ಜೈಪುರ: 2025ರಲ್ಲಿ ನೀಟ್ ಪರೀಕ್ಷೆಯಲ್ಲಿ (NEET Exam) ತೇರ್ಗಡೆಯಾಗಿದ್ದ ಒಂದೇ ಕುಟುಂಬದ ಐವರು ಈಗ ಪ್ರಶ್ನೆ ಪತ್ರಿಕೆ ಸೋರಿಕೆ ಸೋರಿಕೆ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.
ನೀಟ್ ಪರೀಕ್ಷೆ ತೇರ್ಗಡೆಯಾಗಿದ್ದ ಒಂದು ವರ್ಷದ ಬಳಿಕ ಹಗರಣದಲ್ಲಿ ದಿನೇಶ್ ಮತ್ತು ಆತನ ಸಹೋದರ ಮಂಗಿಲಾಲ್, ಸೋದರಳಿಯ ವಿಕಾಸ್‌ನನ್ನು ಬಂಧಿಸಲಾಗಿದೆ.
ಬಿವಾಲ್ ಕುಟುಂಬದವರು ನಿಜಕ್ಕೂ ಪರೀಕ್ಷೆಯಲ್ಲಿ ಪಾಸ್ ಆಗಿದ್ದರೇ ಅಥವಾ ವೈದ್ಯಕೀಯ ಕಾಲೇಜುಗಳಲ್ಲಿ ಸೀಟುಗಳನ್ನು ಪಡೆಯಲು ನೀಟ್ ಪತ್ರಿಕೆ ಸೋರಿಕೆ ಜಾಲವನ್ನು ಬಳಸಿದ್ದರೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಏಕೆಂದರೆ, ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲರೂ 10 ಮತ್ತು 12 ನೇ ತರಗತಿಯಲ್ಲಿ ಸರಾಸರಿ ಶ್ರೇಣಿಗಳನ್ನು ಗಳಿಸಿದ್ದಾರೆ. ಇದನ್ನೂ ಓದಿ: ಜೂನ್ 21ಕ್ಕೆ ನೀಟ್ ಯುಜಿ ಮರು ಪರೀಕ್ಷೆ
ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸವಾಯಿ ಮಾಧೋಪುರ್ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆದ ಮಂಗಿಲಾಲ್ ಅವರ ಮಗ ವಿಕಾಸ್, 10 ನೇ ತರಗತಿಯಲ್ಲಿ ಶೇ.63 ಮತ್ತು 12 ನೇ ತರಗತಿಯಲ್ಲಿ ಶೇ.55 ಅಂಕಗಳನ್ನು ಗಳಿಸಿದ್ದ. NEET 2024 ರಲ್ಲಿ, 720ಕ್ಕೆ ಕೇವಲ 270 ಅಂಕಗಳನ್ನು ಗಳಿಸಿದ್ದ. ಸಿಕಾರ್‌ನ ಕೋಚಿಂಗ್ ಸಂಸ್ಥೆಯಲ್ಲಿ ನಡೆದ 46 ಪರೀಕ್ಷೆಗಳಲ್ಲಿ ಆತನ ಸರಾಸರಿ ಅಂಕಗಳು 384 ಆಗಿತ್ತು. ಇದರ ಹೊರತಾಗಿಯೂ, NEET 2025 ರಲ್ಲಿ 85.11% ಅಂಕಗಳನ್ನು ಗಳಿಸಿದ್ದ. ದೌಸಾ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದ ಮಂಗಿಲಾಲ್ ಅವರ ಮಗಳು ಪ್ರಗತಿ, 10 ನೇ ತರಗತಿಯಲ್ಲಿ ಶೇ.69 ಮತ್ತು 12 ನೇ ತರಗತಿಯಲ್ಲಿ ಶೇ.91 ಅಂಕಗಳನ್ನು ಗಳಿಸಿದ್ದಳು. NEET 2024 ರಲ್ಲಿ 332 ಅಂಕಗಳನ್ನು ಗಳಿಸಿದ್ದಳು. ತರಬೇತಿ ಪರೀಕ್ಷೆಯಲ್ಲಿ ಆಕೆಯ ಸರಾಸರಿ 302 ರಷ್ಟಿತ್ತು. ಪ್ರಗತಿ NEET 2025 ರಲ್ಲಿ 89.08% ಅಂಕಗಳೊಂದಿಗೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದಳು.
