ವಿಜಯೇಂದ್ರ, ಯತ್ನಾಳ್ ಟೀಂಗೆ ‘ಹೈ’ ಶಾಕ್ – ಐವರು ನಾಯಕರಿಗೆ ಶಿಸ್ತು ಸಮಿತಿಯಿಂದ ಶೋಕಾಸ್ ನೋಟಿಸ್

Public TV
2 Min Read
BJP Highcommand Notice

ನವದೆಹಲಿ: ರಾಜ್ಯ ಬಿಜೆಪಿಯಲ್ಲಿ (BJP) ಬಣ ಬಡಿದಾಟ ಜೋರಾಗಿದೆ. ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ವಿರುದ್ಧ ಯತ್ನಾಳ್ (Basanagouda Patil Yatnal) ಟೀಂ ಬಂಡಾಯ ಸಾರಿದರೆ, ಇತ್ತ ಯತ್ನಾಳ್ ಟೀಂ ವಿರುದ್ಧ ಬಿಎಸ್‌ವೈ ಟೀಂ ಸಮರ ಸಾರಿದೆ. ಈ ನಡುವೆ ಅಕ್ಕಿ ಮೇಲಾಸೆ ನೆಂಟರ ಮೇಲೆ ಪ್ರೀತಿ ಎಂಬಂತೆ ಬಿಜೆಪಿಯಲ್ಲಿದ್ದು ಕಾಂಗ್ರೇಸ್ ಪರ ಮಾತನಾಡುವ ಮತ್ತೊಂದು ಗುಂಪು. ಈ ಗುಂಪುಗಾರಿಕೆಯಿಂದ ಬೇಸತ್ತ ಹೈಕಮಾಂಡ್ ಒಂದೇ ಕಲ್ಲಿಗೆ ಮೂರು ಹಕ್ಕಿ ಹೊಡೆಯುವ ನಿರ್ಧಾರಕ್ಕೆ ಬಂದಿದ್ದು, ಬಿಜೆಪಿಯ ಐವರು ನಾಯಕರಿಗೆ ಶೋಕಾಸ್ ನೋಟಿಸ್ ನೀಡಿದೆ.

ರಾಜ್ಯ ಬಿಜೆಪಿ ಮನೆಯೊಂದು ಮೂರು ಬಾಗಿಲಾಗಿದೆ. ಒಂದು ಕಡೆ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಮರ ಸಾರಿದರೇ ವಿಜಯೇಂದ್ರ ಪರ ನಿಂತಿರುವ ಕೆಲವು ಶಾಸಕರು ಯತ್ನಾಳ್ ಗ್ಯಾಂಗ್ ವಿರುದ್ಧ ವಾಗ್ಯುದ್ಧ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಬಿಜೆಪಿಯಲ್ಲೇ ಇದ್ದು ಕಾಂಗ್ರೆಸ್ ಪರ ಬ್ಯಾಟಿಂಗ್ ಮಾಡುತ್ತಿರುವ ಗುಂಪು ಆಕ್ಟಿವ್ ಆಗಿದೆ. ಇದರಿಂದ ಬೇಸತ್ತ ಹೈಕಮಾಂಡ್ ಒಂದೇ ಕಲ್ಲಿಗೆ ಮೂರು ಹಕ್ಕಿ ಹೊಡೆಯುವ ನಿರ್ಧಾರಕ್ಕೆ ಬಂದಿದೆ. ಇದನ್ನೂ ಓದಿ: ಗುಜರಾತ್ ಟೈಟನ್ಸ್ ವಿರುದ್ಧ ಪಂಜಾಬ್‌ಗೆ 11 ರನ್‌ಗಳ ರೋಚಕ ಗೆಲುವು

