ಉಡುಪಿ: ಮಲ್ಪೆಯಿಂದ ಹೊರಟ ಮೀನುಗಾರಿಕಾ ಬೋಟ್ ನಾಪತ್ತೆಯಾಗಿ 25 ದಿನಗಳೇ ಕಳೆದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಹುಡುಕಾಟ ನಡೆಸಿದರೂ ರಿಸಲ್ಟ್ ಬಂದಿಲ್ಲ. ಹೀಗಾಗಿ ಕಾದು-ಕಾದು ಸುಸ್ತಾದ ಕರಾವಳಿ ಮೂರು ಜಿಲ್ಲೆಯ ಸುಮಾರು 50 ಸಾವಿರ ಮೀನುಗಾರರು ರಾಷ್ಟ್ರೀಯ ಹೆದ್ದಾರಿಯನ್ನು ನಾಲ್ಕು ಗಂಟೆ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಕರಾವಳಿ ಜಿಲ್ಲೆ ಉಡುಪಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಮೀನುಗಾರರು ಇಷ್ಟು ಸಂಖ್ಯೆಯಲ್ಲಿ ಬೀದಿಗಿಳಿದಿದ್ದರು. ಡಿಸೆಂಬರ್ 13ರಂದು ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ ಸುವರ್ಣ ತ್ರಿಭುಜ ಬೋಟ್ ಇನ್ನೂ ಪತ್ತೆಯಾಗಿಲ್ಲ. ಬೋಟ್ ನಲ್ಲಿದ್ದ 7 ಮೀನುಗಾರರ ಸುಳಿವೂ ಇಲ್ಲ. ನೌಕಾಸೇನೆ- ವಾಯುಸೇನೆ- ಪೊಲೀಸರು- ಕೋಸ್ಟ್ ಗಾರ್ಡ್ , ಮೀನುಗಾರರು ಎಷ್ಟು ಹುಡುಕಾಟ ನಡೆಸಿದರೂ ಪತ್ತೆ ಕಾರ್ಯ ಆಗಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಮೀನುಗಾರರು ಬೃಹತ್ ಜನಜಾಥಾ ಮಾಡಿದರು. ಸುಮಾರು 50 ಸಾವಿರ ಮೀನುಗಾರರು ಬೀದಿಗಿಳಿದು ಅಸಮಾಧಾನ ವ್ಯಕ್ತಗೊಳಿಸಿದರು. ಮಲ್ಪೆಯಿಂದ ಉಡುಪಿಯ ಅಂಬಲ್ಪಾಡಿಯವರೆಗೆ ಸುಮಾರು 8 ಕಿಲೋಮೀಟರ್ ಪಾದಯಾತ್ರೆ ಮಾಡಿ ಎರಡು ಹೈವೇಗಳನ್ನು ತಡೆದರು. ಇದನ್ನೂ ಓದಿ: ಕಸುಬಿಗಾಗಿ ಕಡಲಿಗಿಳಿದವರು 17 ದಿನದಿಂದ ಕಣ್ಮರೆ- ಇದು ಮಿಸ್ಸಿಂಗ್ ಸೆವೆನ್ ಮಿಸ್ಟರಿ
Advertisement
Advertisement
ಆಳಸಮುದ್ರ ಮೀನುಗಾರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ಮಾತನಾಡಿ, ನಮ್ಮ ನೋವನ್ನು ಇಂದು ವ್ಯಕ್ತ ಮಾಡಿದ್ದೇವೆ. ಸರ್ಕಾರ ಬಗ್ಗದಿದ್ದರೆ ಆಲ್ ಇಂಡಿಯಾ ಫಿಶರ್ ಮೆನ್ ಅಸೋಸಿಯೇಶನ್ ಸಂಪರ್ಕಿಸುವುದಾಗಿ ಎಚ್ಚರಿಕೆ ನೀಡಿದರು.
