– ಬಾಗಲಕೋಟೆಯ 3 ತಾಲೂಕುಗಳಲ್ಲಿ ನಿಷೇಧಾಜ್ಞೆ ಜಾರಿ
ಬಾಗಲಕೋಟೆ: ಮುಧೋಳ ಕಬ್ಬು ಬೆಳೆಗಾರರ ಆಕ್ರೋಶ ಹೆಚ್ಚಾಗಿದ್ದು, ಸಕ್ಕರೆ ಕಾರ್ಖಾನೆ ಬಳಿ ಎರಡು ಗುಂಪುಗಳ ನಡುವೆ ಕಲ್ಲು ತೂರಾಟವಾಗಿ ಎಎಸ್‌ಪಿ ಮಹಾಂತೇಶ್ವರ ಜಿದ್ದಿ ಅವರ ಕಾಲಿಗೆ ಗಂಭೀರ ಗಾಯಗಳಾಗಿವೆ.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಸೈದಾಪುರ ಗೋದಾವರಿ ಸಕ್ಕರೆ ಕಾರ್ಖಾನೆಯಲ್ಲಿ ಘಟನೆ ನಡೆದಿದೆ. ಕಲ್ಲು ಬಿದ್ದು ಎಎಸ್‌ಪಿ ಕಾಲಿಗೆ ಪ್ರ‍್ಯಾಕ್ಚರ್ ಆಗಿದೆ. ತಕ್ಷಣ ಅವರನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಕಬ್ಬು ಬೆಳೆಗಾರರ ಹೋರಾಟ ಕೈಮೀರಿದ್ದು, ಮುಧೋಳ, ಜಮಖಂಡಿ, ರಬಕವಿ ತಾಲೂಕುಗಳಲ್ಲಿ ಮೂರು ದಿನಗಳ ಕಾಲ ನಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಈ ಕ್ಷಣದಿಂದ ನ.16 ಬೆಳಗ್ಗೆ 8 ಗಂಟೆ ವರೆಗೆ ನಿಷೇಧಾಜ್ಞೆ ವಿಧಿಸಲಾಗಿದೆ.
ಸಮೀರವಾಡಿ ಕಾರ್ಖಾನೆಯಲ್ಲಿದ್ದ ಕಬ್ಬು ತುಂಬಿದ ಟ್ರ‍್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸಲಾಯಿತು. 25ಕ್ಕೂ ಹೆಚ್ಚು ಕಬ್ಬಿನ ಟ್ರ‍್ಯಾಕ್ಟರ್‌ಗಳಿಗೆ ಬೆಂಕಿ ಇಡಲಾಗಿದೆ. ಮುಧೋಳ ರಾಯಣ್ಣ ಸರ್ಕಲ್‌ನಿಂದ, ಸಮೀರವಾಡಿ ಸಕ್ಕರೆ ಕಾರ್ಖಾನೆಗೆ ನುಗ್ಗಿ ದಾಂಧಲೆ ನಡೆಸಲಾಗಿದೆ.
ಸ್ಥಳಕ್ಕೆ ಆಗಮಿಸಿದ್ದ ಅಗ್ನಿಶಾಮಕದಳ ವಾಹನಗಳು ಮತ್ತು ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು. ಘಟನಾ ಸ್ಥಳದಲ್ಲಿ ಪರಿಸ್ಥಿತಿ ಶಾಂತಗೊಳಿಸಲು ಪೊಲೀಸರ ಹರಸಾಹಸಪಟ್ಟರು.

