ಕುಮಾವೂನ್: ಉತ್ತರಾಖಂಡದಲ್ಲಿ (Uttarakhand) ಮೇಘಸ್ಫೋಟದಿಂದ (Cloudbursts) ಭಾರೀ ಮಳೆಯಾಗುತ್ತಿದ್ದು, ಭೂಕುಸಿತದಿಂದ (Landslides) 5 ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 11 ಮಂದಿ ನಾಪತ್ತೆಯಾಗಿದ್ದಾರೆ.
ಉತ್ತರಾಖಂಡದ ವಿವಿಧ ಜಿಲ್ಲೆಗಳಲ್ಲಿ ಶುಕ್ರವಾರ ಮುಂಜಾನೆ ಭಾರೀ ಮಳೆಯಾಗಿದೆ. ಪರಿಣಾಮ ಭೂಕುಸಿತ ಸಂಭವಿಸಿ ಮನೆಗಳಿಗೆ ಹಾನಿಯಾಗಿದೆ. ಇದರಿಂದ ಹಲವರು ಅವಶೇಷಗಳಡಿಯಲ್ಲಿ ಸಮಾಧಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಭಾರೀ ಮಳೆ – ರಸ್ತೆಗಳಿಗೆ ನುಗ್ಗಿದ ನೀರು, ವಿಮಾನ ಕಾರ್ಯಾಚರಣೆಗೂ ಅಡ್ಡಿ
ರಾತ್ರಿಯಿಡೀ ಸುರಿದ ಅತಿಯಾದ ಮಳೆಯಿಂದ ಬಾಗೇಶ್ವರ ಜಿಲ್ಲೆಯ ಕಪ್‌ಕೋಟ್ ಪ್ರದೇಶದ ಪೌಸಾರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 6 ಮನೆಗಳು ಹಾನಿಗೊಳಗಾಗಿವೆ. ಇದರಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂವರು ಕಾಣೆಯಾಗಿದ್ದಾರೆ ಮತ್ತು ಒಬ್ಬರು ಗಾಯಗೊಂಡಿದ್ದಾರೆ ಎಂದು ಉತ್ತರಾಖಂಡ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಚಮೋಲಿ ಜಿಲ್ಲೆಯ ಮೊಪಾಟಾ ಗ್ರಾಮದಲ್ಲಿ ಭೂಕುಸಿತದಿಂದ ಒಂದು ಮನೆ ಮತ್ತು ದನದ ಕೊಟ್ಟಿಗೆ ಕುಸಿದು ಹೋಗಿದೆ. ಇದರಲ್ಲಿ ದಂಪತಿ ಸಾವನ್ನಪ್ಪಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ.
ರುದ್ರಪ್ರಯಾಗ ಜಿಲ್ಲೆಯ ಬಸುಕೆದಾರ್ ಪ್ರದೇಶದಲ್ಲಿ ನಿರಂತರ ಮಳೆ ಮತ್ತು ಭೂಕುಸಿತಗಳು 6ಕ್ಕೂ ಹೆಚ್ಚು ಗ್ರಾಮಗಳಲ್ಲಿ ಭಾರಿ ಹಾನಿ ಸಂಭವಿಸಿದೆ. ಈ ಪ್ರದೇಶದಲ್ಲಿ ಇಬ್ಬರು ಸಾವನ್ನಪ್ಪಿದ್ದು, 8 ಮಂದಿ ನಾಪತ್ತೆಯಾಗಿದ್ದಾರೆ. ಇನ್ನೂ ಡೆಹ್ರಾಡೂನ್‌ನ ಬಿಂದಾಲ್ ನದಿಯಲ್ಲಿ 10 ವರ್ಷದ ಬಾಲಕನ ಶವ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರೀ ಮಳೆ ಹಾಗೂ ಭೂಕುಸಿತದಿಂದ ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಬಂಧಿಸಲಾಗಿದೆ. ರುದ್ರಪ್ರಯಾಗ ಜಿಲ್ಲೆಯಲ್ಲೂ ಸಹ, ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯನ್ನು ಸಿರೋಬ್‌ಗಢದಲ್ಲಿ ಮುಚ್ಚಲಾಗಿದೆ. ಯಾತ್ರಿಕರು ರಸ್ತೆಯ ಬಗ್ಗೆ ಮಾಹಿತಿ ಪಡೆದ ಬಳಿಕ ಮಾತ್ರ ಪ್ರಯಾಣ ಆರಂಭಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಉತ್ತರಾಖಂಡದ ರುದ್ರಪ್ರಯಾಗ, ಚಮೋಲಿಯಲ್ಲಿ ಮೇಘಸ್ಫೋಟ – ಹಲವರು ನಾಪತ್ತೆ ಶಂಕೆ