ಬೀಜಿಂಗ್: ವಿಶ್ವದ ದೊಡ್ಡ ರಾಷ್ಟ್ರಗಳಾದ ಅಮೆರಿಕ ಮತ್ತು ಚೀನಾ (America – China) ನಡುವೆ ನಿರಂತರ ಸಂಘರ್ಷ ನಡೆಯುತ್ತಿರುತ್ತದೆ. ಈ ಹೊತ್ತಿನಲ್ಲಿ 5 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ (Antony Blinken) ಚೀನಾಗೆ ಭೇಟಿ ನೀಡಿರುವುದು ಕುತೂಹಲ ಮೂಡಿಸಿದೆ.
ನವೆಂಬರ್‌ನಲ್ಲಿ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಪರಸ್ಪರ ಹಸ್ತಲಾಘವದ ಮೂಲಕ ಶುಭಾಶಯ ಕೋರಿದ್ದರು. ಬೈಡನ್ ಯುಎಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಅದು ಅವರ ಮೊದಲ ಅಧಿಕೃತ ಸಭೆಯಾಗಿತ್ತು. ಇದನ್ನೂ ಓದಿ: ಪಾನಮತ್ತ ಯುವತಿಯನ್ನ ಫ್ಲ್ಯಾಟ್‌ಗೆ ಹೊತ್ತೊಯ್ದು ಅತ್ಯಾಚಾರ – ಭಾರತ ಮೂಲದ ವಿದ್ಯಾರ್ಥಿಗೆ ಬ್ರಿಟನ್‌ನಲ್ಲಿ 6 ವರ್ಷ ಜೈಲು
ಈ ಸೌಹಾರ್ದಯುತ ಶೃಂಗಸಭೆಯ ಫಲವಾಗಿ ಬ್ಲಿಂಕೆನ್ ನಾಲ್ಕು ತಿಂಗಳ ಹಿಂದೆ ಚೀನಾಕ್ಕೆ ಭೇಟಿ ನೀಡಬೇಕಿತ್ತು. ಆದರೆ ಅಮೆರಿಕದ ವಾಯುಗಡಿಯ ಅಟ್ಲಾಂಟಿಕಾ ಸಮುದ್ರ ವ್ಯಾಪ್ತಿಯಲ್ಲಿ ಹಾರಾಟ ನಡೆಸುತ್ತಿದ್ದ, ಚೀನಾದ ಶಂಕಿತ ಕಣ್ಗಾವಲು ಬಲೂನ್ ಅನ್ನು ಅಮೆರಿಕ ಸೇನೆಯು ಹೊಡೆದುರುಳಿಸಿತ್ತು. ಇದರಿಂದ ಎರಡೂ ದೇಶಗಳ ನಡುವೆ ಮತ್ತಷ್ಟು ಉದ್ವಿಘ್ನತೆ ಉಂಟಾಯಿತು. ಹೀಗಾಗಿ ಬ್ಲಿಂಕೆನ್ ತಮ್ಮ ಪ್ರವಾಸವನ್ನು ಮುಂದೂಡಬೇಕಾಯಿತು.
ಈಗ ಬ್ಲಿಂಕನ್ ಚೀನಾಗೆ 2 ದಿನಗಳ ಪ್ರವಾಸ ಕೈಗೊಂಡಿದ್ದಾರೆ. ʼಎರಡೂ ದೇಶಗಳ ನಡುವಿನ ತಪ್ಪಾದ ಲೆಕ್ಕಾಚಾರಗಳನ್ನು ಸರಿ ಮಾಡುವ ಮಾರ್ಗಗಳನ್ನು ಕಂಡುಕೊಳ್ಳಲು ಹಾಗೂ ನಮ್ಮ ಉತ್ತಮ ಸಂಬಂಧವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಲು ಪ್ರಯತ್ನಿಸುವುದಾಗಿʼ ಬ್ಲಿಂಕೆನ್ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತೀಯ ಸೇನೆಗಾಗಿ ಮಹಿಂದ್ರಾ ಗ್ರೂಪ್‍ನಿಂದ ನೂತನ ಶಸ್ತ್ರಸಜ್ಜಿತ ವಾಹನ ನಿರ್ಮಾಣ
ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್‌ಬಿನ್, ಚೀನಾದ ಪ್ರಮುಖ ಕಾಳಜಿಗಳನ್ನು ಯುಎಸ್ ಗೌರವಿಸಬೇಕು. ಬೀಜಿಂಗ್‌ನೊಂದಿಗೆ ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಬ್ಲಿಂಕನ್ ಭೇಟಿಗೂ ಮುನ್ನ ಪ್ರತಿಕ್ರಿಯಿಸಿದ್ದಾರೆ.
ಚೀನಾ ಮತ್ತು ಯುಎಸ್ ಪರಸ್ಪರ ಗೌರವ, ಸಮಾನತೆಯ ಆಧಾರದ ಮೇಲೆ ಸಂಬಂಧಗಳನ್ನು ಬೆಳೆಸಿಕೊಳ್ಳಬೇಕು. ಇತಿಹಾಸ, ಸಂಸ್ಕೃತಿ, ಸಾಮಾಜಿಕ ವ್ಯವಸ್ಥೆ ಮತ್ತು ಅಭಿವೃದ್ಧಿಯಲ್ಲಿ ತಮ್ಮ ವ್ಯತ್ಯಾಸವನ್ನು ಗೌರವಿಸಬೇಕು ಎಂದು ವೆನ್‌ಬಿನ್ ಹೇಳಿದ್ದಾರೆ.
ತೈವಾನ್‌ನೊಂದಿಗೆ ಬಾಂಧವ್ಯ, ಉಕ್ರೇನ್-ರಷ್ಯಾ ಸಂಘರ್ಷ ಸೇರಿ ಅನೇಕ ವಿಚಾರಗಳಲ್ಲಿ ಉಭಯ ರಾಷ್ಟ್ರಗಳು ಪರಸ್ಪರ ಭಿನ್ನಾಭಿಪ್ರಾಯ ಹೊಂದಿವೆ. ಈ ನಡುವೆ ಅಮೆರಿಕದ ರಾಜ್ಯ ಕಾರ್ಯದರ್ಶಿ ಭೇಟಿಯು ಎರಡು ರಾಷ್ಟ್ರಗಳಲ್ಲೂ ಅನೇಕ ನಿರೀಕ್ಷೆ ಹುಟ್ಟುಹಾಕಿದೆ.