ಬೆಂಗಳೂರು/ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು ವಲಯದ ಬೇಡಗುಳಿ ಅರಣ್ಯ ಪ್ರದೇಶದಲ್ಲಿ 3 ನವಜಾತ ಹುಲಿ ಮರಿಗಳೊಂದಿಗೆ ಕೆಲವರು ವಾಹನದ ಬೆಳಕಿನಲ್ಲಿ ಫೋಟೋ, ವೀಡಿಯೋ ಮಾಡಿರುವ ಹಾಗೂ ತಾಯಿ ಹುಲಿ ಸಾವಿನ ಶಂಕೆ ಹಿನ್ನೆಲೆಯಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ (Eshwar Khandre) ಸಿಐಡಿ ತನಿಖೆಗೆ ಆದೇಶ ನೀಡಿದ್ದಾರೆ.
ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ನೀಡಿರುವ ಲಿಖಿತ ಸೂಚನೆಯಲ್ಲಿ ಅವರು, 2015ರಲ್ಲಿ ಅರಣ್ಯ ಅಪರಾಧ ಪ್ರಕರಣ ದಾಖಲಾಗಿದ್ದ ಸಂಸ್ಥೆಯೊಂದರೊಂದಿಗೆ ನಂಟು ಹೊಂದಿರುವವರೂ ಸೇರಿ ಕೆಲವರು ಅರಣ್ಯದಲ್ಲಿ ವಾಹನದ ಹೆಡ್‌ಲೈಟ್ ಬೆಳಕಲ್ಲಿ, ಹುಲಿಮರಿಗಳ ಚಿತ್ರೀಕರಣ ಮಾಡಿ, ಸ್ಪರ್ಶಿಸಿ ವನ್ಯಜೀವಿ ಕಾಯಿದೆ ಉಲ್ಲಂಘಿಸಿರುವ ಬಗ್ಗೆ ಹಾಗೂ ತಾಯಿ ಹುಲಿಯ ಇರುವಿಕೆ ಬಗ್ಗೆ ಸಂಶಯ ವ್ಯಕ್ತಪಡಿಸಿ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಸಮಗ್ರ ತನಿಖೆಗೆ ಆದೇಶ ನೀಡಿದ್ದಾರೆ. ಇದನ್ನೂ ಓದಿ: ಮಾನವ-ವನ್ಯಜೀವಿ ಸಂಘರ್ಷ ನಿಂತ್ರಣಕ್ಕೆ ಬಾರದಿದ್ರೆ ಸಫಾರಿ ಸಂಪೂರ್ಣ ಬಂದ್: ಈಶ್ವರ್ ಖಂಡ್ರೆ
ಈ ಮಧ್ಯೆ ಅಕ್ಟೋಬರ್ 15 ರಂದು ಬಿಆರ್‌ಟಿ ಅರಣ್ಯ ವಿಭಾಗದ ವತಿಯಿಂದ ನೀಡಿದ ಮಾಧ್ಯಮ ಪ್ರಕಟಣೆ ಹಾಗೂ ಹುಲಿ ಮರಿ ಜೊತೆ ಕೆಲವರು ವಿಡಿಯೋ ಮಾಡಿರುವ ದೃಶ್ಯ ತುಣುಕು ಸಾಮಾಜಿಕ ತಾಣದಲ್ಲಿ ವೈರಲ್ ಆದ ಬಳಿಕ ನೀಡಿರುವ ಹೇಳಿಕೆಗಳಲ್ಲಿ ವ್ಯತ್ಯಾಸ ಮತ್ತು ಗೊಂದಲ ಇರುವುದರ ಜೊತೆಗೆ ತಾಯಿ ಹುಲಿ ಹತ್ಯೆ ಆಗಿರುವ ಸಂಶಯವೂ ಮೂಡಿರುವ ಕಾರಣ ಹಾಗೂ ಎನ್‌ಜಿಒಗಳಿಗೆ ಬರುವ ಹಣ ದುರುಪಯೋಗದ ಆರೋಪವೂ ಇರುವುದರಿಂದ ಈ ಪ್ರಕರಣವನ್ನು ಸಿಐಡಿ ತನಿಖೆ ವಹಿಸುವುದು ಸೂಕ್ತ ಎಂದು ಸಚಿವರು ಪರಿಗಣಿಸಿದ್ದಾರೆ.

