ಕಾವೇರಿ ಉಗಮ ಸ್ಥಾನ ತ್ರಿವೇಣಿ ಸಂಗಮದಲ್ಲೇ ಬತ್ತಿದ ಕಾವೇರಿ – ಸ್ನಾನ, ಪಿಂಡ ಪ್ರದಾನಕ್ಕೆ ಭಕ್ತರ ಪರದಾಟ

Public TV
2 Min Read
No drinking water left even at the birthplace of Cauvery Water level depletes in Triveni Sangama 3

ಮಡಿಕೇರಿ: ಕೊಡಗಿನಲ್ಲಿ (Kodagu) ಕಳೆದ ವರ್ಷ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿರುವುದರಿಂದ ಕೇವಲ ಜಲಾಶಯಗಳು (Dam) ಹಾಗೂ ನದಿಗಳ ಮೇಲೆ ಮಾತ್ರವೇ ಪರಿಣಾಮ ಬೀರಿಲ್ಲ. ಕಾವೇರಿ (Cauvery) ಉಗಮ ಸ್ಥಾನ ತಲಕಾವೇರಿ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿಯೂ ಕಾವೇರಿ ಒಡಲು ಬತ್ತಿಹೋಗುತ್ತಿದೆ. ಭಕ್ತರ ಸ್ನಾನಕ್ಕೂ ನೀರು ಇಲ್ಲದೇ ದೇವಾಲಯಕ್ಕೆ ತೆರಳಬೇಕಾದ್ರೆ ಕೈ, ಕಾಲು ತೊಳೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

No drinking water left even at the birthplace of Cauvery Water level depletes in Triveni Sangama 2

ಕೊಡಗಿನಲ್ಲಿ ಹುಟ್ಟಿ ನಾಲ್ಕು ಜಿಲ್ಲೆಗಳಲ್ಲಿ ಹರಿದು ನಾಡಿನ ಹಲವು ಜಿಲ್ಲೆಗಳ ಜೀವ ಜಲವಾಗಿರುವ ಕಾವೇರಿ ನದಿ ಬೇಸಿಗೆ ಆರಂಭವಾಗುವ ಮೊದಲೇ ಬಹುತೇಕ ಬತ್ತುತ್ತಿದೆ. ದಕ್ಷಿಣ ಕಾಶ್ಮೀರ ಎಂದು ಹೆಸರುವಾಸಿಯಾಗಿದ್ದ ಕೊಡಗು ಜಿಲ್ಲೆಯಲ್ಲಿ ವರ್ಷದ ನಾಲ್ಕೈದು ತಿಂಗಳು ನಿರಂತರ ಮಳೆ (Rain) ಸುರಿಯುತ್ತದೆ. ಅದರಲ್ಲೂ ಕಳೆದ ನಾಲ್ಕು ವರ್ಷಗಳಿಂದ ಆಗಸ್ಟ್ ತಿಂಗಳಲ್ಲಿ ಕಾವೇರಿ ನದಿ ಉಕ್ಕಿ ಹರಿದು ಪ್ರವಾಹ ಸೃಷ್ಟಿಯಾಗಿತ್ತು. ಆದರೆ ಈ ಬಾರಿ ಕಳೆದ 50 ರಿಂದ 60 ವರ್ಷಗಳಲ್ಲೇ ಎಂದೂ ನೋಡಿರದಷ್ಟು ಪ್ರಮಾಣದಲ್ಲಿ ಕಾವೇರಿ ನದಿ ಬತ್ತಿ ಹೋಗಿದೆ. ಅಷ್ಟೇ ಅಲ್ಲದೇ ಕಾವೇರಿ ಉಗಮ ಸ್ಥಾನ ತಲಕಾವೇರಿಯ (Talacauvery) ಸನಿಹದ ಭಾಗಮಂಡಲದ (Bhagamandala) ತ್ರಿವೇಣಿ ಸಂಗಮದಲ್ಲಿಯೂ ಕಾವೇರಿ ಒಡಲು ಬತ್ತಿ ಹೋಗಿರುವುದರಿಂದ ಪುಣ್ಯ ಕ್ಷೇತ್ರ ಭಗಂಡೇಶ್ವರ ಹಾಗೂ ತಲಕಾವೇರಿಗೆ ತೆರಳುವ ಭಕ್ತರ ಸ್ನಾನಕ್ಕೆ ಮತ್ತು ಪಿಂಡ ಪ್ರದಾನಕ್ಕೂ ನೀರು ಇಲ್ಲದೇ ಪರದಾಟ ನಡೆಸುವಂತಹ ಪರಿಸ್ಥಿತಿ ಎದುರಾಗಿದೆ‌.  ಇದನ್ನೂ ಓದಿ: ಕುತೂಹಲ ಘಟ್ಟದಲ್ಲಿ ರಾಜ್ಯಸಭಾ ಚುನಾವಣೆ – ನಂಬರ್‌ ಗೇಮ್‌ ಹೇಗಿದೆ? ಕಾಂಗ್ರೆಸ್‌, ದೋಸ್ತಿಗಳ ಲೆಕ್ಕಾಚಾರ ಏನು?

