ಚಾಮರಾಜನಗರ: ಇತ್ತೀಚೆಗೆ ಶಿವನಸಮುದ್ರದ ಜಲವಿದ್ಯುತ್‌ಗಾರದ ಜಲಾಶಯದ ಬಳಿಯ ನಾಲೆಯಲ್ಲಿ ಸಿಲುಕಿದ್ದ ಸಲಗವನ್ನು ಯಶಸ್ವಿಯಾಗಿ ರಕ್ಷಿಸಿದ ಅರಣ್ಯ ಸಿಬ್ಬಂದಿ ಮತ್ತು ಪಶುವೈದ್ಯರನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ (Eshwara Khandre) ಇಂದು ಸನ್ಮಾನಿಸಿದರು.
ಕೊಳ್ಳೇಗಾಲದಲ್ಲಿ ಕಮಾಂಡ್ ಸೆಂಟರ್ ಉದ್ಘಾಟಿಸಿದ ತರುವಾಯ ನಡೆದ ಅಧಿಕಾರಿಗಳ ಸಭೆಗೂ ಮುನ್ನ 40 ಅಡಿ ಆಳದಿಂದ ಆನೆಯನ್ನು ರಕ್ಷಿಸಿದ ತಂಡದಲ್ಲಿದ್ದ ಮಂಡ್ಯ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರಘು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹದೇವಸ್ವಾಮಿ, ವಲಯ ಅರಣ್ಯಾಧಿಕಾರಿ ಗವಿಯಪ್ಪ, ಪಶುವೈದ್ಯ ಆದರ್ಶ್ ಹಾಗೂ ಶಾರ್ಪ್ ಶೂಟರ್ ಅಕ್ರಮ್ ಅವರನ್ನು ಈಶ್ವರ ಖಂಡ್ರೆ ಸನ್ಮಾನಿಸಿದರು. ಇದನ್ನೂ ಓದಿ: ಇಡ್ಲಿ, ನಾಟಿಕೋಳಿ ತಿಂದಮೇಲೆ ಎಲ್ಲವೂ ಮುಗಿದಿದೆ, ಇನ್ನು ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ: ಇಕ್ಬಾಲ್ ಹುಸೇನ್
ಉತ್ತಮ ಕಾರ್ಯ ಮಾಡಿದ ಸಿಬ್ಬಂದಿ ಪ್ರಶಂಸೆಗೆ ಮತ್ತು ಸನ್ಮಾನಕ್ಕೆ ಅರ್ಹರಾಗುತ್ತಾರೆ. ಅದೇ ರೀತಿ ತಪ್ಪು ಮಾಡುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದರು.

