Connect with us

Latest

ನಾಪತ್ತೆಯಾದ ಮೀನುಗಾರರ ಬಗ್ಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿಲ್ಲ- ಶೋಭಾ ಕರಂದ್ಲಾಜೆ ಗಂಭೀರ ಆರೋಪ

Published

on

ನವದೆಹಲಿ: ಉಡುಪಿಯಿಂದ ಸುವರ್ಣ ತ್ರಿಭುಜ ಅನ್ನೋ ದೋಣಿ 2018ರ ಡಿ.13ರಿಂದ ಉಡುಪಿಯಿಂದ ಹೊರಟಿದ್ದು, ನಾಪತ್ತೆಯಾಗಿದೆ. ಇದೂವರೆಗೂ ದೋಣಿಯ ಕುರಿತು ಯಾವುದೇ ಸುಳಿವು ಸಿಕ್ಕಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಕ್ರಮಕೈಗೊಳ್ಳಲು ಮುಂದಾಗಿಲ್ಲ ಅಂತ ಸಂಸದೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೀನುಗಾರರು ಮೀನು ಹಿಡಿಯಲು ಹೋಗುವ ಸಂದರ್ಭದಲ್ಲಿ 8-10 ದೋಣಿಗಳು ಒಟ್ಟಿಗೆ ಸಾಗುತ್ತವೆ. 15ನೇ ತಾರೀಕಿನಂದು ರಾತ್ರಿ 1 ಗಂಟೆಯವರೆಗೆ ಈ ಎಲ್ಲಾ ದೋಣಿಗಳಲ್ಲಿದ್ದ ಮೀನುಗಾರರು ಪರಸ್ಪರ ಸಂಪರ್ಕದಲ್ಲಿದ್ದರು. ಮಹಾರಾಷ್ಟ್ರದ ಸಿಂಧುದುರ್ಗದಿಂದ ಕೊನೆಯ ವಯರ್ ಲೆಸ್ ಮೆಸೇಜ್ ಮತ್ತು ಮೊಬೈಲ್ ಮೆಸೇಜ್ ಸುವರ್ಣ ತ್ರಿಭುಜ ಅನ್ನೋ ದೋಣಿಯಲ್ಲಿದ್ದ ಮೀನುಗಾರರಿಂದಲೂ ಮೆಸೇಜ್ ಗಳು ಬಂದಿತ್ತು. ಅದರಲ್ಲಿ 7 ಮೀನುಗಾರರಿದ್ದರು. ಅದಾದ ಬಳಿಕ ಇದುವರೆಗೂ ಮೀನುಗಾರರ ದೋಣಿ ನಾಪತ್ತೆಯಾಗಿದೆ. ಎಲ್ಲಿದೆ ಅನ್ನೋದು ಇನ್ನೂ ತಿಳಿದುಬಂದಿಲ್ಲ ಅಂದ್ರು.

ಕೋಸ್ಟಲ್ ಗಾರ್ಡ್ ಅವರಲ್ಲಿ ವಿನಂತಿ ಮಾಡಿಕೊಂಡ ಬಳಿಕ ಕರಾವಳಿಯ ಎಲ್ಲಾ ಪ್ರದೇಶದಲ್ಲಿಯೂ ಹುಡುಕಾಡಿದ್ದಾರೆ. ಸಾಮಾನ್ಯವಾಗಿ ದೋಣಿ ಮುಳುಗಡೆಯಾದ್ರೆ ಅದರ ಡೀಸೆಲ್ ನೀರಿನಲ್ಲಿ ತೇಲುತ್ತದೆ. ಅಲ್ಲದೇ ಮೀನುಗಾರಿಕೆಗೆ ಬೇಕಾದ ಪ್ಲಾಸ್ಟಿಕ್ ಡಬ್ಬಗಳು ತೇಲುತ್ತವೆ. ಆದ್ರೆ ಆ ರೀತಿಯ ಯಾವುದೇ ಕುರುಹುಗಳು ಕಾಣಿಸುತ್ತಿಲ್ಲ ಅಂತ ಮೀನುಗಾರರು ಹೇಳುತ್ತಿದ್ದಾರೆ.

ಈ 7 ಜನ ಮೀನುಗಾರರ ಕುಟುಂಬ ಇಂದು ತುಂಬಾ ನೊಂದಿದ್ದು, ದುಃಖದಲ್ಲಿದ್ದಾರೆ. ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿಗಳಿಗೆ, ಮಹಾರಾಷ್ಟ್ರ ಸರ್ಕಾರದ ಗೃಹಸಚಿವ, ಡಿಜಿ, ನಿತಿನ್ ಗಡ್ಕರಿ, ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್ ಇವರಿಗೆ ಎಲ್ಲಾ ವಿಚಾರಗಳನ್ನು ಈಗಾಗಲೇ ತಿಳಿಸಿದ್ದೇವೆ. ಪತ್ರನೂ ಬರೆದಿದ್ದೇನೆ ಅಂದ್ರು.

