ಯುರೋಪ್‌ನಲ್ಲಿ ಮೊದಲ ಬಾರಿಗೆ ಸ್ಲಾತ್ ಫೀವರ್‌ ಪತ್ತೆ; ಬ್ರೆಜಿಲ್‌ನಲ್ಲಿ ಇಬ್ಬರು ಬಲಿ- ಏನಿದು ಹೊಸ ರೋಗ?

Public TV
2 Min Read
Sloth Fever Oropouche Virus

ಗತ್ತಿನಲ್ಲಿ ಕೋವಿಡ್‌ -19, ಎಂಪಾಕ್ಸ್‌, ಝಿಕಾ ವೈರಸ್ ಹೀಗೆ ದಿನಕ್ಕೊಂದು‌ ಹೊಸಹೊಸ ರೋಗಗಳು ಹುಟ್ಟಿಕೊಳ್ಳುತ್ತಿವೆ. ಇದೀಗ ಯುರೋಪ್‌ನಲ್ಲಿ ಮೊದಲ ಬಾರಿಗೆ ʼಸ್ಲಾತ್ ವೈರಸ್‌ʼ ಎಂಬ ಹೊಸ ವೈರಸ್‌ ಪತ್ತೆಯಾಗಿದ್ದು,ಈಗಾಗಲೇ 19 ಜನರಲ್ಲಿ ಈ ವೈರಸ್‌ ಕಾಣಿಸಿಕೊಂಡಿದೆ. ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (ECDC) ಓರೊಪೌಚೆ ವೈರಸ್ (ಸ್ಲಾತ್ ಫೀವರ್) ವರದಿ ಪ್ರಕಾರ, ಸ್ಪೇನ್‌ನಲ್ಲಿ 12, ಇಟಲಿಯಲ್ಲಿ ಐದು ಮತ್ತು ಜರ್ಮನಿಯಲ್ಲಿ ಎರಡು ಸೇರಿದಂತೆ ಯುರೋಪ್‌ನಲ್ಲಿ 19 ಪ್ರಕರಣಗಳು ಪತ್ತೆಯಾಗಿದೆ. ಇಷ್ಟು ಮಾತ್ರವಲ್ಲದೇ ಬ್ರೆಜಿಲ್‌ನಲ್ಲಿ ಈ ವೈರಸ್‌ನಿಂದಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಏನಿದು ʼಸ್ಲಾತ್ ಫೀವರ್ʼ?‌ ರೋಗಲಕ್ಷಣಗಳೇನು ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.

ಓರೊಪೌಚೆ ವೈರಸ್ (ಸ್ಲಾತ್ ಫೀವರ್)‌ ಎಂದರೇನು?
ಈ ರೋಗವು ಸಾಮಾನ್ಯವಾಗಿ ಕೀಟಗಳ ಕಡಿತದಿಂದ ಹರಡುತ್ತದೆ. ಆದರೆ ಕೆಲವು ಜಾತಿಯ ಸಸ್ತನಿಗಳು ಮತ್ತು ಪಕ್ಷಿಗಳಲ್ಲಿ ಕೂಡ ಈ ವೈರಸ್ ಹುಟ್ಟಿಕೊಳ್ಳುತ್ತದೆ. ಸ್ಲಾತ್ ವೈರಸ್ ಎಂಬುದು ಓರೊಪೌಚೆ ವೈರಸ್‌ನ ಇನ್ನೊಂದು ಹೆಸರು.

ಇದು ಯಾವುದೇ ವಯಸ್ಸಿನ ಜನರಿಗೆ ಹರಡಬಹುದಾದ ವೈರಲ್ ಕಾಯಿಲೆಯಾಗಿದೆ. ಇದನ್ನು ಸಾಮಾನ್ಯವಾಗಿ ಡೆಂಗ್ಯೂ ಎಂದು ತಪ್ಪಾಗಿ ಗ್ರಹಿಸಲಾಗುತ್ತದೆ .ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು (CDC) ಪ್ರಕಾರ ಸೊಳ್ಳೆಗಳಿಂದ ಜನರಿಗೆ ಹರಡುವ ಗಂಭೀರ ಸೋಂಕು ಇದಾಗಿದದೆ. ಕೆಮ್ಮುವುದು, ಸ್ಪರ್ಶಿಸುವುದು ಅಥವಾ ಸೀನುವ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಈ ವೈರಸ್‌ ಹರಡುವುದಿಲ್ಲ ಸಿಡಿಸಿ ವರದಿಗಳು ತಿಳಿಸಿವೆ.

Sloth Fever 1

ಓರೊಪೌಚೆ ವೈರಸ್‌ ಸ್ಲಾತ್‌ ಪ್ರಾಣಿ, ಕೋತಿಗಳು ಮತ್ತು ಪಕ್ಷಿಗಳಂತಹ ಮಾನವರಲ್ಲದ ಸಸ್ತನಿಗಳಲ್ಲಿ ಸಾಮಾನ್ಯವಾಗಿದೆ. ಆದರೆ ಇದು ಕೆಲವು ಕೀಟಗಳ ಮೂಲಕ ಜನರಿಗೆ ಹರಡಬಹುದು. ಇದನ್ನು ಸಾಮಾನ್ಯವಾಗಿ ರಕ್ತ ಪರೀಕ್ಷೆಯಿಂದ ನಿರ್ಣಯಿಸಲಾಗುತ್ತದೆ.

ಒರೊಪೌಚೆ ವೈರಸ್ ಮೊದಲು 1955ರಲ್ಲಿ ಕಾಣಿಸಿಕೊಂಡಿತು. ಬಳಿಕ ದಕ್ಷಿಣ ಅಮೆರಿಕ ಹಾಗೂ ಮಧ್ಯ ಅಮೆರಿಕದಲ್ಲಿ ಹೆಚ್ಚಾಗಿ ಕಾಣಿಸತೊಡಗಿತು.ಈಗ ಯುರೋಪ್‌ನಿಂದ ಅಮೆರಿಕ, ಅಥವಾ ವೈರಸ್‌ ಹೆಚ್ಚಿರುವ ದೇಶಗಳಿಗೆ ಪ್ರಯಾಣ ಬೆಳೆಸಿದವರಲ್ಲಿ ಈ ರೋಗ ಕಾಣಿಸಿಕೊಂಡಿದ್ದು,ಮರಳಿ ಬಂದವರ ಜೊತೆ ಯುರೋಪ್‌ಗೂ ಈ ವೈರಸ್‌ ಕಾಲಿಟ್ಟಿದೆ ಎಂದು ಡಾ.ಅಡಾಲ್ಜಾ ಹೇಳಿದ್ದಾರೆ.

Sloth Virus

ರೋಗಲಕ್ಷಣಗಳೇನು?
*ತಲೆನೋವು
*ಜ್ವರ
*ಸ್ನಾಯು ನೋವುಗಳು
*ಗಟ್ಟಿಯಾದ ಕೀಲುಗಳು
*ವಾಕರಿಕೆ
*ವಾಂತಿ
*ಚಳಿ
*ಬೆಳಕಿಗೆ ಒಗ್ಗಿಕೊಳ್ಳದಿರುವುದು ಮುಂತಾದವುಗಳು ಈ ರೋಗದ ಪ್ರಮುಖ ಲಕ್ಷಣಗಳಾಗಿವೆ.

ಈ ರೋಗಕ್ಕೆ ತುತ್ತಾಗಿ 4ರಿಂದ 8 ದಿನಗಳ ಒಳಗೆ ರೋಗಲಕ್ಷಣಗಳು ಕಾಣಿಸಿಕೊಳ್ಳತೊಡಗುತ್ತವೆ. ಈ ವೈರಸ್‌ ಹಲವು ವಾರಗಳವೆಗೆ ಕಾಣಿಸಿಕೊಳ್ಳಬಹುದು ಎಂದು ಡಾ.ಶಾಫ್ನರ್ ತಿಳಿಸಿದ್ದಾರೆ. ಅಲ್ಲದೇ ಹಲವು ವಾರಗಳವರೆಗೆ ಆಯಾಸ ಮತ್ತು ಕೀಲುನೋವುಗಳು ಕಾಣಿಸಿಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.

Sloth Fever

ಚಿಕಿತ್ಸೆ ಏನು?
ವೈರಸ್‌ಗೆ ಯಾವುದೇ ಲಸಿಕೆ ಇಲ್ಲ. ಈ ವೈರಸ್‌ ಝಿಕಾ ಮತ್ತು ಡೆಂಗ್ಯೂ ವೈರಸ್‌ಗಳ ತಳಿಯಿಂದ ಬಂದಿದೆ ಎಂದು ವೈದ್ಯರು ಶಂಕಿಸಿದ್ದಾರೆ. ಇನ್ನು ಜ್ವರ ಮತ್ತು ಸ್ನಾಯು ನೋವುಗಳಿಗೆ ಸಹಾಯ ಮಾಡಲು ಪೈನ್‌ ರಿಲೀಫ್‌ ಔಷಧಗಳನ್ನು ಒಳಗೊಂಡಿರುತ್ತದೆ, ಜೊತೆಗೆ ವಾಕರಿಕೆ ಮತ್ತು ವಾಂತಿಗೆ ನೀಡುವ ಔಷಧಿಗಳನ್ನು ಚಿಕಿತ್ಸೆ ಒಳಗೊಂಡಿರುತ್ತದೆ.

ಇನ್ನು ಈ ರೋಗ ಹೆಚ್ಚಾದರೆ ಮಾರಣಾಂತಿಕವಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಈ ವೈರಸ್ ನರಮಂಡಲದ ಮೇಲೆ ಆಕ್ರಮಣ ಮಾಡಬಹುದು. ಇದು ಸಿಡಿಸಿ ಪ್ರಕಾರ ಮೆನಿಂಜೈಟಿಸ್, ಎನ್ಸೆಫಾಲಿಟಿಸ್ ಅಥವಾ ಇತರ ಗಂಭೀರ ನರವೈಜ್ಞಾನಿಕ ತೊಡಕುಗಳನ್ನು ಈ ವೈರಸ್‌ ಉಂಟುಮಾಡುತ್ತದೆ. ಈ ಸೋಂಕಿಗೆ ಒಳಗಾದವರ ಪೈಕಿ 4% ಜನರಲ್ಲಿ ಇದು ಸಂಭವಿಸುತ್ತದೆ.

ಇನ್ನು ಈ ರೋಗವನ್ನು ತಡೆಗಟ್ಟುವ ಸಲುವಾಗಿ ಸೊಳ್ಳೆ ಪರದೆ, ಕೀಟನಾಶಕ ಔಷಧಿಗಳನ್ನು ಬಳಸಿದರೆ ಉತ್ತಮ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

Share This Article