ಹೌದು, ರಾಜ್ಯ ಬಿಜೆಪಿಯಲ್ಲಿರುವ ಬಣ ರಾಜಕೀಯಕ್ಕೆ ಇತಿಶ್ರೀ ಹಾಡಲು ಮುಂದಾಗಿರುವ ಬಿಜೆಪಿ ಹೈಕಮಾಂಡ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಳಿಕ ಐದು ಮಂದಿ ನಾಯಕರಿಗೆ ಶೋಕಾಸ್ ನೋಟಿಸ್ ನೀಡಿದೆ. ಬಿಜೆಪಿ ರಾಷ್ಟ್ರೀಯ ಶಿಸ್ತು ಪಾಲನ ಸಮಿತಿ ಯತ್ನಾಳ್ ಬಣದ ಶಾಸಕ ಬಿ.ಪಿ ಹರೀಶ್, ವಿಜಯೇಂದ್ರ ಪರ ಬ್ಯಾಟ್ ಬೀಸುತ್ತಿದ್ದ ಮಾಜಿ ಶಾಸಕರಾದ ಎಂ.ಪಿ ರೇಣುಕಾಚಾರ್ಯ, ಕಟ್ಟಾ ಸುಬ್ರಮಣ್ಮನಾಯ್ಡು ಹಾಗೂ ಬಿಜೆಪಿಯಲ್ಲಿದ್ದು ಕೈಪರ ಬ್ಯಾಟ್ ಬೀಸುತ್ತಿದ್ದ ಶಿವರಾಮ್ ಹೆಬ್ಬಾರ್ ಮತ್ತು ಎಸ್‌ಟಿ ಸೋಮಶೇಖರ್‌ಗೆ ಶೋಕಾಸ್ ನೋಟಿಸ್ ನೀಡಿದ್ದು, 72 ಗಂಟೆಗಳಲ್ಲಿ ಉತ್ತರ ನೀಡುವಂತೆ ಸೂಚನೆ ನೀಡಿದೆ. ರ‍್ಯಾಪಿಡ್ ಆಕ್ಷನ್‌ನಲ್ಲಿ ಕ್ರಮಕ್ಕೆ ಮುಂದಾಗಿರುವ ಬಿಜೆಪಿ ಈ ಬೆಳವಣಿಗೆ ಬೆನ್ನಲ್ಲೇ ರಾಜ್ಯ ಬಿಜೆಪಿಗೆ ಅಧ್ಯಕ್ಷರ ನೇಮಕಕ್ಕೆ ಮುಂದಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಜಮೀನು ರಸ್ತೆಗಾಗಿ ಗಲಾಟೆ – ನಡುರಸ್ತೆಯಲ್ಲೇ ಚಿಕ್ಕಪ್ಪನ ಮೇಲೆ ಮಚ್ಚಿನಿಂದ ಹಲ್ಲೆ

ರಾಜ್ಯಾಧ್ಯಕ್ಷರ ಆಯ್ಕೆಗೂ ಮುನ್ನ ಪಕ್ಷದಲ್ಲಿ ಗುಂಪುಗಾರಿಕೆ ನಡೆಸುತ್ತಿರುವ ಬಣಗಳಿಗೆ ದಂಡಂ ದಶಗುಣಂ ಅಸ್ತ್ರ ಪ್ರಯೋಗಿಸಿದ್ದು ಹೊಸ ಅಧ್ಯಕ್ಷರ ನೇಮಕದ ಬಳಿಕ ಯಾರೂ ತುಟಿ ಬಿಚ್ಚದಂತೆ ನೋಡಿಕೊಳ್ಳುವ ತಂತ್ರ ಎನ್ನಲಾಗುತ್ತಿದೆ. ಈ ನಡುವೆ ಪಕ್ಷದ ಮೂಲಗಳಿಂದ ಮಾಹಿತಿ ಸಿಕ್ಕಿದ್ದು ರಾಜ್ಯಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸದೇ ಹೈಕಮಾಂಡ್ ನೇರ ರಾಜ್ಯಧ್ಯಕ್ಷರ ನೇಮಕ ಮಾಡಬಹುದು ಎನ್ನಲಾಗುತ್ತಿದೆ. ಇದನ್ನೂ ಓದಿ: ಕಮಕಾರಟ್ಟಿ ಘಾಟ್‌ನಲ್ಲಿ 3 KSRTC ಬಸ್‌, 3 ಲಾರಿ, 1 ಕಂಟೇನರ್‌, 1 ಬೈಕ್‌ ಮಧ್ಯೆ ಸರಣಿ ಅಪಘಾತ- ಎಲ್ಲರೂ ಪಾರು

ಸದ್ಯ ಎಂ.ಪಿ ರೇಣುಕಾಚಾರ್ಯ, ಕಟ್ಟಾ ಸುಬ್ರಮಹ್ಮಣನಾಯ್ಡು, ಬಿ.ಪಿ ಹರೀಶ್‌ಗೆ ನೋಟಿಸ್ ನೀಡಿರುವುದು ಬಾಯಿ ಮುಚ್ಚಿಸುವ ತಂತ್ರ ಆದರೆ ಎಸ್‌ಟಿ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್‌ಗೆ ಉಚ್ಚಾಟನೆ ಎಚ್ಚರಿಕೆ ಎಂದು ವಿಶ್ಲೇಷಿಸಲಾಗುತ್ತಿದೆ. ಸದ್ಯ ಅದೇನೇ ಇದ್ದರೂ ಹೈಕಮಾಂಡ್ ನಡೆ ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ. ಇದನ್ನೂ ಓದಿ: ಯೆಮೆನ್ ಮೇಲೆ ಅಮೆರಿಕ ದಾಳಿಗೂ ಮುನ್ನವೇ ರಹಸ್ಯ ಲೀಕ್

Share This Article