ನವದೆಹಲಿ: ಹೆರಿಗೆ ಸಮಯದಲ್ಲಿ ಅಥವಾ ಮಗು ಹುಟ್ಟಿದ ನಂತರ ಮಗು ಮರಣ ಹೊಂದಿದರೆ ಕೇಂದ್ರ ಸರ್ಕಾರದ ಮಹಿಳಾ ನೌಕರರು 60 ದಿನಗಳ ಕಾಲ ವಿಶೇಷ ಹೆರಿಗೆ ರಜೆಗೆ ಅರ್ಹರಾಗಿರುತ್ತಾರೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಆದೇಶ ಹೊರಡಿಸಿದೆ.
ಹೆರಿಗೆಯ ನಂತರ ಮಗುವಿನ ಮರಣದ ಸಂದರ್ಭದಲ್ಲಿ ರಜೆ ಮಾತೃತ್ವ ರಜೆ ಮಂಜೂರು ಮಾಡುವ ಕುರಿತಾಗಿ ಹಲವು ಪ್ರಶ್ನೆಗಳು ಸಿಬ್ಬಂದಿಗಳಿಂದ ಬಂದಿತ್ತು. ಹಾಗಾಗಿ ಸರ್ಕಾರಿ ಮಹಿಳಾ ನೌಕರಿಗೆ ಅನ್ವಯವಾಗುವಂತೆ ಮಗುವಿನ ಮರಣದ ಕಾರಣದಿಂದ ಉಂಟಾಗುವ ಸಂಭಾವ್ಯ ಭಾವನಾತ್ಮಕ ಆಘಾತವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಡಿಒಪಿಟಿ ಆದೇಶದಲ್ಲಿ ತಿಳಿಸಿದೆ. ಇದನ್ನೂ ಓದಿ: KGF ಸಿನಿಮಾ ಸ್ಫೂರ್ತಿ – ದಿಢೀರ್ ಫೇಮಸ್ ಆಗಲು ನಾಲ್ವರನ್ನು ಚಚ್ಚಿಕೊಂದ ಯುವಕ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದೊಂದಿಗೆ ಸಮಾಲೋಚಿಸಿ ಈ ನಿರ್ಧಾರಕ್ಕೆ ಬರಲಾಗಿದೆ. ವಿಶೇಷ ಹೆರಿಗೆ ರಜೆಯ ಪ್ರಯೋಜನವು ಎರಡಕ್ಕಿಂತ ಕಡಿಮೆ ಮಕ್ಕಳನ್ನು ಹೊಂದಿರುವ ಮಹಿಳಾ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಮಾತ್ರ ದೊರಕುತ್ತದೆ. ಇದಲ್ಲದೆ ಅಧಿಕೃತ ಆಸ್ಪತ್ರೆಯಲ್ಲಿ ಮಗುವಿನ ಹೆರಿಗೆಗೆ ಮಾತ್ರ ರಜೆ ಸ್ವೀಕಾರಾರ್ಹವಾಗಿರುತ್ತದೆ ಎಂದು ಸ್ಪಷ್ಟಪಡಿಸಿದೆ.
ಈ ಆದೇಶಗಳು ಕೇಂದ್ರ ನಾಗರಿಕ ಸೇವೆಗಳ ರಜೆ ನಿಯಮಗಳು 1972ರ ನಿಯಮ 2ರ ಪ್ರಕಾರ ಭಾರತದ ಒಕ್ಕೂಟದ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಾಗರಿಕ ಸೇವೆಗಳು ಮತ್ತು ಹುದ್ದೆಗಳಿಗೆ ನೇಮಕಗೊಂಡ ಸರ್ಕಾರಿ ನೌಕರರಿಗೆ ಈ ಆದೇಶ ಬಿಡುಗಡೆಯ ದಿನಾಂಕದಿಂದ ಜಾರಿಗೆ ಬರುತ್ತದೆ ಎಂದು ತಿಳಿಸಿದೆ. ಇದನ್ನೂ ಓದಿ: ಅಂತರ್ಜಾತಿ ವಿವಾಹ – ದಲಿತನೆಂದು ಅಳಿಯನನ್ನೇ ಕೊಂದ ಅತ್ತೆ