No drinking water left even at the birthplace of Cauvery Water level depletes in Triveni Sangama 1

ತ್ರಿವೇಣಿ ಸಂಗಮದಲ್ಲಿ ಕಾವೇರಿ ನದಿಯ ನೀರು ಅಲ್ಲಲ್ಲೇ ತಗ್ಗು ಪ್ರದೇಶಗಳಲ್ಲಿ ಮಾತ್ರವೇ ಸಣ್ಣ ಪ್ರಮಾಣದಲ್ಲಿ ಹರಿಯುತ್ತಿರುವುದನ್ನು ಬಿಟ್ಟರೆ ಉಳಿದೆಡೆ ನದಿಯ ಒಡಲು ಬರಿದಾಗಿದೆ. ಸಾಕಷ್ಟು ಕಡೆಗಳಲ್ಲಿ ಮರಳು ಕಾಣುತ್ತಿವೆ. ಭಾಗಮಂಡಲದ ಸಾರ್ವಜನಿಕರು ಬಾವಿಗಳು ಇರುವಂತಹ ಮನೆಗಳಿಗೆ ತೆರಳಿ ನೀರು ತರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೆ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಭಾಗಮಂಡಲ ಪಂಚಾಯತ್‌ ವ್ಯವಸ್ಥೆ ಮಾಡಿದೆ. ನಗರ ಪ್ರದೇಶದಲ್ಲಿ ಕಾಣುತ್ತಿದ್ದ ನೀರಿನ ಟ್ಯಾಂಕರ್‌ಗಳು ಈಗ ಕಾವೇರಿ ಮಡಿಲಿನಲ್ಲೇ ಕಾಣುತ್ತಿದ್ದು ಜಿಲ್ಲೆಯ ಜನತೆ ಆತಂಕಗೊಂಡಿದ್ದಾರೆ. ಇದನ್ನೂ ಓದಿ: ನೀಲಗಿರಿ ತೋಪಿನಲ್ಲಿ ಬಿ.ಟೆಕ್ ವಿದ್ಯಾರ್ಥಿಯ ಬರ್ಬರ ಹತ್ಯೆ – ಸುಟ್ಟು ಹಾಕಿರುವ ಸ್ಥಿತಿಯಲ್ಲಿ ಶವ ಪತ್ತೆ

ಸಾಧಾರಣವಾಗಿ ಏಪ್ರಿಲ್‌ ಕೊನೆ, ಮೇ ತಿಂಗಳಿನಲ್ಲಿ ನೀರಿಗೆ ಸಮಸ್ಯೆಯಾಗುವುದು ಸಹಜ ಆದರೆ ಈ ಬಾರಿ ಬೇಸಿಗೆ ಆರಂಭಕ್ಕೆ ಮೊದಲೇ ಭಾಗಮಂಡಲದಲ್ಲಿ ನೀರು ಬತ್ತಿ ಹೋಗಿದೆ. ಒಂದು ವೇಳೆ ಮಳೆ ಸುರಿದರೆ ಸ್ವಲ್ಪ ನೀರಿನ ಸಮಸ್ಯೆ ಸುಧಾರಣೆಯಾಗಬಹುದು. ಇಲ್ಲದಿದ್ದರೆ ಜನತೆಗೆ ಕಷ್ಟ ಕಟ್ಟಿಟ್ಟ ಬುತ್ತಿ.

Share This Article