ಇಸ್ಲಾಮಾಬಾದ್: ನನ್ನ ಕುಟುಂಬದ ಹತ್ತು ಸದಸ್ಯರಿಗೆ ಒಟ್ಟಿಗೆ ಅಲ್ಲಾನ ಆಶೀರ್ವಾದ ಸಿಕ್ಕಿದೆ. ಅವರೆಲ್ಲರೂ ಒಟ್ಟಿಗೆ ಅಲ್ಲಾನ ಅತಿಥಿಗಳಾಗಿದ್ದಾರೆ ಎಂದು ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಹೇಳಿಕೊಂಡಿದ್ದಾನೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರದಲ್ಲಿ ಮಸೂದ್ ಕುಟುಂಬದ 10 ಸದಸ್ಯರು ಮತ್ತು ಅವನ ನಾಲ್ವರು ಸಹಾಯಕರು ಹತ್ಯೆಯಾಗಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿ, ʻಐದು ಮಂದಿ ಮುಗ್ಧ ಮಕ್ಕಳು, ನನ್ನ ಅಕ್ಕ, ಅವಳ ಪತಿ. ನನ್ನ ಸೋದರಳಿಯ ಫಝಿಲ್ ಭಂಜೆ, ನನ್ನ ಪತ್ನಿ ಫಝಿಲಾ, ಸಹೋದರ ಹುಜೈಫಾ ಮತ್ತು ತಾಯಿ ಅಲ್ಲಾನ ಅತಿಥಿಗಳಾಗಿದ್ದಾರೆʼ ಎಂದು ಹೇಳಿಕೊಂಡಿದ್ದಾನೆ. ಇದನ್ನೂ ಓದಿ: JEM ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ಕುಟುಂಬದ 10 ಜನ ಸೇರಿ 14 ಮಂದಿ ಹತ್ಯೆ
ನನಗೆ ಪದಗಳಲ್ಲಿ ಹೇಳಲಾಗದಷ್ಟು ದುಃಖವಾಗಿದೆ. ಆದರೆ ಈ ಬಗ್ಗೆ ನನಗೆ ವಿಷಾದವಿಲ್ಲ, ಭಯವೂ ಇಲ್ಲ. ಇಂದು ಹುತಾತ್ಮರಾಗುತ್ತಿರುವ ಅಲ್ಲಾಹನ ಈ 14 ಅತಿಥಿಗಳಲ್ಲಿ ನಾನೂ ಸೇರಬೇಕೆಂದು ಪ್ರಾರ್ಥಿಸುತ್ತೇನೆ ಎಂದಿದ್ದಾನೆ.
1994 ರಲ್ಲಿ ಭಾರತದಲ್ಲಿ ಬಂಧಿಸಲ್ಪಟ್ಟಿದ್ದ ಉಗ್ರ ಮಸೂದ್, ಏರ್ ಇಂಡಿಯಾ ಐಸಿ 814 ವಿಮಾನ ಅಪಹರಣದ ನಂತರ ಬಿಡುಗಡೆಯಾಗಿದ್ದ. ಈತನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ ಅಂತಾರರಾಷ್ಟ್ರೀಯ ಭಯೋತ್ಪಾದಕರ ಪಟ್ಟಿಗೆ ಸೇರಿಸಿದೆ. 2001ರ ಸಂಸತ್ತಿನ ದಾಳಿ, 2008ರ ಮುಂಬೈ ದಾಳಿ, 2016ರ ಪಠಾಣ್‌ಕೋಟ್ ದಾಳಿ ಮತ್ತು 2019ರ ಪುಲ್ವಾಮಾ ದಾಳಿ ಸೇರಿದಂತೆ ಭಾರತದಲ್ಲಿ ನಡೆದ ಅನೇಕ ಭಯೋತ್ಪಾದಕ ದಾಳಿಗಳ ಹಿಂದಿನ ಪಿತೂರಿಯಲ್ಲಿ ಈತ ಭಾಗಿಯಾಗಿದ್ದಾನೆ.
ಮಸೂದ್ ಪಾಕಿಸ್ತಾನದಲ್ಲಿದ್ದಾನೆ ಎಂಬುದು ಬಹಿರಂಗವಾದರೂ, ಪಾಕ್ ಅವನ ಬಗ್ಗೆ ಮಾಹಿತಿ ಇಲ್ಲ ಎಂದು ಪದೇ ಪದೇ ಹೇಳುತ್ತಲೇ ಬಂದಿದೆ.
ಭಾರತೀಯ ಸೇನೆ ರಾತ್ರೋ ರಾತ್ರಿ ಪಾಕಿಸ್ತಾನ ಮತ್ತು ಪಾಕ್ ಅಕ್ರಮಿತ ಕಾಶ್ಮೀರದಲ್ಲಿರುವ 9 ಅಡಗುತಾಣಗಳ ಮೇಲೆ ದಾಳಿ ನಡೆಸಿತ್ತು. ಈ ಪ್ರತೀಕಾರದ ದಾಳಿಯಲ್ಲಿ (Pahalgam Terrorist Attack) ನಿಷೇಧಿತ ಮೂರು ಉಗ್ರ ಸಂಘಟನೆಗಳಾದ ಜೈಶ್ ಎ ಮೊಹಮ್ಮದ್, ಲಷ್ಕರ್ ಎ ತೈಬಾ (LET) ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಉಗ್ರರ ಪ್ರಧಾನ ಕಚೇರಿಗಳು ಧ್ವಂಸವಾಗಿವೆ. ದಾಳಿಯಲ್ಲಿ 100ಕ್ಕೂ ಅಧಿಕ ಉಗ್ರರು ಸಾವಿಗೀಡಾಗಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಯಾವುದೇ ದೋಷವಿಲ್ಲದೆ ತನ್ನ ಗುರಿ ಸಾಧಿಸಿದೆ – ಸೇನೆಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