ಬೆಂಗಳೂರು: ರಾಜ್ಯ ಕಾಂಗ್ರೆಸ್‍ನಲ್ಲಿ (Congress) ಭಾನುವಾರ (ನ.23) ಸಹ ಕುರ್ಚಿ ಕಿತ್ತಾಟ ಮುಂದುವರಿದಿತ್ತು. ಅಧಿಕಾರ ಹಂಚಿಕೆ ಸಂಬಂಧ ಜಿದ್ದಿಗೆ ಬಿದ್ದಂತೆ ಆಡ್ತಿರುವ ಸಿಎಂ ಸಿದ್ದರಾಮಯ್ಯ-ಡಿಸಿಎಂ ಡಿಕೆಶಿ ಬಣದ ನಾಯಕರು ಪರಸ್ಪರ ಸಭೆ ನಡೆಸುತ್ತಿದ್ದಾರೆ. ಈ ನಡುವೆ ಸಿಎಂ-ಡಿಸಿಎಂ ಮನೆ ಪವರ್ ಸೆಂಟರ್ ಆಗಿ ಬದಲಾಗಿದೆ.
ಇದರ ನಡುವೆ ಸಿಎಂ ಸಿದ್ದರಾಮಯ್ಯ (Siddaramaiah) ಮನೆಗೆ ಸಚಿವರಾದ ಬೈರತಿ ಸುರೇಶ್, ಮಹದೇವಪ್ಪ, ಕೆ.ಜೆ ಜಾರ್ಜ್, ಎಂಸಿ ಸುಧಾಕರ್, ಕೆ. ವೆಂಕಟೇಶ್, ಕಾನೂನು ಸಲಹೆಗಾರ ಪೊನ್ನಣ್ಣ ಸೇರಿದಂತೆ ಹಲವು ನಾಯಕರು ಭೇಟಿ ಕೊಟ್ಟಿದ್ದರು. ಶಾಸಕರಾದ ನಂಜೇಗೌಡ, ರೂಪ ಶಶಿಧರ್ ಕೂಡ ಸಿಎಂ ಭೇಟಿ ಮಾಡಿದ್ದರು. ರಜೆ ದಿನಾವಾಗಿದ್ರೂ ಸಿಎಂ ನಿವಾಸದಲ್ಲಿ ರಾಜಕೀಯ ಗರಿಗೆದರಿತ್ತು. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿಂದು ಅಭಿವೃದ್ಧಿ ಕಾರ್ಯಕ್ರಮ; ಪವರ್ ಫೈಟ್ ಬಳಿಕ ಸಿಎಂ – ಡಿಸಿಎಂ ಮುಖಾಮುಖಿ?
ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ನಿವಾಸದಲ್ಲೂ ರಾಜಕೀಯ ಗರಿಗೆದರಿದೆ. ಡಿಸಿಎಂ ಡಿಕೆಶಿ ಸದಾಶಿವನಗರ ನಿವಾಸಕ್ಕೆ ಸಹೋದರ ಡಿಕೆ ಸುರೇಶ್, ಕುಣಿಗಲ್ ಶಾಸಕ ರಂಗನಾಥ್ ಸೇರಿದಂತೆ ಹಲವು ನಾಯಕರು ಭೇಟಿ ಕೊಟ್ಟು ಮಾತುಕತೆ ನಡೆಸಿದ್ದಾರೆ. ಈ ಮಧ್ಯೆ ಇಂಧನ ಸಚಿವ ಕೆ.ಜೆ ಜಾರ್ಜ್ ನಿವಾಸಕ್ಕೆ ಡಿಸಿಎಂ ಡಿಕೆಶಿ ಭೇಟಿ ನೀಡಿ ಚರ್ಚಿಸಿದರು. ರೇಸ್ ವ್ಯೂ ರೋಡ್‍ನಲ್ಲಿರೋ ಕೆ.ಜೆ ಜಾರ್ಜ್ ಅವರ ಸರ್ಕಾರಿ ನಿವಾಸಕ್ಕೆ ಭೇಟಿ ನೀಡಿದ ಡಿಸಿಎಂ ಕೆಲಹೊತ್ತು ಚರ್ಚಿಸಿ ವಾಪಸ್ ಆದರು.
