ಬೆಂಗಳೂರು: ಧರ್ಮಸ್ಥಳ ಬುರುಡೆ ರಹಸ್ಯ ಪ್ರಕರಣಕ್ಕೆ (Dharmasthala Mass Burial Case) ಸಂಬಂಧಿಸಿದಂತೆ ಶೋಧ ನಡೆಯುತ್ತಿರುವ 13ನೇ ಸ್ಥಳದಲ್ಲಿ ಯಾವುದೇ ಮೂಳೆ ಸಿಗದೇ ಇದ್ದರೆ ವಿಶೇಷ ತನಿಖಾ ತಂಡದ (SIT) ಕಾರ್ಯಾಚರಣೆ ಸ್ಥಗಿತಗೊಳ್ಳುವ ಸಾಧ್ಯತೆಯಿದೆ.
ಹೌದು. ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ (CLP Meeting) ಖಾಸಗಿ ಹೋಟೆಲಿನಲ್ಲಿ ನಡೆಯಿತು. ಈ ವೇಳೆ ಶಾಸಕ ಬೇಳೂರು ಗೋಪಾಲಕೃಷ್ಣ ಧರ್ಮಸ್ಥಳ ಎಸ್‌ಐಟಿ ತನಿಖೆಯನ್ನು ಪ್ರಸ್ತಾಪಿಸಿ ಸಿಎಂ ಸಿದ್ದರಾಮಯ್ಯನವರನ್ನು (CM Siddaramaiah) ಪ್ರಶ್ನಿಸಿದ್ದಾರೆ. ಇದನ್ನೂ ಓದಿ: 6 ಗಂಟೆ ಕಾರ್ಯಾಚರಣೆ – 22 ಅಡಿ ಉದ್ದ, 8 ಅಡಿ ಅಗಲ, 18 ಅಡಿ ಆಳದ ಗುಂಡಿ ತೋಡಿದರೂ ಸಿಗದ ಮೂಳೆ
ಇದಕ್ಕೆ ಸಿದ್ದರಾಮಯ್ಯ, 13 ಸ್ಥಳಗಳಲ್ಲಿ ಎಸ್ಐಟಿ ಶೋಧನೆ ಮಾಡಿದೆ. ಅದರಲ್ಲಿ ಒಂದು ಕಡೆ ಮಾತ್ರ ಮೂಳೆಗಳು ಸಿಕ್ಕಿವೆ. ಅದೂ ಕೂಡ ಮಹಿಳೆಯದ್ದಲ್ಲ ಪುರುಷನದ್ದು. 13ನೇ ಪಾಯಿಂಟ್‌ನಲ್ಲೂ ಮೂಳೆಗಳು ಸಿಗದೇ ಹೋದರೆ ಎಸ್ಐಟಿ ಪರಿಶೋಧನೆ ನಿಲ್ಲಿಸಬೇಕಾಗಬಹುದು. ಎಸ್ಐಟಿಯಿಂದ ಮೂಳೆ ಶೋಧನೆಯನ್ನು ಮುಂದುವರಿಸಬೇಕಾ? ಬೇಡವಾ ಎಬುದನ್ನು ತೀರ್ಮಾನ ಮಾಡುತ್ತೇವೆ ಎಂಬುದಾಗಿ ಸಿಎಂ ಸ್ಪಷ್ಟವಾಗಿ ಹೇಳಿರುವುದಾಗಿ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ. ಇದನ್ನೂ ಓದಿ: ರಾಹುಲ್ ಗಾಂಧಿ ನಿರ್ದೇಶನದ ಮೇಲೆ ರಾಜಣ್ಣರನ್ನ ಸಂಪುಟದಿಂದ ವಜಾ ಮಾಡಲಾಗಿದೆ: ಸಿದ್ದರಾಮಯ್ಯ
ಸರ್ಕಾರ ಎಸ್‌ಐಟಿ ರಚನೆ ಮಾಡಿದ ಬಗ್ಗೆ ಜನರಿಂದ ಒಳ್ಳೆಯ ಅಭಿಪ್ರಾಯ ಬಂದಿದೆ. ಧರ್ಮಸ್ಥಳದ ವಿಚಾರದಲ್ಲಿ ಯಾರೂ ಭಾವನಾತ್ಮಕವಾಗಿ ಹೇಳಿಕೆ ನೀಡಬೇಡಿ. ಸೋಶಿಯಲ್ ಮೀಡಿಯ ನೋಡಿ ಅಭಿಪ್ರಾಯ ಹಂಚಿಕೊಳ್ಳಬೇಡಿ ಎಂದು ಸಿಎಂ ಸೂಚಿಸಿದ್ದಾರೆ.