ನವದೆಹಲಿ: ಭಾನುವಾರ ಮಧ್ಯಾಹ್ನ ದೆಹಲಿಯ ಸತ್ಯನಿಕೇತನದಲ್ಲಿ ಆರು ಅಂತಸ್ತಿನ ಕಟ್ಟಡ ಕುಸಿದು ಐವರು ಸಾವನ್ನಪ್ಪಿದ್ದಾರೆ. ಇಬ್ಬರು ಸ್ಥಿತಿ ಗಂಭೀರವಾಗಿದೆ.
ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಒಂಬತ್ತು ಜನರನ್ನು ರಕ್ಷಿಸಲಾಗಿದೆ. ಘಟನೆಯ ಬಗ್ಗೆ ದೆಹಲಿ ಸರ್ಕಾರ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಿದೆ.
ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ‘ದೆಹಲಿಯ ಸತ್ಯನಿಕೇತನದಲ್ಲಿ ಕಟ್ಟಡ ಕುಸಿತ ದುಃಖಕರವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಅಧಿಕಾರಿಗಳು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಪಘಾತದಲ್ಲಿ ಹಾನಿಗೊಳಗಾದವರಿಗೆ ಸಹಾಯ ಮಾಡುತ್ತಿದ್ದಾರೆʼ ಎಂದು ಪ್ರಧಾನಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
75 ಹಾಸಿಗೆಗಳ ಪೇಯಿಂಗ್ ಗೆಸ್ಟ್ ವಸತಿ ಸೌಕರ್ಯವಾಗಿದ್ದ ಕಟ್ಟಡ ಮಧ್ಯಾಹ್ನ 1:30 ರ ಸುಮಾರಿಗೆ ಕುಸಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಟ್ಟಡ ಕುಸಿದಾಗ ಕನಿಷ್ಠ 50 ವಿದ್ಯಾರ್ಥಿಗಳು ಒಳಗೆ ಇದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಕುಸಿದ ಕಟ್ಟಡವು ‘ಹಾಸ್ಟೆಲ್ ಡೇಜ್’ ಹೆಸರಿನ ಪುರುಷರ ಪಿಜಿ ಎಂದು ತಿಳಿದುಬಂದಿದೆ.