ಕಾಂಗ್ರೆಸ್ ಮನೆಯಲ್ಲಿ ಮತ್ತೆ ಒಳಜಗಳ ಶುರುವಾಗಿದೆ. ಅಧಿಕಾರಕ್ಕೆ ಬಂದಾಗ ಚಾಲ್ತಿಯಲ್ಲಿದ್ದ ಅಧಿಕಾರ ಹಂಚಿಕೆ ಜಟಾಪಟಿ ಒಂದಷ್ಟು ದಿನ ತಣ್ಣಗಾಗಿತ್ತು. ಇದೀಗ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬುತ್ತಿದ್ದಂತೆ ಕಾಂಗ್ರೆಸ್ ಮನೆ ಮತ್ತೆ ಅಗ್ನಿ ಕುಂಡವಾಗಿ ಬದಲಾಗಿದೆ. ಸಿಎಂ-ಡಿಸಿಎಂ ಬಣದ ಸಚಿವ, ಶಾಸಕರು ಕುರ್ಚಿ ಕದನದ ಬೆನ್ನಲ್ಲೇ ದೆಹಲಿ ಪರೇಡ್ ನಡೆಸಿದ್ರು.
ಸಿಎಂ-ಡಿಸಿಎಂ ಕುರ್ಚಿ ಕಿತ್ತಾಟದ ಮಧ್ಯೆ ಪರಮೇಶ್ವರ್ ಎಂಟ್ರಿಯಾಗಿದ್ದು, ನಾನು ಕೂಡ ಸಿಎಂ ಆಕಾಂಕ್ಷಿ ಎನ್ನುವ ಮೂಲಕ ದಾಳ ಉರುಳಿಸಿದ್ದಾರೆ. ಅಲ್ಲದೇ ನಾನೂ ಅಧ್ಯಕ್ಷನಾಗಿದ್ದಾಗ ಪಕ್ಷ ಅಧಿಕಾರಕ್ಕೆ ಬಂತು. ನಾನು ಯಾವತ್ತೂ ಅಧಿಕಾರಕ್ಕೆ ತಂದೆ ಅಂತ ಹೇಳಿಕೊಳ್ಳಲಿಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಡಿ.ಕೆ ಶಿವಕುಮಾರ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಈ ಮಧ್ಯೆ, ಗೃಹ ಸಚಿವ ಪರಮೇಶ್ವರ್ (G.Parameshwar) ಪರ ಮುಂದಿನ ಸಿಎಂ ಘೋಷಣೆ ಜೋರಾಗಿದೆ. ಪರಮೇಶ್ವರ್‍ಗೆ ಸಚಿವ ಸತೀಶ್ ಜಾರಕಿಹೊಳಿ ಬೆಂಬಲ ಕೊಟ್ಟಿದ್ದಾರೆ. ಪಕ್ಷಕ್ಕೆ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗದವರೇ ಹೆಚ್ಚು ಮತದಾರರು. ಹಾಗಾಗಿ ದಲಿತ ಮುಖ್ಯಮಂತ್ರಿಯಾದ್ರೆ ತಪ್ಪೇನು ಅಂತ ಪ್ರಶ್ನೆ ಮಾಡಿದ್ದಾರೆ. ಇನ್ನೊಂದೆಡೆ ಶಾಸಕ ಪ್ರಸಾದ್ ಅಬ್ಬಯ್ಯ ಕೂಡ ಪರಮೇಶ್ವರ್ ಪರ ನಿಂತಿದ್ದಾರೆ.
ಇದೆಲ್ಲದರ ಮಧ್ಯೆ ಪವರ್ ಶೇರಿಂಗ್ ಫೈಟ್ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ. ಹೇಳುವುದಕ್ಕೆ ನನ್ನ ಹತ್ತಿರ ಏನೂ ಇಲ್ಲ. ಏನೇ ಇದ್ದರೂ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತೆ ಎಂದಿದ್ದಾರೆ. ಮುಂದೆ ರಾಜ್ಯ ಕಾಂಗ್ರೆಸ್‍ನಲ್ಲಿ ಕುರ್ಚಿ ಕಚ್ಚಾಟ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ನೋಡಬೇಕಿದೆ. ಇದನ್ನೂ ಓದಿ: ಸಿಎಂ Vs ಡಿಸಿಎಂ ಫೈಟ್ ನಡುವೆ 3ನೇ ಪವರ್ ಸೆಂಟರ್ ಸಕ್ರಿಯ – ಮತ್ತೆ ಜೋರಾದ ದಲಿತ ಸಿಎಂ ಕೂಗು