Advertisement
ಪ್ರತಿಭಟನೆ ಹಿನ್ನೆಲೆಯಲ್ಲಿ ಮಲ್ಪೆ ಮೀನುಗಾರಿಕಾ ಬಂದರು ಸಂಪೂರ್ಣ ಸ್ತಬ್ಧವಾಗಿತ್ತು. ಉಡುಪಿಯ ಸುಮಾರು 2 ಸಾವಿರ ಆಳಸಮುದ್ರದ ಬೋಟುಗಳು ಲಂಗರು ಹಾಕಿದ್ದವು. ನಾಡದೋಣಿಗಳು ಕಡಲಿಗಿಳಿಯಲಿಲ್ಲ. ಮಲ್ಪೆ ವ್ಯಾಪ್ತಿಯ ಎಲ್ಲಾ ಅಂಗಡಿಗಳು ಇಂದು ಬಾಗಿಲು ತೆಗೆಯಲೇ ಇಲ್ಲ. ಮೀನುಗಾರರ ಪಾದಯಾತ್ರೆಗೆ ಮಲ್ಪೆ- ತೀರ್ಥಹಳ್ಳಿ ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವೇ ಇರಲಿಲ್ಲ. ಜನಪ್ರತಿನಿಧಿಗಳ ಬಗ್ಗೆ ಆಕ್ರೋಶ ಇದ್ದರೂ ಉಡುಪಿ-ದಕ್ಷಿಣ ಕನ್ನಡದ ಬಿಜೆಪಿ ಶಾಸಕರು, ಮಾಜಿ ಸಚಿವರು, ಸಂಸದೆ ಶೋಭಾ ಕರಂದ್ಲಾಜೆ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಇದನ್ನೂ ಓದಿ: ಕಡಲ ಮಕ್ಕಳಲ್ಲಿ ಭಯಬೇಡ, 7 ಮೀನುಗಾರರು ಜೀವಂತ ಬರುತ್ತಾರೆ: ಸಚಿವೆ ಜಯಮಾಲಾ
Advertisement
ಪ್ರತಿಭಟನೆಯ ಕೊನೆಗೆ ಆಗಮಿಸಿ ಮನವಿ ಸ್ವೀಕರಿಸಿದ ಉಸ್ತುವಾರಿ ಸಚಿವೆ ಜಯಮಾಲಾ ಅವರ ಮಾತಿಗೆ ಮೀನುಗಾರರು ಆಕ್ರೋಶಗೊಂಡರು. ರೈತರಿಗಿಂತ ಹೆಚ್ಚು ಪರಿಹಾರ ಮೊಗವೀರರಿಗೆ ಸಿದ್ದರಾಮಯ್ಯ ಸರ್ಕಾರ ಕೊಟ್ಟಿದೆ ಎಂದಾಗ ಆಕ್ಷೇಪ ವ್ಯಕ್ತಪಡಿಸಿದರು. ಪರಿಹಾರ ಬೇಡ, ಏಳು ಮೀನುಗಾರರನ್ನು ಹುಡುಕಿಕೊಡಿ ಎಂದು ಒತ್ತಡ ಹಾಕಿದರು.
ಸುಮಾರು ನಾಲ್ಕು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ ತಡೆ ಮಾಡಿದ್ದರಿಂದ ಪೊಲೀಸರು ಡೈವರ್ಶನ್ ಗೆ ಹರಸಾಹಸಪಟ್ಟರು. ಕೆಎಸ್‍ಆರ್ ಪಿ, ಡಿಎಆರ್, ಕ್ಷಿಪ್ರ ಕಾರ್ಯಾಚರಣಾ ತುಕಡಿ, ಡ್ರೋನ್ ಕ್ಯಾಮೆರಾ ಬಳಸಿ ಪರಿಸ್ಥಿತಿ ಕೈಮೀರದಂತೆ ಎಚ್ಚರ ವಹಿಸಿರುವದಾಗಿ ಎಸ್ ಪಿ ಲಕ್ಷ್ಮಣ ನಿಂಬರ್ಗಿ ಹೇಳಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ಮತ್ತಷ್ಟು ಶ್ರಮವಹಿಸಿ ಕಣ್ಮರೆಯಾದವರ ಹುಡುಕಾಟ ನಡೆಸದಿದ್ದರೆ ರಾಷ್ಟ್ರಮಟ್ಟದಲ್ಲಿ ಹೋರಾಟ ಮಾಡುವುದಾಗಿ ಮೀನುಗಾರರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ನಾಪತ್ತೆಯಾದ ಮೀನುಗಾರರ ಬಗ್ಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿಲ್ಲ- ಶೋಭಾ ಕರಂದ್ಲಾಜೆ ಗಂಭೀರ ಆರೋಪ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv