯ. ರಾಸುಗಳ ಮೈಮೇಲಿನ ಬ್ಯಾಕ್ಟೀರಿಯಾ ತೊಲಗಲೆಂದು ಕಿಚ್ಚು ಹಾಯಿಸುವ ಆಚರಣೆ ಇದೆ. ಇದನ್ನೂ ಓದಿ: ಮಕರ ಸಂಕ್ರಾಂತಿ – ಕಾಶಿ ಚಂದ್ರಮೌಳೇಶ್ವರ ಗರ್ಭಗುಡಿಯ ಶಿವಲಿಂಗದ ಮೇಲೆ ಸೂರ್ಯರಶ್ಮಿ ಸ್ಪರ್ಶ
ಆರೋಗ್ಯಕರ ಊಟ
ಸಂಕ್ರಾಂತಿ ಹಬ್ಬದೂಟ ಆರೋಗ್ಯ ಪ್ರಧಾನವಾಗಿದೆ. ಎಳ್ಳು-ಬೆಲ್ಲ, ಪೊಂಗಲ್, ಕಿಚಡಿ, ಹಸಿಕಾಳುಗಳ ಪಲ್ಯ ಮತ್ತು ಸಾಂಬಾರ್ ಎಲ್ಲವೂ ಚಳಿಗಾಲದಲ್ಲಿ ಮನುಷ್ಯನಿಗೆ ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಪೂರಕವಾಗಿವೆ. ಶೀತಗಾಳಿ ವಾತಾವರಣದಲ್ಲಿ ಮನುಷ್ಯನ ಚರ್ಮ ಕಾಂತಿಹೀನವಾಗುತ್ತದೆ. ದೇಹದಲ್ಲಿ ಎಣ್ಣೆಯಂಶದ ಕೊರತೆ ಇರುತ್ತದೆ. ಅದನ್ನು ಸರಿದೂಗಿಸಲು ಎಳ್ಳು ಸೇವನೆ ಮುಖ್ಯ. ಪೊಂಗಲ್ ಮತ್ತು ಕಿಚಡಿ ತಯಾರಿಕೆಗೆ ಅರಿಶಿನ ಬಳಸುವುದರಿಂದ ಅದರಲ್ಲಿ ಅಗತ್ಯ ರೋಗನಿರೋಧಕ ಶಕ್ತಿ ದೊರೆಯುತ್ತದೆ. ಇನ್ನು ಸುಗ್ಗಿಯಲ್ಲಿ ಶೇಂಗ, ತೊಗರಿ, ಹಸಿ ಅವರೆ ಮೊದಲಾದವನ್ನು ಬೆಳೆಯಲಾಗುತ್ತದೆ. ಇವುಗಳ ಸೇವನೆಯಿಂದಲೂ ಸಾಕಷ್ಟು ಪ್ರಯೋಜನಗಳಿವೆ.
ಕೃಷಿಕರ ಸುಗ್ಗಿ ಹಬ್ಬ
ಸಂಕ್ರಾಂತಿಯು ಕೃಷಿಕರ ಪಾಲಿಗೆ ಸುಗ್ಗಿ. ಭೂಮಿಯಲ್ಲಿ ಬೆಳೆ ಬೆಳೆಗಳನ್ನು ರಾಶಿ ಹಾಕಿ ಪೂಜೆ ಸಲ್ಲಿಸುತ್ತಾರೆ. ಭೂತಾಯಿ ಮಡಿಲಲ್ಲೇ ಕುಳಿತು ಹಬ್ಬದೂಟ ಮಾಡುತ್ತಾರೆ. ಭೂಮಿ ನಮಗೆ ಅನ್ನ ಕೊಡುತ್ತದೆ. ರಾಸುಗಳು ಭೂಮಿಯನ್ನು ಉತ್ತು ಬೆಳೆ ಬರಲು ಶ್ರಮ ಪಡುತ್ತವೆ. ತ್ಯಾಗಮಯಿಯಂಥ ಭೂಮಿ ಮತ್ತು ಜಾನುವಾರುಗಳನ್ನು ಈ ಸಂದರ್ಭದಲ್ಲಿ ಪೂಜಿಸಬೇಕು. ಭೂಮಿಗೆ ನಾವು ಎಂದೆಂದೂ ಋಣಿಯಾಗಿರಬೇಕೆಂಬ ಧ್ಯೇಯದಿಂದ ಹಬ್ಬ ಆಚರಿಸಲಾಗುತ್ತದೆ. ಇದನ್ನೂ ಓದಿ: ವರ್ಷದ ಮೊದಲ ಹಬ್ಬ; ವಿವಿಧ ರಾಜ್ಯಗಳಲ್ಲಿ ಮಕರ ಸಂಕ್ರಾಂತಿ ಆಚರಣೆ ಹೇಗೆ?