ದಿನೇಶ್ ಮಗಳು ಗುಂಜನ್ 10 ನೇ ತರಗತಿಯಲ್ಲಿ ಶೇ.86 ಮತ್ತು 12 ನೇ ತರಗತಿಯಲ್ಲಿ ಶೇ.70 ಅಂಕಗಳನ್ನು ಗಳಿಸಿದ್ದಳು. NEET 2024 ರಲ್ಲಿ 355 ಅಂಕಗಳನ್ನು ಗಳಿಸಿದ್ದಳು. ತರಬೇತಿ ಪರೀಕ್ಷೆಯಲ್ಲಿ ಸರಾಸರಿ 320 ಮತ್ತು 342 ರ ನಡುವೆ ಇತ್ತು. ಆದಾಗ್ಯೂ, NEET-2025 ರಲ್ಲಿ ಆಕೆ ವಾರಣಾಸಿಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದಳು.
ಬಿವಾಲ್ ಅವರ ಮೂರನೇ ಸಹೋದರ ಘನಶ್ಯಾಮ್ ಪುತ್ರಿ ಸಾನಿಯಾ ಮುಂಬೈನ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದಾಳೆ. ಆಕೆ 10 ನೇ ತರಗತಿಯಲ್ಲಿ ಶೇ.63 ಮತ್ತು 12 ನೇ ತರಗತಿಯಲ್ಲಿ ಶೇ.89 ಅಂಕಗಳನ್ನು ಗಳಿಸಿದ್ದಳು. ಸಾನಿಯಾ NEET 2024 ರಲ್ಲಿ 360 ಅಂಕಗಳನ್ನು ಪಡೆದಿದ್ದಳು. NEET 2025 ರಲ್ಲಿ ಆಕೆ 94.07% ಅಂಕಗಳನ್ನು ಪಡೆದಳು. ಘನಶ್ಯಾಮ್ ಇನ್ನೊಬ್ಬ ಮಗಳು ಪಾಲಕ್, 10ನೇ ತರಗತಿಯಲ್ಲಿ ಶೇ.93 ಮತ್ತು 12 ನೇ ತರಗತಿಯಲ್ಲಿ ಶೇ.89 ಅಂಕಗಳನ್ನು ಗಳಿಸಿದ್ದಳು. NEET 2024 ರಲ್ಲಿ 512 ಅಂಕಗಳನ್ನು ಗಳಿಸಿದ್ದಳು. NEET 2025 ರಲ್ಲಿ, ಆಕೆ 98.61% ಅಂಕಗಳನ್ನು ಗಳಿಸಿ, ಜೈಪುರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶವನ್ನು ಪಡೆದಿದ್ದಳು.
ನೀಟ್ 2025 ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಬಗ್ಗೆ ಯಾವುದೇ ಅಧಿಕೃತ ವರದಿಗಳಿಲ್ಲ. ಆದರೆ, ಹಗರಣಕ್ಕೆ ಸಂಬಂಧಿಸಿದ ಹಲವಾರು ಹೇಳಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ. ಆದಾಗ್ಯೂ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮತ್ತು ಸೈಬರ್ ಏಜೆನ್ಸಿಗಳು ಈ ಹೇಳಿಕೆಗಳನ್ನು ಹಿಂದೆ ಸುಳ್ಳೆಂದು ತಳ್ಳಿಹಾಕಿದ್ದವು.