ಕರ್ನಾಟಕ ರಾಜ್ಯ ಸರ್ಕಾರ ಮೀನುಗಾರಿಕಾ ಇಲಾಖೆ ಯಾವ ಕ್ರಮವನ್ನು ಕೈಗೊಳ್ಳಬೇಕಾಗಿತ್ತೋ ಅದನ್ನು ಇಂದಿನವರೆಗೆ ತೆಗೆದುಕೊಂಡಿಲ್ಲ. ಸಹಜವಾಗಿ ನಾವು ಒಬ್ಬರು ತೀರಿಕೊಂಡರೆ ಆತಂಕ ಪಡುತ್ತೇವೆ. ಆದ್ರೆ 7 ಜನ ನಾಪತ್ತೆಯಾದ್ರೂ ಕೂಡ ಇಂದಿನವರೆಗೆ ಯಾವುದೇ ರೀತಿಯ ಕ್ರಮವನ್ನು ಸರ್ಕಾರ ಕೈಗೊಂಡಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ರು.

ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ನಾನು ಮಾತನಾಡಿದ ಬಳಿಕ ಮಹಾರಾಷ್ಟ್ರ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ. ಈ ಒಂದು ಪತ್ರದ ಹೊರತಾಗಿ ಮೀನುಗಾರರನ್ನು ಹುಡುಕೋದ್ರಲ್ಲಿ ಯಾವುದೇ ರೀತಿಯ ಪ್ರಯತ್ನಗಳು ಕಾಣಿಸುತ್ತಿಲ್ಲ ಅಂತ ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಇದನ್ನೂ ಓದಿ: ಕಸುಬಿಗಾಗಿ ಕಡಲಿಗಿಳಿದವರು 17 ದಿನದಿಂದ ಕಣ್ಮರೆ- ಇದು ಮಿಸ್ಸಿಂಗ್ ಸೆವೆನ್ ಮಿಸ್ಟರಿ

ಉಡುಪಿಯ ಮಲ್ಪೆಯಲ್ಲಿರುವ ಮೀನುಗಾರರ ಜೊತೆ ಇತ್ತೀಚೆಗೆ ಮಾತುಕತೆ ನಡೆಸಿದಾಗ ಅವರು, ಈ ಹಿಂದೆ ಕೂಡ ಸಿಂಧುದುರ್ಗದಿಂದ ನಮ್ಮ ದೋಣಿಯನ್ನು ತಗೊಂಡೋಗಲಾಗಿತ್ತು. ಬಳಿಕ ಅವರನ್ನು ಒತ್ತೆಯಾಳಗಿರಿಸಿಕೊಳ್ಳಲಾಗಿತ್ತು. ಈ ಕಾರಣದಿಂದ ಇಂದು ಈ ದೋಣಿ ಕೂಡ ಮುಳುಗಡೆ ಆಗಿಲ್ಲ ಅಂತಂದ್ರೆ ಎಲ್ಲಿ ಹೋಯಿತು ಅನ್ನೋ ಪ್ರಶ್ನೆ ಅವರಲ್ಲಿ ಮೂಡಿದೆ. ಯಾರು ಅವರನ್ನು ಹಿಡಿದಿಟ್ಟುಕೊಂಡಿದ್ದಾರೆ. ಯಾರು ಅವರನ್ನು ಒತ್ತೆಯಾಳಾಗಿರಸಿಕೊಂಡಿದ್ದಾರೆ. ಯಾವುದಾದರೂ ಡ್ರಗ್ ಮಾಫಿಯಾದ ಕೈವಾಡವಿದೆಯಾ ಅನ್ನೋವಂತದ್ದನ್ನು ಪತ್ತೆ ಹಚ್ಚುವ ದೊಡ್ಡ ಜವಾಬ್ದಾರಿ ಇದೆ. ಹೀಗಾಗಿ ರಾಜ್ಯ ಸರ್ಕಾರ ಮುತುವರ್ಜಿವಹಿಸಿ ಕ್ರಮ ಕೈಗೊಳ್ಳಬೇಕು ಅಂತ ಅವರು ಆಗ್ರಹಿಸಿದ್ರು. ಇದನ್ನೂ ಓದಿ: ಕಡಲಿನಿಂದ್ಲೇ ಅಪಹರಣ ಮಾಡಿದ್ರಾ ಉಗ್ರರು!

ಇಂದು ಕೇವಲ ಒಂದು ದೋಣಿಯ ಪ್ರಶ್ನೆಯಲ್ಲ. ಇಡೀ ಉಡುಪಿ ಜಿಲ್ಲೆಯ, ಉತ್ತರ ಕನ್ನಡ ಹಾಗೂ ದಕ್ಷಿಣ ಕ್ನನಡದ ವಿಚಾರವಾಗಿದೆ. ಇಲ್ಲಿ ಮೀನುಗಾರಿಕೆ ಕಳೆದ 10 ದಿನಗಳಿಂದ ಬಂದ್ ಆಗಿದೆ. ಯಾಕಂದ್ರೆ ಎಲ್ಲರೂ ಪ್ರತಿಭಟನೆಯಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ ಕರ್ನಾಟಕ ಸರ್ಕಾರ ತಕ್ಷಣ ಗೋವಾ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಜೊತೆ ಸಿಎಂ ಎಚ್ ಡಿ ಕುಮಾರಸ್ವಾಮಿಯವರು ಮಾತನಾಡಬೇಕು. ಕೇಂದ್ರ ಸರ್ಕಾರದ ಸಹಾಯವನ್ನೂ ಕೂಡ ಪಡೆದುಕೊಂಡು ತಕ್ಷಣ ಮೀನುಗಾರರನ್ನು ಹಾಗೂ ದೋಣಿಯನ್ನು ಹುಡುಕುವ ಕೆಲಸವನ್ನು ಮಾಡಬೇಕು ಅಂತ ಅವರು ಒತ್ತಾಯಿಸಿದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv