ನವದೆಹಲಿ: ಹೊಸ ಮಧ್ಯ ನೀತಿಯಲ್ಲಿ (Delhi liquor Policy Case) ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿದ್ದ ಎಎಪಿ ನಾಯಕ ಹಾಗೂ ಸಂಸದ ಸಂಜಯ್ ಸಿಂಗ್ (Sanjay Singh) ಅವರಿಗೆ ಸುಪ್ರಿಂ ಕೋರ್ಟ್ ಮಂಗಳವಾರ ಜಾಮೀನು ನೀಡಿದೆ.
ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಸಂಜಯ್ ಸಿಂಗ್ ಅವರ ಕಸ್ಟಡಿ ಇನ್ನು ಮುಂದೆ ಅಗತ್ಯವಿಲ್ಲ ಎಂದು ಜಾರಿ ನಿರ್ದೇಶನಾಲಯ (ED) ಹೇಳಿದ ನಂತರ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ದೀಪಂಕರ್ ದತ್ತಾ ಮತ್ತು ಪ್ರಸನ್ನ ಬಿ ವರಾಲೆ ಅವರಿದ್ದ ತ್ರಿಸದಸ್ಯ ಪೀಠವು ಜಾಮೀನಿನ ಮೇಲೆ ಬಿಡುಗಡೆಗೆ ಆದೇಶಿಸಿತು.
ಇಡಿ ಬಂಧನ ಮತ್ತು ಜಾಮೀನು ಕೋರಿ ಸಂಜಯ್ ಸಿಂಗ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸಂಜೀವ್ ಖನ್ನಾ ನೇತೃತ್ವದ ತ್ರಿ ಸದಸ್ಯ ಪೀಠ, ಜಾಮೀನು ನೀಡಲು ಆಕ್ಷೇಪಗಳಿವೆಯೇ ಎಂದು ಇಡಿಯನ್ನು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಇಡಿ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್-3 ಮತ್ತು 4ರ ಅಡಿಯಲ್ಲಿ ತನಿಖಾ ವರದಿಯಿಂದ ಉಂಟಾಗುವ ವಿಚಾರಣೆಯ ಬಾಕಿ ಇರುವಾಗ ಸಂಜಯ್ ಸಿಂಗ್‌ಗೆ ಜಾಮೀನು ನೀಡಲು ಆಕ್ಷೇಪಿಸುವುದಿಲ್ಲ ಎಂದು ಹೇಳಿತು.
ಇಡಿ ವಾದ ಆಲಿಸಿದ ಬಳಿಕ ಕೋರ್ಟ್ (Supreme Court) ಮಧ್ಯಂತರ ಜಾಮೀನು ಮಂಜೂರು ಮಾಡಿತು. ಷರತ್ತುಗಳನ್ನು ಕೆಳಹಂತದ ನ್ಯಾಯಲಯ ನಿರ್ಧರಿಸಲಿದೆ ಎಂದು ಹೇಳಿತು. ಜಾಮೀನಿನ ಅವಧಿಯಲ್ಲಿ ಸಿಂಗ್ ಅವರು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅರ್ಹರಾಗಿರುತ್ತಾರೆ. ಆದ್ರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಬಹಿರಂಗ ಹೇಳಿಕೆ ನೀಡಬಾರದು ಎಂದು ಕೋರ್ಟ್ ಸಂಜಯ್ ಸಿಂಗ್‌ಗೆ ತಾಕೀತು ಮಾಡಿದೆ. ಇದನ್ನೂ ಓದಿ: ಆಯುರ್ವೇದ ಉತ್ಪನ್ನ ಉತ್ತೇಜಿಸಲು ದಾರಿತಪ್ಪಿಸುವ ಜಾಹೀರಾತು ಪ್ರಸಾರ; ಬಾಬಾ ರಾಮದೇವ್ ಕ್ಷಮೆ ಒಪ್ಪದ ಸುಪ್ರೀಂ
ಸಂಜಯ್ ಸಿಂಗ್ ಪರ ವಾದ ಮಂಡಿಸಿದ ಅಭಿಷೇಕ್ ಮನುಸಿಂಘ್ವಿ, ಇತರೆ ಆರೋಪಿಗಳ ಹೇಳಿಕೆ ಆಧರಿಸಿ ದಾಳಿಯನ್ನು ನಡೆಸಲಾಗಿತ್ತು. ಈವರೆಗೂ ಯಾವುದೇ ನಗದು ಹಣ ಪತ್ತೆಯಾಗಿಲ್ಲ ಅಂತಹ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ವಾದಿಸಿದರು. ಇದನ್ನೂ ಓದಿ: ಜೈಲು ಸೇರಿರುವ ಸಂಜಯ್ ಸಿಂಗ್‍ಗೆ ಎಂಪಿಯಾಗಿ ಮುಂದುವರಿಸಲು ಆಪ್ ನಿರ್ಧಾರ
ಏನಿದು ಪ್ರಕರಣ?
ಕಳೆದ ವರ್ಷ ಅಕ್ಟೋಬರ್ 4 ರಂದು ಸಂಜಯ್ ಸಿಂಗ್ ಅವರನ್ನು ಹೊಸ ಮದ್ಯ ನೀತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಅವರ ಮನೆಯ ಮೇಲೆ ಇಡಿ ದಾಳಿ ನಡೆಸಿತ್ತು. ಬಳಿಕ ಅವರನ್ನು ಬಂಧಿಸಲಾಗಿತ್ತು. ಇಡಿ ಬಂಧನವನ್ನು ಪ್ರಶ್ನಿಸಿ ಸಂಜಯ್ ಸಿಂಗ್ ಅರ್ಜಿ ಸಲ್ಲಿಸಿದ್ದರು, ಆದರೆ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿತ್ತು. ಇದೀಗ 6 ತಿಂಗಳ ಬಳಿಕ ಸುಪ್ರೀಂ ಕೋರ್ಟ್ ಸಂಜಯ್ ಸಿಂಗ್ ಅವರಿಗೆ ಜಾಮೀನು ಮಂಜೂರು ಮಾಡಿದೆ. ಇದನ್ನೂ ಓದಿ: ಕಾಂಗ್ರೆಸ್‌ಗೆ ಕೇಂದ್ರದಿಂದ ಬಿಗ್ ರಿಲೀಫ್ – ಚುನಾವಣೆ ಮುಗಿಯವರೆಗೂ ತೆರಿಗೆ ವಸೂಲಿ ಇಲ್ಲ